ಸಾರಾಂಶ
ಕೋಲಾರ : ರಾಜ್ಯಪಾಲರು ಕೇಂದ್ರದ ಒತ್ತಡದ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳುಹಿಸಿರು ನೋಟಿಸ್ ಸಂವಿಧಾನ ಬಾಹಿರವಾಗಿದೆ. ರಾಜ್ಯಪಾಲರು ನೋಟಿಸ್ ವಾಪಸ್ ಪಡೆಯದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಎಚ್ಚರಿಸಿದರು.
ನಗರದ ಜಿಲ್ಲಾಡಳಿತ ಕಚೇರಿಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತವನ್ನು ಸಹಿಸಲಾಗದೆ ಬಿಜೆಪಿ ಮತ್ತು ಜೆಡಿಎಸ್ ಕುತಂತ್ರ ಹುಟ್ಟು ಹಾಕುತ್ತಿವೆ ಎಂದು ಆರೋಪಿಸಿದರು.
ರಾಜ್ಯಪಾಲರ ದುರ್ಬಳಕೆ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ೧೩೬ ಸ್ಥಾನಗಳನ್ನು ಪಡೆದು ಬಲಿಷ್ಟವಾಗಿದೆ. ಪಕ್ಷತೀತವಾಗಿ ಭ್ರಷ್ಟಚಾರ ರಹಿತವಾಗಿ ಯಾವೂದೇ ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯರ ವಿರುದ್ದ ಮುಡಾ ಹಾಗೂ ಸಂಬಂಧವಿಲ್ಲದ ಪ್ರಕರಣಗಳನ್ನು ಅವರ ಮೇಲೆ ಹೊರೆಸಿದ್ದಲ್ಲದೆ ರಾಜ್ಯಪಾಲರ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿರುವುದು ಖಂಡನೀಯ ಎಂದರು. ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಮತ್ತು ಜೆಡಿಎಸ್ ಸಾರ್ವಜನಿಕರಿಗೆ ಯಾವುದೇ ಅನುಕೂಲ ಉಂಟಾಗಲಿಲ್ಲ. ಯಡಿಯೂರಪ್ಪ, ಸದಾನಂದಗೌಡ, ಬೊಮ್ಮಾಯಿ, ಜಗದೀಶ್ ಶೆಟ್ಟರ್ ಮುಂತಾದವರ ಆಡಳಿತದಲ್ಲಿ ಹಲವಾರು ಹಗರಣಗಳಲ್ಲಿ ನಡೆದ ತನಿಖೆಯಲ್ಲಿ ಮುಖ್ಯ ಮಂತ್ರಿಗಳು, ಸಚಿವರು ಸೇರಿಂದ ಹಲವಾರು ಮಂದಿ ಜೈಲು ವಾಸ ಅನುಭವಿಸಿರುವುದು ರಾಜ್ಯದ ಇತಿಹಾಸದಲ್ಲಿ ದಾಖಲಾಗಿದೆ ಎಂದು ಟೀಕಿಸಿದರು.ಜನತೆ ಕಟ್ಟುಕತೆ ನಂಬುವುದಿಲ್ಲ
ಈಗ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯರ ಜನಪರ ಆಡಳಿತ ಸಹಿಸಲಾಗದೆ ಅಸೂಯೆಯಿಂದ ಸಾರ್ವಜನಿಕರನ್ನು ದಿಕ್ಕು ತಪ್ಪಿಸಲು ಇಲ್ಲ ಸಲ್ಲದ ಆರೋಪಗಳನ್ನು ಹೊರೆಸಿ ಪಾದಯಾತ್ರೆ ಆರಂಭಿಸಿವೆ. ಆದರೆ ಸಾರ್ವಜನಿಕರು ಇವರ ಹುಸಿ ಆರೋಪಗಳನ್ನು ಕಪೋ ಕಲ್ಪಿತ ಕಟ್ಟು ಕಥೆಗಳನ್ನು ನಂಬುವುದಿಲ್ಲ. ಸರ್ಕಾರವು ಬಲಿಷ್ಟವಾಗಿರುವುದರಿಂದ ಅವರ ಕುತಂತ್ರದ ಆಟಗಳು ನಡೆಯುವುದಿಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಒಬ್ಬ ವ್ಯಕ್ತಿಯಲ್ಲ, ಶಕ್ತಿಯಾಗಿದ್ದಾರೆ. ಸಿದ್ದರಾಮಯ್ಯರಿಗೆ ರಾಜ್ಯದ ಜನತೆ ವಿಶೇಷವಾದ ಸ್ಥಾನಮಾನ ನೀಡಿದ್ದಾರೆ. ಅವರನ್ನು ಬಲಹೀನರಾಗಿ ಮಾಡಲು ಬಿಜೆಪಿ ಮತ್ತು ಜೆ.ಡಿ.ಎಸ್. ಸಂಚು ರೂಪಿಸುತ್ತಿದೆ. ರಾಜ್ಯಪಾಲರ ಕೈಗೊಳ್ಳುವ ತೀರ್ಮಾನದ ಮೇಲೆ ನಮ್ಮ ಹೋರಾಟಗಳು ನಿರ್ಧಾರವಾಗಲಿದೆ. ನಾವುಗಳು ಸಂವಿಧಾನ ಬದ್ದವಾದ ಹೋರಾಟ ನಡೆಸುತ್ತೇವೆ ಎಂದರು.
ಅರ್ಜಿ ಪರಿಶೀಲಿಸದೆ ನೋಟಿಸ್
ಈ ಹಿಂದೆ ಬಿಜೆಪಿ ಆಡಳಿತದಲ್ಲಿ ನಡೆದಿರುವ ನೂರಾರು ಹಗರಣಗಳ ಬಗ್ಗೆ ಲೆಕ್ಕವಿಲ್ಲದಷ್ಟು ಅರ್ಜಿಗಳು ರಾಜ್ಯಪಾಲರಿಗೆ ಸಲ್ಲಿಸಿದ್ದರೂ ಸಹ ಯಾವುದೊಂದು ಕ್ರಮ ಕೈಗೊಳ್ಳದೆ, ಯಾರೋ ದಾರಿಯಲ್ಲಿ ಹೋಗು ದಾಸಯ್ಯ ಸಲ್ಲಿಸಿದ ಅರ್ಜಿಯನ್ನು ಸಮರ್ಪಕವಾಗಿ ಪರಿಶೀಲಿಸದೆ ಕೇವಲ ೨೪ ಗಂಟೆಯಲ್ಲಿ ತ್ವರಿತವಾಗಿ ನೋಟಿಸ್ ಜಾರಿ ಮಾಡುವಂತ ಔಚಿತ್ಯವೇನಿತ್ತು ಎಂದು ಪ್ರಶ್ನಿಸಿದರು.
ಕುರುಬರ ಸಂಘದ ಮುಖಂಡ ಆಂಜನಿ ಸೋಮಣ್ಣ ಮಾತನಾಡಿ, ರಾಜ್ಯಪಾಲರು ಕೇಂದ್ರದ ಒತ್ತಡದಿಂದಲೇ ಶೋಕಾಸ್ ನೋಟಿಸ್ ಜಾರಿ ಮಾಡಿರುವುದು ಎಂಬುವುದು ರಾಜ್ಯದ ಜನತೆಗೆ ತಿಳಿಯದೆ ವಿಚಾರವೇನಲ್ಲ. ರಾಜ್ಯಪಾಲರು ಈ ಕೂಡಲೇ ನೋಟಿಸ್ ವಾಪಾಸ್ಸ್ ಪಡೆಯಬೇಕು ಇಲ್ಲವಾದಲ್ಲಿ ರಾಜ್ಯಪಾಲರ ತಾರತಮ್ಯದ ಆಡಳಿತ ಖಂಡಿಸಿ ರಾಜ್ಯಾದಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಪ್ರತಿಭಟನೆಯ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.ನೋಟಿಸ್ ವಾಪಸ್ ಪಡೆಯಲಿ
ಈಗಾಗಲೇ ಹಿಂದುಳಿದ ವರ್ಗಗಳು, ಕುರುಬರ ಸಂಘ, ಕಾಂಗ್ರೇಸ್ ಪಕ್ಷದಿಂದ ರಾಜ್ಯಪಾಲರಿಗೆ ನೋಟಿಸ್ ವಾಪಸ್ಸು ಪಡೆದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗಳ ಸಂವಿಧಾನ ಬದ್ದ ಆಡಳಿತಕ್ಕೆ ಸಹಕಾರ ನೀಡದಿದ್ದಲ್ಲಿ ರಕ್ತಪಾತವಾದರೂ ಚಿಂತೆಯಿಲ್ಲ. ಉಗ್ರವಾದ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು, ಸಿದ್ದರಾಮಯ್ಯರನ್ನು ಕಳೆದುಕೊಳ್ಳಲು ಯಾರಿಗೂ ಇಷ್ಟವಿಲ್ಲ ಎಂದರು.ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಗೌತಮ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಲ್.ಎ.ಮಂಜುನಾಥ್, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಪ್ರಸಾದ್ ಬಾಬು, ಕೂಡ ಅಧ್ಯಕ್ಷ ಮಹಮ್ಮದ್ ಅನಿಫ್, ಗ್ಯಾರಂಟಿ ಅನುಷ್ಠಾನಗಳ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಹಿಂದುಳಿದ ವರ್ಗಗಳ ಒಕ್ಕೂಟದ ಜಂಟಿ ಕಾರ್ಯದರ್ಶಿ ಎಸ್.ಮಂಜುನಾಥ್, ಮೈಲ್ಲಾಂಡಹಳ್ಳಿ ಮುರಳಿ ಇದ್ದರು.