ಸಾರಾಂಶ
ಅಧಿಕೃತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಆರೋಗ್ಯ ಸಚಿವರೂ ಆಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ರಾಜ್ಯ ಬಿಜೆಪಿಯ ಕೆಲ ನಾಯಕರು ಔಪಚಾರಿಕವಾಗಿ ಭೇಟಿ ಮಾಡಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಿದರು.
ಬೆಂಗಳೂರು : ಅಧಿಕೃತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಆರೋಗ್ಯ ಸಚಿವರೂ ಆಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ರಾಜ್ಯ ಬಿಜೆಪಿಯ ಕೆಲ ನಾಯಕರು ಔಪಚಾರಿಕವಾಗಿ ಭೇಟಿ ಮಾಡಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಿದರು.
ಈ ವೇಳೆ ನಡ್ಡಾ ಅವರು ರಾಜ್ಯದಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಗೋವಿಂದ ಕಾರಜೋಳ, ಶಾಸಕರಾದ ಎನ್. ರವಿಕುಮಾರ್, ಮುನಿರತ್ನ, ಸಂಸದ ತೇಜಸ್ವಿಸೂರ್ಯ ಮೊದಲಾದವರು ಭೇಟಿ ಮಾಡಿದ್ದರು.
ಸರ್ಕಾರಿ ಕಾರ್ಯಕ್ರಮದ ಬಳಿಕ ನಡ್ಡಾ ಅವರು ದೆಹಲಿಗೆ ತೆರಳುವ ಮೊದಲು ಶುಕ್ರವಾರ ಸಂಜೆ ಕುಮಾರಕೃಪ ಅತಿಥಿ ಗೃಹಕ್ಕೆ ಆಗಮಿಸಿದರು. ಈ ವೇಳೆ ರಾಜ್ಯ ಬಿಜೆಪಿ ನಾಯಕರು ಭೇಟಿ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ನಡ್ಡಾ ಅವರು ಒಂದು ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದರು. ನಾವು ಸಹಜವಾಗಿಯೇ ಮಾತುಕತೆ ನಡೆಸಿದ್ದೇವೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಯಾವ ರೀತಿ ನಡೆಯುತ್ತಿದೆ ಎಂಬುದರ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ ಎಂದರು.
ಸಂಘಟನೆ ಬಗ್ಗೆ ಕೇಳಿದ್ದು ಎಲ್ಲವನ್ನೂ ಅವರಿಗೆ ಹೇಳಿದ್ದೇವೆ. ವಿರೋಧ ಪಕ್ಷ ನಾಯಕರಾಗಿ ಹೇಗೆ ಕೆಲಸ ಮಾಡುತ್ತಿದ್ದೀರಿ ಎಂದು ಕೇಳಿದರು. ನಾವು ಮಾಡಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡಿದೆವು. ರಾಜ್ಯದಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡುವಂತೆ ನಡ್ಡಾ ಅವರು ಸಲಹೆ ನೀಡಿದರು ಎಂದು ತಿಳಿಸಿದರು.
ನಾವು ಹಲವು ನಾಯಕರು ಭೇಟಿ ಮಾಡಿದ್ದೇವೆ. ಪಕ್ಷ ಸಂಘಟನೆ ಹೇಗೆ ನಡೆಯುತ್ತಿದೆ ಎಂಬ ವಿಷಯವನ್ನೂ ಚರ್ಚೆ ಮಾಡಿದ್ದೇವೆ. ಸರ್ಕಾರದ ಕಾರ್ಯವೈಖರಿ ಬಗ್ಗೆಯೂ ಪ್ರಸ್ತಾಪ ಮಾಡಿದ್ದೇವೆ ಎಂದರು.
ಪಕ್ಷದಲ್ಲಿ ಭಿನ್ನಮತ ಇಲ್ಲ: ಅಶೋಕ್
ಪಕ್ಷದ ಭಿನ್ನಮತೀಯ ನಾಯಕರು ನಡ್ಡಾ ಅವರನ್ನು ಭೇಟಿ ಮಾಡಿಲ್ಲ. ಅಂದರೆ ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ ಅಂತ ಅರ್ಥ. ಭಿನ್ನಾಭಿಪ್ರಾಯ ಇದ್ದರೆ ಅವರು ನಡ್ಡಾ ಅವರನ್ನು ಭೇಟಿ ಮಾಡುತ್ತಿದ್ದರು ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಅಶೋಕ್ ಪ್ರತಿಕ್ರಿಯಿಸಿದರು.