ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಪಂಚಸೂತ್ರ

| Published : Jan 09 2024, 02:00 AM IST / Updated: Jan 09 2024, 10:37 AM IST

BJP

ಸಾರಾಂಶ

ಮುಂಬರುವ ಲೋಕಸಭೆ ಚುನಾವಣೆಗೆ ರಾಜ್ಯ ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿದ್ದು, ಇದಕ್ಕಾಗಿ 100 ದಿನಗಳ ರೋಡ್‌ ಮ್ಯಾಪ್‌ ಹಾಕಿಕೊಂಡಿದೆ. ಇದಕ್ಕಾಗಿ ರೆಸಾರ್ಟ್‌ಗಳಲ್ಲಿ ಬೈಠಕ್‌ ಕರೆದು ಸಭೆ ನಡೆಸುತ್ತಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಂಬರುವ ಲೋಕಸಭಾ ಚುನಾವಣೆಯ ಸಿದ್ಧತೆಗೆ ಚಾಲನೆ ನೀಡಿರುವ ರಾಜ್ಯ ಬಿಜೆಪಿಯು ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಸಂಬಂಧ ನೂರು ದಿನಗಳ ರೋಡ್ ಮ್ಯಾಪ್ ಸಿದ್ಧಪಡಿಸಿಕೊಂಡಿದೆ.ಸೋಮವಾರ ನಗರದ ಯಲಹಂಕ ಬಳಿಯಿರುವ ರೆಸಾರ್ಟ್‌ವೊಂದರಲ್ಲಿ ದಿನವಿಡೀ ನಡೆದ ಬಿಜೆಪಿ ಲೋಕಸಭಾ ಚುನಾವಣಾ ಯೋಜನಾ ಬೈಠಕ್‌ನಲ್ಲಿ ಹಲವು ವಿಷಯಗಳನ್ನು ಚರ್ಚಿಸಲಾಗಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಮುಖಂಡರ ಸಭೆ, ಮೈತ್ರಿ ಹಿನ್ನೆಲೆಯಲ್ಲಿ ಶೀಘ್ರ ಕೇಂದ್ರ ನಾಯಕರ ಮಧ್ಯಸ್ಥಿಕೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ರಾಜ್ಯ ನಾಯಕರ ಸಭೆ, ರಾಜ್ಯದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವುದು, ಪ್ರಧಾನಿ ಮೋದಿ ನಾಯಕತ್ವ ಮತ್ತು ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವುದು, ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳನ್ನು ಶೀಘ್ರ ಬಗೆಹರಿಸುವ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪವಾಗಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

1.ನಾಳೆ ಮತ್ತು 13ರಂದು ಲೋಕಸಭಾ ಕ್ಷೇತ್ರಗಳ ಮುಖಂಡರ ಸಭೆ: ಎಲ್ಲ ಲೋಕಸಭಾ ಕ್ಷೇತ್ರಗಳ ಹಿರಿಯ ಮುಖಂಡರ ಸಭೆ ನಡೆಸುವ ಸಲುವಾಗಿ ತಲಾ ನಾಲ್ಕು ಕ್ಷೇತ್ರಗಳನ್ನು ಒಳಗೊಂಡಂತೆ ಏಳು ಕ್ಲಸ್ಟರ್‌ಗಳನ್ನು ರಚಿಸಲಾಗಿದ್ದು, ಪಕ್ಷದ ರಾಜ್ಯಾಧ್ಯಕ್ಷರೂ ಸೇರಿದಂತೆ ಹಿರಿಯ ನಾಯಕರ ಉಪಸ್ಥಿತಿಯಲ್ಲಿ ಇದೇ ತಿಂಗಳ 10 ಮತ್ತು 13ರಂದು ಎರಡು ದಿನಗಳ ಕಾಲ ಈ ಎಲ್ಲ ಕ್ಲಸ್ಟರ್‌ಗಳ ವ್ಯಾಪ್ತಿಯ ಮುಖಂಡರ ಸಭೆ ನಡೆಸಲಾಗುತ್ತದೆ.

 ಈ ಸಭೆಯಲ್ಲಿ ಪಕ್ಷದ ಸಂಘಟನೆ ಬಲಪಡಿಸುವ ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ. ಜತೆಗೆ ಸ್ಥಳೀಯ ಮಟ್ಟದ ಸಂಘಟನಾತ್ಮಕ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಅಲ್ಲದೆ, ಯಾರು ಅಭ್ಯರ್ಥಿಗಳಾಗಬಹುದು ಎಂಬುದರ ಬಗ್ಗೆಯೂ ಔಪಚಾರಿಕವಾಗಿ ಅಭಿಪ್ರಾಯ ಪಡೆಯಲಾಗುವುದು.

2.ಬಿಜೆಪಿ ಮತ್ತು ಜೆಡಿಎಸ್ ರಾಜ್ಯ ನಾಯಕರ ಸಮನ್ವಯ ಸಭೆ: ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿಯಾಗಿದ್ದು, ಇದೇ ತಿಂಗಳ ಅಂತ್ಯದೊಳಗಾಗಿ ಕ್ಷೇತ್ರಗಳ ಹಂಚಿಕೆ ಆಗಬೇಕಾಗಿದೆ. ಅದರ ಜತೆಗೆ ಉಭಯ ಪಕ್ಷಗಳ ನಡುವೆ ಸಮನ್ವಯತೆ ಮೂಡಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರದ ನಾಯಕರೊಬ್ಬರು ಆಗಮಿಸಿ ಉಭಯ ಪಕ್ಷಗಳ ರಾಜ್ಯ ನಾಯಕರ ಸಮನ್ವಯ ಸಭೆ ನಡೆಸಬೇಕು. ಬಳಿಕ ಆ ಸಮನ್ವಯತೆಯನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕೊಂಡೊಯ್ಯಲು ಉದ್ದೇಶಿಸಲಾಗಿದೆ.

3.ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಪ್ರಸ್ತಾಪ: ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿನ ಲೋಪಗಳ ಜತೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನತೆಗೆ ಎತ್ತಿ ತೋರಿಸುವ ಮೂಲಕ ನಕಾರಾತ್ಮಕ ಧೋರಣೆ ಉಂಟು ಮಾಡುವುದು. ಈಗಾಗಲೇ ಅನೇಕ ವೈಫಲ್ಯಗಳನ್ನು ಪ್ರಸ್ತಾಪಿಸಲಾಗುತ್ತಿದೆಯಾದರೂ ಅದನ್ನು ವ್ಯವಸ್ಥಿತವಾಗಿ ಜನರಿಗೆ ತಲುಪಿಸಬೇಕು ಎಂಬ ನಿರ್ಧಾರಕ್ಕೆ ಬಿಜೆಪಿ ಬಂದಿದೆ.

4.ಮೋದಿ ನಾಯಕತ್ವ, ಕೇಂದ್ರದ ಸಾಧನೆಗಳ ಪ್ರಚಾರ: ಮೂರನೇ ಬಾರಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಮನ್ನಣೆ ನೀಡಬೇಕಾಗಿರುವ ಅಗತ್ಯವನ್ನು ಪ್ರತಿಪಾದಿಸುವುದರ ಜತೆಗೆ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇದರೊಂದಿಗೆ ರಾಜ್ಯದಲ್ಲಿನ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಮೀಸಲಾತಿ ಹೆಚ್ಚಳದಿಂದ ಲಾಭ‍ವಾಗಿರುವ ಸಮುದಾಯಗಳಿಗೆ ಮನವರಿಕೆ ಮಾಡಿಕೊಡುವುದು.

5.ಪಕ್ಷದಲ್ಲಿನ ಗೊಂದಲಗಳ ನಿವಾರಣೆ: ಪಕ್ಷದ ಸಂಘಟನೆಯ ಮೇಲೆ ಪರಿಣಾಮ ಬೀರುತ್ತಿರುವ ಗೊಂದಲಗಳನ್ನು ಶೀಘ್ರ ಬಗೆಹರಿಸಲು ಬಿಜೆಪಿ ಸಭೆ ನಿರ್ಧರಿಸಿದೆ. ಅಸಮಾಧಾನ ಹೊಂದಿರುವ ಮುಖಂಡರ ಜತೆ ಪರಿಣಾಮಕಾರಿ ಮಾತುಕತೆ ನಡೆಸಿ ಅವರನ್ನು ಪಕ್ಷದ ಸಂಘಟನೆಯ ಕೆಲಸದಲ್ಲಿ ಒಳಗೊಳ್ಳುವಂತಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ, ಪಕ್ಷದ ವರಿಷ್ಠರ ಜೊತೆ ಇಂದು ಯೋಜನಾ ಬೈಠಕ್ ನಡೆದಿದೆ. 

ರಾಜ್ಯದ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದಕ್ಕೆ ಸಂಬಂಧಿಸಿ ಕೈಗೊಳ್ಳಬೇಕಾದ ರೂಪುರೇಷೆಗಳು, ಯಾವ ವಿಚಾರವನ್ನು ಕೈಗೆತ್ತಿಕೊಳ್ಳಬೇಕು, ಸಮನ್ವಯ ಹೇಗಿರಬೇಕು ಎಂಬ ಕುರಿತು ಚರ್ಚೆ- ಚಿಂತನೆ ನಡೆಸಲಾಗಿದೆ ಎಂದರು.ರಾಜ್ಯ ಮತ್ತು ದೇಶದ ಜನರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗ್ಯಾರಂಟಿ ಬಗ್ಗೆ ವಿಶ್ವಾಸ ಇದೆ. ರಾಜ್ಯ ಮತ್ತು ದೇಶಕ್ಕೆ ಮೋದಿಜೀಯೇ ಒಂದು ಭರವಸೆ.

 ರಾಜ್ಯದ ಜನತೆ ಈ ಬಾರಿ ಎಲ್ಲ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಿಸಿಕೊಡುವ ವಿಶ್ವಾಸವಿದೆ. ಇದಕ್ಕೆ ಸಂಬಂಧಿಸಿ 100 ದಿನಗಳ ರೋಡ್ ಮ್ಯಾಪನ್ನು ಸಿದ್ಧಪಡಿಸಲಾಗಿದೆ. ಅದಕ್ಕೆ ಅನುಗುಣವಾಗಿ ಪಕ್ಷದೊಳಗೆ ಮತ್ತು ಸಾರ್ವಜನಿಕ ವಲಯದಲ್ಲಿ ನಿರಂತರವಾದ ಕಾರ್ಯಚಟುವಟಿಕೆ, ಸಭೆಗಳನ್ನು ನಡೆಸುತ್ತೇವೆ ಎಂದರು.ವೈಚಾರಿಕ ಹಿನ್ನೆಲೆಯ ಮತದಾರರು, ವಿವಿಧ ಯೋಜನೆಗಳ ಫಲಾನುಭವಿಗಳನ್ನು ಒಳಗೊಂಡಂತೆ ಸರ್ವೋದಯದಿಂದ ಅಂತ್ಯೋದಯದವರೆಗೆ ಎಂಬ ಚಿಂತನೆಯಡಿ ಕಾರ್ಯ ನಿರ್ವಹಿಸುತ್ತೇವೆ. 

ಸರ್ವೋದಯ ಎಂದರೆ ಸರ್ವರ ಅಭ್ಯುದಯ, ಅಂತ್ಯೋದಯ ಎಂದರೆ ಕಟ್ಟ ಕಡೆಯ ಮನುಷ್ಯನಿಗೆ ಮೊದಲ ನೆರವು. ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್ ಅಡಿ ಯೋಜನೆ ರೂಪಿಸಲಿದ್ದೇವೆ ಎಂದರು.ನಾವು ಪೂರ್ಣ ವಿಶ್ವಾಸದಿಂದ ಚುನಾವಣೆ ಎದುರಿಸುತ್ತೇವೆ. 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ನೇತೃತ್ವದಲ್ಲಿ ಎನ್‍ಡಿಎ ಗೆಲ್ಲಲಿದೆ.

 ದೇಶದಲ್ಲಿ 400ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುವ ಸಂಕಲ್ಪ ನಮ್ಮದು ಎಂದು ತಿಳಿಸಿದರು.ಪ್ರಶ್ನೆಯೊಂದಕ್ಕೆ ಉತ್ತರಿಸಿದ ರವಿ, ಮೈತ್ರಿ ಹಿನ್ನೆಲೆಯಲ್ಲಿ ಯಾವ್ಯಾವ ಪಕ್ಷಕ್ಕೆ ಎಷ್ಟೆಷ್ಟು ಸ್ಥಾನ ಎಂಬುದನ್ನು ಎನ್‍ಡಿಎ ಸಮಿತಿ ನಿರ್ಧರಿಸಲಿದೆ. ನಾವು ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲುವ ಸಂಬಂಧ ರಾಜ್ಯ, ಲೋಕಸಭಾ ಕ್ಷೇತ್ರ, ವಿಧಾನಸಭಾ ಕ್ಷೇತ್ರ ಮತ್ತು ಬೂತ್ ಮಟ್ಟದಲ್ಲಿ ಚಟುವಟಿಕೆ ನಡೆಸಲಿದ್ದೇವೆ. ಪ್ರತಿ ಬೂತ್‍ನಲ್ಲಿ ಶೇ.51ಕ್ಕಿಂತ ಹೆಚ್ಚು ಮತ ಗಳಿಕೆ ಕಡೆಗೆ ತಂತ್ರಗಾರಿಕೆ ರೂಪಿಸಲಿದ್ದೇವೆ ಎಂದರು.