ಬಿಜೆಪಿ ಅಭಿಯಾನ: ಫ್ರೀ ಸಾಕಪ್ಪ, ಅಭಿವೃದ್ಧಿ ಮಾಡಪ್ಪ

| Published : Jan 08 2024, 01:45 AM IST / Updated: Jan 08 2024, 11:39 AM IST

ಸಾರಾಂಶ

ಆಡಳಿತ ಕಾಂಗ್ರೆಸ್‌ ಸರ್ಕಾರದ ವಿರುದ್ಧ ‘ಫ್ರೀ ಸಾಕಪ್ಪ, ಅಭಿವೃದ್ಧಿ ಮಾಡಪ್ಪ’ ಎಂಬ ಅಭಿಯಾನವನ್ನು ಹಮ್ಮಿಕೊಂಡಿದೆ. ಇದರಡಿಯಲ್ಲಿ ಚುನಾವಣೆ ರಣತಂತ್ರವನ್ನು ವಿಪಕ್ಷ ಬಿಜೆಪಿ ಹೊಂದಿದೆ.

ಕನ್ನಡಪ್ರಭ ವಾರ್ತೆ 

ಮಂಗಳೂರು: ಗ್ಯಾರಂಟಿ ಯೋಜನೆ ಜಾರಿಯಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ಸಾಲ ಮಾಡಬೇಕಾದ ಪರಿಸ್ಥಿತಿ ಇದೆ. ರಾಜ್ಯ ಕಾಂಗ್ರೆಸ್‌ ಸರ್ಕಾರದ ಈ ಧೋರಣೆ ವಿರುದ್ಧ ‘ಫ್ರೀ ಸಾಕಪ್ಪ, ಅಭಿವೃದ್ಧಿ ಮಾಡಪ್ಪ’ ಅಭಿಯಾನವನ್ನು ಬಿಜೆಪಿ ರಾಜ್ಯವ್ಯಾಪಿ ಹಮ್ಮಿಕೊಳ್ಳಲಿದೆ ಎಂದು ವಿಧಾನಸಭಾ ವಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದರು.

ವಿಧಾನಸಭಾ ವಿಪಕ್ಷ ನಾಯಕನಾದ ಬಳಿಕ ಮೊದಲ ಬಾರಿಗೆ ದ.ಕ. ಜಿಲ್ಲೆಗೆ ಭೇಟಿ ನೀಡಿದ ಅವರು, ಭಾನುವಾರ ಮಂಗಳೂರಿನ ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.ವಿದ್ಯಾರ್ಥಿಗಳಿಗೆ ಯಾವುದೇ ಸ್ಕಾಲರ್‌ಶಿಪ್‌ಗಳು ಸಿಗುತ್ತಿಲ್ಲ. 

ಪ್ರತಿಭಟನೆಗಳು ಹೆಚ್ಚಾಗಿವೆ. ಕಳೆದ ಏಳು ತಿಂಗಳಲ್ಲಿ 550ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬಕ್ಕೆ ಪರಿಹಾರ ನೀಡಲೂ ಸರ್ಕಾರದಲ್ಲಿ ಹಣ ಇಲ್ಲ. ಇವೆಲ್ಲವನ್ನು ಜನರಿಗೆ ಮನದಟ್ಟು ಮಾಡಿದರೆ, ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ ಎಂದರು.

ರಾಜ್ಯದಲ್ಲಿ ಏಳು ತಿಂಗಳಿಂದ ಒಂದು ಅಭಿವೃದ್ಧಿ ಕೆಲಸವೂ ನಡೆದಿಲ್ಲ. ಸರ್ಕಾರದ ಖಜಾನೆ ಖಾಲಿಯಾಗಿದ್ದು, ಲೋಕಸಭಾ ಚುನಾವಣೆ ಬಳಿಕ ಈ ಎಲ್ಲ ಉಚಿತ ಯೋಜನೆಗಳು ಸ್ಥಗಿತಗೊಳ್ಳಲಿದೆ. ರಾಜ್ಯದ ಭ್ರಷ್ಟ ಕಾಂಗ್ರೆಸ್‌ ಸರ್ಕಾರ ಹತ್ತಿಕ್ಕಲು ಇದಕ್ಕಿಂತ ಉತ್ತಮ ಅವಕಾಶ ಬೇರೆ ಇಲ್ಲ. ದೇಶಕ್ಕಾಗಿ ಮೋದಿ ಮತ್ತೆ ಪ್ರಧಾನಿಯಾಗಬೇಕು. ಇಲ್ಲದಿದ್ದರೆ ದೇಶ ಪಾಕಿಸ್ತಾನ, ಚೀನಾದಂತೆ ಆರ್ಥಿಕ ದುಸ್ಥಿತಿಗೆ ಒಳಗಾಗಬಹುದು, ಕಾಂಗ್ರೆಸ್‌ ನಮ್ಮ ದೇಶವನ್ನು ಹಾಳು ಮಾಡಲಿದೆ ಎಂದರು.

7 ತಿಂಗಳಿನಿಂದ ಅಭಿವೃದ್ಧಿ ಸ್ಥಗಿತ: ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ಗಳು ಸಿಗುತ್ತಿಲ್ಲ. ಪ್ರತಿಭಟನೆಗಳು ಹೆಚ್ಚಾಗಿವೆ. ಕಳೆದ ಏಳು ತಿಂಗಳಲ್ಲಿ 550ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ಪರಿಹಾರ ನೀಡಲೂ ಸರ್ಕಾರದಲ್ಲಿ ಹಣ ಇಲ್ಲ. ಏಳು ತಿಂಗಳಿನಿಂದ ಒಂದೇ ಒಂದು ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂದು, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದರು.