ಸಾರಾಂಶ
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಗಳ ಬದಲಾವಣೆ ಕುರಿತು ಹೇಳಿಕೆ ನೀಡುವ ಪಕ್ಷದ ನಾಯಕರಿಗೆ ಶೀಘ್ರವೇ ಎಐಸಿಸಿಯೇ ನೇರವಾಗಿ ನೋಟಿಸ್ ನೀಡುವ ಸಾಧ್ಯತೆಯಿದೆ.
ಬೆಂಗಳೂರು : ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಗಳ ಬದಲಾವಣೆ ಕುರಿತು ಹೇಳಿಕೆ ನೀಡುವ ಪಕ್ಷದ ನಾಯಕರಿಗೆ ಶೀಘ್ರವೇ ಎಐಸಿಸಿಯೇ ನೇರವಾಗಿ ನೋಟಿಸ್ ನೀಡುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ರಚನೆ ಕುರಿತು ಸಚಿವರು ಹಾಗೂ ಶಾಸಕರು ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ ಬಳಿಕವೂ ಕೆಲವರು ಈ ಹೇಳಿಕೆ ಮುಂದುವರೆಸಿದ್ದರು.
ಹೀಗಾಗಿ ಎಐಸಿಸಿಯೇ ನೋಟಿಸ್ ನೀಡುವ ಸಾಧ್ಯತೆಯಿದೆ. ಪ್ರಭಾವಿ ಸಚಿವರು, ಹಿರಿಯ ಶಾಸಕರು ಹೇಳಿಕೆ ನೀಡಿರುವುದರಿಂದ ಕೆಪಿಸಿಸಿಯಿಂದ ನೋಟಿಸ್ ನೀಡುವ ಬದಲು ಎಐಸಿಸಿಯಿಂದಲೇ ನೋಟಿಸ್ ನೀಡಲು ನಿರ್ಧರಿಸಲಾಗಿದೆ. ಈ ಸಂಬಂಧ ಈಗಾಗಲೇ ಎಐಸಿಸಿ ಪದಾಧಿಕಾರಿಗಳು ಮಾಹಿತಿ ತರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.