ಸಾರಾಂಶ
ಟೇಕಲ್ : ಕೆ.ಜಿ.ಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭೂತಮ್ಮನ ಬೆಟ್ಟದ ತಪ್ಪಲಿನ ಹಲವಾರು ಗ್ರಾಮಗಳಲ್ಲಿನ ಕುಟುಂಬಗಳ ಜನರ ಜೀವನಾಧಾರಕ್ಕೆ ಕಲ್ಲನ್ನು ಹೊಡೆದು ಜೀವನ ಸಾಗಿಸುತ್ತಿದ್ದು, ಯಾವುದೇ ಯಂತ್ರೋಪಕರಣಗಳನ್ನು ಬಳಸದೇ ತಾತ್ಕಾಲಿಕವಾಗಿ ಕಲ್ಲು ಕುಟಿಕರು ಕಲ್ಲು ಒಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ಅವರು ಟೇಕಲ್‌ನ ಕೊಮ್ಮನಹಳ್ಳಿಯ ತಮ್ಮ ನಿವಾಸದ ಬಳಿ ಕಲ್ಲು ಕುಟಿಕರ ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಉಸ್ತುವಾರಿ ಸಚಿವ ಬೈರತಿ ಸುರೇಶ್ ಹಾಗೂ ಜಿಲ್ಲಾಧಿಕಾರಿಗಳು ಮತ್ತು ಇಲಾಖೆ ಅಧಿಕಾರಿಗಳ ಜೊತೆ ಕಲ್ಲು ಕುಟಿಕರ ಸಮಸ್ಯೆ ಕುರಿತು ತಾವು ಮಾತುಕತೆ ನಡೆಸಿದ ಸಂದರ್ಭದಲ್ಲಿ ಈ ತೀರ್ಮಾನ ಮಾಡಿದ್ದಾಗಿ ಹೇಳಿದರು.
ಸ್ಥಳೀಯ ಕಲ್ಲುಕುಟುಕರಿಗೆ ಆದ್ಯತೆ
ಈ ವೃತ್ತಿಯಲ್ಲಿ ಮೊದಲು ಸ್ಥಳೀಯರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಅರ್ಜಿಯನ್ನು ಪರಿಶೀಲನೆ ನಡೆಸಿ ಸ್ಥಳೀಯರೇ ಎಂಬುದನ್ನು ನಿರ್ಧರಿಸಿದ ನಂತರ ಬ್ಲಾಕ್‌ಗಳನ್ನು ನೀಡಲಾಗುತ್ತದೆ. ಇದನ್ನು ಅಧಿಕಾರಿಗಳು ಮತ್ತು ಸಚಿವರ ಗಮನಕ್ಕೆ ತರಲಾಗಿದೆ. ಸರ್ಕಾರದ ಕೆಲವು ನಿಯಮಗಳನ್ನು ನೋಡಿಕೊಂಡು ಟಾಸ್ಕ್‌ಪೋರ್ಸ್‌ನಿಂದ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಸಣ್ಣಪುಟ್ಟ ಯಂತ್ರೋಪಕರಣಗಳನ್ನು ಇಟ್ಟುಕೊಳ್ಳಲು ಸಾಧ್ಯವಾದಷ್ಟು ನಿಮಗೆ ಅನುಕೂಲ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಈ ಹಿಂದೆ ಬಂಡೆಗಳ ಬ್ಲಾಕ್‌ಗಳನ್ನು ಮಾಡಿ ಅದನ್ನು ಕಲ್ಲುಕಕುಟಿಕರಿಗೆ ನೀಡಿ ಅದರಿಂದ ಸರ್ಕಾರಕ್ಕೆ ರಾಜಧನ ಪಡೆಯಬಹುದೆಂದು ಪ್ರಸ್ತಾಪ ಮಾಡಲಾಗಿತ್ತು. ಅದರಂತೆ ಇದೀಗ ೯೭ಕ್ಕೂ ಹೆಚ್ಚು ಕಲ್ಲು ಕುಟಿಕರ ಸಂಘಗಳನ್ನು ಮಾಡಿದ್ದು ಅದರಂತೆ ಯಾರಿಗೂ ಯಾವುದೇ ತೊಂದರೆಯಾಗದಂತೆ ಪ್ರತಿಯೊಬ್ಬರಿಗೂ ಅದರಲ್ಲೂ ಸ್ಥಳೀಯರಿಗೆ ಆದ್ಯತೆ ನೀಡಿ ಕಾನೂನಿನ ಚೌಕಟ್ಟಿನಲ್ಲಿ ಬ್ಲಾಕ್ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜಿಲ್ಲಾ ಹಿರಿಯ ಅಧಿಕಾರಿ ರಾಜೇಶ್, ತಹಶೀಲ್ದಾರ್ ಕೆ.ರಮೇಶ, ಅರಣ್ಯ ಸಂರಕ್ಷಣಾಧಿಕಾರಿ ಧನಲಕ್ಷ್ಮೀ, ಸರ್ಕಲ್ ಇನ್ಸ್‌ಪೆಕ್ಟರ್‌ಗಳಾದ ವಸಂತ್‌ಕಕುಮಾರ್, ಸುನಿಲ್‌ಕುಮಾರ್, ಮುಖಂಡರಾದ ರಮೇಶ್‌ಗೌಡ, ವಿನೋದ್‌ಗೌಡ, ಕೆ.ಎಸ್.ವೆಂಕಟೇಶ್‌ಗೌಡ, ಎಸ್.ಜಿ.ರಾಮಮೂರ್ತಿ, ಸತೀಶಬಾಬು, ಹೆಚ್.ಹನುಮಂತಪ್ಪ, ಪ್ರಗತಿ ಶ್ರೀನಿವಾಸ್, ಚಂದ್ರಶೇಖರ್, ಹಲವಾರು ಮಂದಿ ಕಲ್ಲು ಕುಟಿಕರು ಉಪಸ್ಥಿತರಿದ್ದರು.