ಸಾರಾಂಶ
ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಈ.ಸಿ.ನಿಂಗರಾಜ್‌ಗೌಡ ಹೆಸರನ್ನು ಬಿಜೆಪಿ ಪಕ್ಷದ ಅಧಿಕೃತವಾಗಿ ಘೋಷಿಸಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ನಮಗೆ ಬಿಟ್ಟುಕೊಡುವಂತೆ ಬಿಜೆಪಿ ನಾಯಕರ ಮೇಲೆ ಜೆಡಿಎಸ್ ವರಿಷ್ಠರು ಒತ್ತಡ ಹಾಕುತ್ತಿದ್ದಾರೆ.
ಮಂಡ್ಯ ಮಂಜುನಾಥ
ಮಂಡ್ಯ : ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗುವುದಕ್ಕೆ ಜೆಡಿಎಸ್‌ನಿಂದ ಕೆ.ಟಿ.ಶ್ರೀಕಂಠೇಗೌಡ ಹಾಗೂ ಬಿಜೆಪಿಯಿಂದ ಈ.ಸಿ.ನಿಂಗರಾಜ್‌ಗೌಡ ಬಿರುಸಿನ ಪೈಪೋಟಿ ನಡೆಸಿದ್ದಾರೆ. ಬಿಜೆಪಿಯಿಂದ ಅಧಿಕೃತವಾಗಿ ಘೋಷಣೆಯಾಗಿರುವ ಈ.ಸಿ.ನಿಂಗರಾಜ್‌ಗೌಡ ಹೆಸರನ್ನು ವಾಪಸ್ ಪಡೆಯುವಂತೆ ದಳಪತಿಗಳ ಮೇಲೆ ಶ್ರೀಕಂಠೇಗೌಡರು ಒತ್ತಡ ಹೇರುತ್ತಿದ್ದರೆ, ಘೋಷಣೆಯಾಗಿರುವ ಹೆಸರನ್ನು ಅಧಿಕೃತವಾಗಿ ಉಳಿಸಿಕೊಳ್ಳುವುದಕ್ಕೆ ಈ.ಸಿ.ನಿಂಗರಾಜ್‌ಗೌಡರು ಬಿಜೆಪಿ ನಾಯಕರ ಬೆನ್ನುಹತ್ತಿದ್ದಾರೆ.
ಇದುವರೆಗೂ ದಕ್ಷಿಣ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸಿಕೊಂಡು ಬರುತ್ತಿದ್ದ ಕೆ.ಟಿ.ಶ್ರೀಕಂಠೇಗೌಡರು ಇದೇ ಪ್ರಥಮ ಬಾರಿಗೆ ದಕ್ಷಿಣ ಶಿಕ್ಷಣ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ತೋರಿದ್ದಾರೆ. ಎರಡು ಬಾರಿಯಿಂದಲೂ ಮರಿತಿಬ್ಬೇಗೌಡರು ಜೆಡಿಎಸ್ ಪಕ್ಷದಿಂದ ಕ್ಷೇತ್ರವನ್ನು ಪ್ರತಿನಿಧಿಸಿ ಆಯ್ಕೆಯಾಗಿದ್ದರು. ಈಗ ಅವರು ಕಾಂಗ್ರೆಸ್ ಸೇರಿ ಆ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ತೆರವಾದ ಸ್ಥಾನಕ್ಕೆ ಕೆ.ಟಿ.ಶ್ರೀಕಂಠೇಗೌಡರು ಸ್ಪರ್ಧೆಗೆ ಒಲವು ತೋರಿದ್ದಾರೆ.
ಕಮಲ ನಾಯಕರಿಂದ ಗ್ರೀನ್ ಸಿಗ್ನಲ್:
ದಕ್ಷಿಣ ಪದವೀಧರ ಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿದ್ದ ಈ.ಸಿ.ನಿಂಗರಾಜ್‌ಗೌಡ ಅವರು ಮೈ.ವಿ.ರವಿಶಂಕರ್ ಅವರಿಗಾಗಿ ಕ್ಷೇತ್ರ ತ್ಯಾಗ ಮಾಡಿದ್ದರು. ಆ ನಂತರದಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್‌ಗೆ ಆಗಲೇ ಬಿಜೆಪಿ ನಾಯಕರ ಮೇಲೆ ಒತ್ತಡ ಹೇರಿ ಅವರಿಂದ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದರು ಎನ್ನಲಾಗಿದೆ. ಈ ಮಧ್ಯೆ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ನಡುವಿನ ಮೈತ್ರಿ ಎರಡೂ ಪಕ್ಷದ ಅಭ್ಯರ್ಥಿಗಳಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ. ಟಿಕೆಟ್‌ಗೆ ತೀವ್ರ ಪೈಪೋಟಿ ಎದುರಿಸುವಂತಾಗಿದೆ.
ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಬೇಡಿಕೆ ಸರಿಯಲ್ಲ:
ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಈ.ಸಿ.ನಿಂಗರಾಜ್‌ಗೌಡ ಹೆಸರನ್ನು ಬಿಜೆಪಿ ಪಕ್ಷದ ಅಧಿಕೃತವಾಗಿ ಘೋಷಿಸಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ನಮಗೆ ಬಿಟ್ಟುಕೊಡುವಂತೆ ಬಿಜೆಪಿ ನಾಯಕರ ಮೇಲೆ ಜೆಡಿಎಸ್ ವರಿಷ್ಠರು ಒತ್ತಡ ಹಾಕುತ್ತಿದ್ದಾರೆ. ಆದರೆ, ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಈಗಾಗಲೇ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎ.ಪಿ.ರಂಗನಾಥ್ ಸೋತಿದ್ದಾರೆ. ನೈಋತ್ಯ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ನ ಭೋಜೇಗೌಡರು ಪ್ರತಿನಿಧಿಸುತ್ತಿದ್ದಾರೆ. ಈಗ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನೂ ಬಿಟ್ಟುಕೊಡುವಂತೆ ಕೇಳುವುದು ಸರಿಯಲ್ಲ ಎನ್ನುವುದು ಬಿಜೆಪಿಯವರ ವಾದವಾಗಿದೆ.
ಜೆಡಿಎಸ್‌ನಲ್ಲೇ ಪೈಪೋಟಿ:
ಲೋಕಸಭಾ ಚುನಾವಣೆಯಲ್ಲಿ ಮಾಡಿಕೊಂಡಿದ್ದ ಮೈತ್ರಿಯನ್ನು ಎಲ್ಲಾ ಚುನಾವಣೆಗಳಿಗೂ ಮುಂದುವರೆಸಲು ಹೈಕಮಾಂಡ್ ನಿರ್ಧರಿಸಿದ್ದರಿಂದ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವಂತೆ ದಳಪತಿಗಳು ಬೇಡಿಕೆ ಇಟ್ಟಿದ್ದರು. ಕಳೆದ ಎರಡು ಬಾರಿಯಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಮರಿತಿಬ್ಬೇಗೌಡರು ಈಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದರು. ಇದರಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಲು ಕೆ.ಟಿ.ಶ್ರೀಕಂಠೇಗೌಡ, ಕೆ.ವಿವೇಕಾನಂದರ ನಡುವೆಯೇ ಪೈಪೋಟಿ ಏರ್ಪಟ್ಟಿತ್ತು. ನಂತರದಲ್ಲಿ ಬಹಿರಂಗಗೊಂಡ ಪ್ರಜ್ವಲ್ ಪ್ರಕರಣದಿಂದ ಮುಜುಗರಕ್ಕೆ ಒಳಗಾಗಿರುವಂತೆ ಕಂಡುಬಂದಿರುವ ಜೆಡಿಎಸ್ ನಾಯಕರು ಈಗ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ತೀವ್ರ ಪೈಪೋಟಿ ನಡೆಸದೆ ಬಿಜೆಪಿಗೆ ಬಿಟ್ಟುಕೊಟ್ಟಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಒಂದು ಬಾರಿ ಅಧಿಕೃತವಾಗಿ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಿದ ನಂತರದಲ್ಲಿ ಮತ್ತೆ ಬದಲಾವಣೆ ಮಾಡುವ ಸಾಧ್ಯತೆಗಳು ತೀರಾ ಕಡಿಮೆ. ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಹಾಲಿ ಘೋಷಣೆ ಮಾಡಿರುವ ಅಭ್ಯರ್ಥಿ ಈ.ಸಿ.ನಿಂಗರಾಜ್‌ಗೌಡರ ಹೆಸರನ್ನು ಬದಲಾವಣೆ ಮಾಡದಿದ್ದರೆ ಕೆ.ಟಿ.ಶ್ರೀಕಂಠೇಗೌಡ ಮತ್ತು ಕೆ.ವಿವೇಕಾನಂದರಿಗೆ ನಿರಾಸೆಯಾಗುವುದು ಖಚಿತವಾಗಲಿದೆ.
ಸ್ಪರ್ಧೆಗೆ ಮೊದಲ ಅವಕಾಶ:
ಕೆ.ಟಿ.ಶ್ರೀಕಂಠೇಗೌಡರು ಎರಡು ಬಾರಿ ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ. ಮತ್ತೆರಡು ಬಾರಿ ಗೆಲುವು ಕಾಣದೆ ಸೋತಿದ್ದಾರೆ. ಈ.ಸಿ.ನಿಂಗರಾಜ್‌ಗೌಡರಿಗೆ ಇದುವರೆಗೂ ಒಮ್ಮೆಯೂ ಚುನಾವಣೆಗೆ ಸ್ಪರ್ಧಿಸುವ ಅವಕಾಶಗಳು ದೊರಕಿಲ್ಲ. ಈಗ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಪಕ್ಷ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಿ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದೆ. ಇದರಿಂದ ಚುನಾವಣಾ ಕಾರ್ಯಚಟುವಟಿಕೆಗಳನ್ನು ಬಿರುಸುಗೊಳಿಸಿದ್ದಾರೆ. ಜೆಡಿಎಸ್ ಮೈತ್ರಿಧರ್ಮ ಪಾಲಿಸುವ ವಿಶ್ವಾಸದೊಂದಿಗೆ ಮುನ್ನಡೆದಿದ್ದಾರೆ.
ಈ.ಸಿ.ನಿಂಗರಾಜ್‌ಗೌಡ ಅವರು ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಈಗಾಗಲೇ ಎರಡು-ಮೂರು ಬಾರಿ ಶಿಕ್ಷಕರನ್ನು ಖುದ್ದು ಭೇಟಿಯಾಗಿದ್ದಾರೆ. ಅವರ ಸಮಸ್ಯೆಗಳ ಬಗ್ಗೆ ಆಳವಾಗಿ ತಿಳಿದುಕೊಂಡು, ಅವುಗಳ ಬಗ್ಗೆ ಸದನದಲ್ಲಿ ಸಮರ್ಥವಾಗಿ ದನಿ ಎತ್ತಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದಕ್ಕೆ ಉತ್ಸುಕರಾಗಿದ್ದಾರೆ.
ಪ್ರಸ್ತುತ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ವಿಷಯದಲ್ಲಿ ಮೂಡಿರುವ ಗೊಂದಲಕ್ಕೆ ಬುಧವಾರ ಅಂತಿಮ ತೆರೆ ಬೀಳುವ ಸಾಧ್ಯತೆಗಳಿವೆ ಎನ್ನಲಾಗಿದೆ. ಯಾರ ಕೈ ಮೇಲಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮೈತ್ರಿ ಅಭ್ಯರ್ಥಿ ವಿಷಯವಾಗಿ ಅಮಿತ್ ಶಾ, ನಡ್ಡಾ ಅವರೊಂದಿಗೆ ಬುಧವಾರ ಮಾತುಕತೆ ನಡೆಸಲಿದ್ದಾರೆ. ಹಾಲಿ ಘೋಷಣೆಯಾಗಿರುವ ಬಿಜೆಪಿ ಅಭ್ಯರ್ಥಿ ಬದಲಾಗುವ ಸಾಧ್ಯತೆಗಳಿವೆ. ನನ್ನ ಹೆಸರನ್ನು ಅಧಿಕೃತವಾಗಿ ಘೋಷಿಸುವ ವಿಶ್ವಾಸವಿದೆ. ಘೋಷಿತ ಅಭ್ಯರ್ಥಿ ಬದಲಾವಣೆಯಾಗದಿದ್ದರೆ ಮುಂದಿನ ನಿರ್ಧಾರವನ್ನು ಬೆಂಬಲಿಗರ ಸಭೆ ಕರೆದು ನಿರ್ಧಾರ ಮಾಡುತ್ತೇನೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆಯೂ ಯೋಚಿಸುತ್ತಿದ್ದೇನೆ.
- ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಟಿಕೆಟ್ ಆಕಾಂಕ್ಷಿ, ದಕ್ಷಿಣ ಶಿಕ್ಷಕರ ಕ್ಷೇತ್ರ
ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ನನ್ನ ಹೆಸರನ್ನು ಬಿಜೆಪಿ ಪಕ್ಷ ಅಂತಿಮಗೊಳಿಸಿ ಅಧಿಕೃತವಾಗಿ ಘೋಷಿಸಿದೆ. ಮತ್ತೆ ಅದನ್ನು ಬದಲಾಯಿಸುವ ಯಾವುದೇ ಸಾಧ್ಯತೆಗಳಿಲ್ಲ. ಕೆ.ಟಿ.ಶ್ರೀಕಂಠೇಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಚುನಾವಣೆಯಲ್ಲಿ ನನ್ನ ಬೆಂಬಲಕ್ಕೆ ನಿಲ್ಲುವರೆಂಬ ವಿಶ್ವಾಸವಿದೆ. ೩೫ ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ನನಗೆ ಈ ಬಾರಿ ಪಕ್ಷ ಅವಕಾಶ ನೀಡಿದೆ. ಶಿಕ್ಷಕರೊಂದಿಗೆ ನಿರಂತರ ಒಡನಾಟವಿಟ್ಟುಕೊಂಡಿರುವ ನನಗೆ ಗೆಲ್ಲುವ ವಿಶ್ವಾಸವಿದೆ. ಜೆಡಿಎಸ್ ಕೂಡ ನನ್ನ ಬೆಂಬಲಕ್ಕೆ ನಿಲ್ಲಲಿದೆ.
- ಈ.ಸಿ.ನಿಂಗರಾಜ್‌ಗೌಡ, ಬಿಜೆಪಿ ಅಭ್ಯರ್ಥಿ, ದಕ್ಷಿಣ ಶಿಕ್ಷಕರ ಕ್ಷೇತ್ರ