ಕೋರ್‌ ಕಮಿಟಿ ಸಭೆಯಲ್ಲಿ ಉಪಚುನಾವಣೆ ಸೋಲು ಜಟಾಪಟಿ :ಬಿಜೆಪಿ ರಾಜ್ಯ ಉಸ್ತುವಾರಿಗೇ ಸಭೆಯಲ್ಲಿ ರಾಮುಲು ಚಾರ್ಜ್‌!

| Published : Jan 23 2025, 02:01 AM IST / Updated: Jan 23 2025, 04:10 AM IST

ಕೋರ್‌ ಕಮಿಟಿ ಸಭೆಯಲ್ಲಿ ಉಪಚುನಾವಣೆ ಸೋಲು ಜಟಾಪಟಿ :ಬಿಜೆಪಿ ರಾಜ್ಯ ಉಸ್ತುವಾರಿಗೇ ಸಭೆಯಲ್ಲಿ ರಾಮುಲು ಚಾರ್ಜ್‌!
Share this Article
  • FB
  • TW
  • Linkdin
  • Email

ಸಾರಾಂಶ

ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಸೋಲಿನ ಸಂಬಂಧ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲು ನಡುವೆ ಕೋರ್ ಕಮಿಟಿ ಸಭೆಯಲ್ಲಿ ಜಟಾಪಟಿಯೇ ನಡೆದಿದೆ.

 ಬೆಂಗಳೂರು : ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಸೋಲಿನ ಸಂಬಂಧ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲು ನಡುವೆ ಕೋರ್ ಕಮಿಟಿ ಸಭೆಯಲ್ಲಿ ಜಟಾಪಟಿಯೇ ನಡೆದಿದೆ.

‘ನೀವು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಸಮರ್ಪಕವಾಗಿ ಕೆಲಸ ಮಾಡಿಲ್ಲ; ಸೋಲಿಗೆ ನೀವೇ ಕಾರಣ ಎನ್ನುವ ದೂರು ಬಂದಿದೆ’ ಎಂಬ ಅಗರ್‌ವಾಲ್ ಪ್ರಸ್ತಾಪದಿಂದ ಸಿಡಿಮಿಡಿಗೊಂಡ ಶ್ರೀರಾಮುಲು, ಸೋಲಿಗೆ ನಾನೇ ಕಾರಣ ಎಂಬುದನ್ನು ಸಾಬೀತುಪಡಿಸಿ ಎಂದು ಆಗ್ರಹಿಸಿದರು ಎನ್ನಲಾಗಿದೆ. ಒಂದು ಹಂತದಲ್ಲಿ, ಬೇಕಾದರೆ ನಾನು ಪಕ್ಷ ಬಿಟ್ಟು ಹೋಗುತ್ತೇನೆಯೇ ಹೊರತು ಪಕ್ಷದೊಳಗೆ ಇದ್ದುಕೊಂಡು ಸೋಲಿಸುವ ಪ್ರಯತ್ನ ಮಾಡುವುದಿಲ್ಲ ಎಂದು ಏರಿದ ಧ್ವನಿಯಲ್ಲಿ ಉತ್ತರಿಸಿದರು ಎಂದು ಮೂಲಗಳು ತಿಳಿಸಿವೆ.

ಮಂಗಳವಾರ ರಾತ್ರಿ ನಡೆದ ಪಕ್ಷದ ರಾಜ್ಯ ಘಟಕದ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲಿ ಇತರ ವಿಷಯಗಳ ಚರ್ಚೆ ನಡುವೆ ಉಪಚುನಾವಣೆಯ ಸೋಲಿನ ವಿಷಯ ಪ್ರಸ್ತಾಪವಾಗಿದೆ. ಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ ಅಭ್ಯರ್ಥಿಯಾಗಿದ್ದ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಬಂಗಾರು ಅವರು ಪಕ್ಷದ ನಾಯಕರಿಗೆ ದೂರು ನೀಡಿದ್ದರು. ಹೀಗಾಗಿ, ಉಸ್ತುವಾರಿ ಅಗರ್‌ವಾಲ್ ಅವರು ಸಂಡೂರು ವಿಧಾನಸಭಾ ಕ್ಷೇತ್ರದ ಸೋಲಿನ ಕುರಿತ ದೂರನ್ನು ಉಲ್ಲೇಖಿಸಿ ಶ್ರೀರಾಮುಲು ಅವರನ್ನು ಪ್ರಶ್ನಿಸಿದ್ದು ಜಟಾಪಟಿಗೆ ಕಾರಣವಾಯಿತು.

ನೀವು ಸರಿಯಾಗಿ ಕೆಲಸ ಮಾಡದೇ ಇದ್ದುದರಿಂದ ಆ ಕ್ಷೇತ್ರದಲ್ಲಿ ಸೋಲುಂಟಾಯಿತು. ಇಲ್ಲದಿದ್ದರೆ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು. ಸೋಲಿಗೆ ನೀವೇ ಕಾರಣ ಎಂಬರ್ಥದಲ್ಲಿ ಅಗರ್‌ವಾಲ್ ಆರೋಪದ ಧಾಟಿಯಲ್ಲಿ ಮಾತನಾಡುತ್ತಿದ್ದಂತೆಯೇ ಕೆರಳಿದ ಶ್ರೀರಾಮುಲು, ಇದನ್ನು ನೀವು ಸಾಬೀತುಪಡಿಸಬೇಕು. ಅಭ್ಯರ್ಥಿ ದೂರು ನೀಡಿದ್ದನ್ನೇ ಮುಂದಿಟ್ಟುಕೊಂಡು ನನ್ನ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ನಾನು ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ಶ್ರಮ ಹಾಕಿದ್ದೇನೆ. ನನ್ನ ವಿರುದ್ಧ ಸುಖಾಸುಮ್ಮನೆ ದೂರು ನೀಡಿದ್ದಾರೆ. ಇದು ಸರಿಯಲ್ಲ. ಇಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಬೆಲೆಯೇ ಸಿಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.

ನಾನು ಇಷ್ಟು ವರ್ಷಗಳ ಕಾಲ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಸೋತರೂ ಪಕ್ಷದ ಕೆಲಸ ನಿಲ್ಲಿಸಿಲ್ಲ. ಕೇವಲ ಸಂಡೂರು ವಿಧಾನಸಭಾ ಕ್ಷೇತ್ರದ ಸೋಲಿನ ಬಗ್ಗೆ ಮಾತ್ರ ಪ್ರಸ್ತಾಪ ಮಾಡುತ್ತಿದ್ದೀರಿ. ಇನ್ನುಳಿದ ಎರಡು ಕ್ಷೇತ್ರಗಳಲ್ಲಿನ ಸೋಲಿನ ಬಗ್ಗೆಯೂ ಚರ್ಚೆ ಮಾಡಬೇಕಲ್ಲವೇ? ನಾನು ಕೂಡ ಎರಡು ಚುನಾವಣೆಗಳನ್ನು ಸೋತಿದ್ದೇನೆ. ಯಾರ ವಿರುದ್ಧವೂ ದೂರು ನೀಡಿಲ್ಲ. ಈಗ ಬಂಗಾರು ಹನುಮಂತು ನನ್ನ ವಿರುದ್ಧ ಯಾಕೆ ದೂರು ನೀಡಿದ್ದಾರೆ, ಅವರ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ. ನನಗೆ ಪಕ್ಷದ ವಿರುದ್ಧ ಕೆಲಸ ಮಾಡುವ ಸಂದರ್ಭ ಬಂದರೆ ನಾನು ಈ ಪಕ್ಷದಲ್ಲೇ ಇರುವುದಿಲ್ಲ ಎಂದು ತೀಕ್ಷ್ಣವಾಗಿ ಹೇಳಿದರು ಎಂದು ತಿಳಿದು ಬಂದಿದೆ.

ಶ್ರೀರಾಮುಲು ಅವರ ಈ ಪ್ರತಿಕ್ರಿಯೆ ಬಳಿಕ ಉಸ್ತುವಾರಿ ಅಗರ್‌ವಾಲ್ ಅವರು ಸುಮ್ಮನಾದರು. ಶ್ರೀರಾಮುಲು ಅವರನ್ನು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮತ್ತಿತತರರು ಸಮಾಧಾನಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಸಂತೋಷ್‌ಗೆ ದೂರು?

ಕೋರ್ ಕಮಿಟಿ ಸಭೆ ಬಳಿಕ ಶ್ರೀರಾಮುಲು ಅವರು ಪಕ್ಷದ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರ ವಿರುದ್ಧ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಅವರಿಗೆ ದೂರವಾಣಿ ಮೂಲಕ ದೂರಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಖಚಿತಪಡಿಸಿಕೊಳ್ಳಲು ಶ್ರೀರಾಮುಲು ಅವರನ್ನು ಸಂಪರ್ಕಿಸಲು ವಿಫಲ ಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ.