ಮೆಕ್ಕೆಜೋಳ ಆಮದು ನಿಲ್ಲಿಸಿ : ಪಿಎಂಗೆ ಸಿಎಂ ಸಿದ್ದರಾಮಯ್ಯ

| N/A | Published : Nov 22 2025, 11:02 AM IST

CM Siddaramaiah
ಮೆಕ್ಕೆಜೋಳ ಆಮದು ನಿಲ್ಲಿಸಿ : ಪಿಎಂಗೆ ಸಿಎಂ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

 ರಾಜ್ಯದ ಮೆಕ್ಕೆಜೋಳ ಬೆಳೆಗಾರರಿಗೆ ನೆರವಾಗಲು ಶೀಘ್ರ 12.50 ಲಕ್ಷ ಮೆಟ್ರಿಕ್‌ ಟನ್‌ ಜೋಳ ಖರೀದಿಗೆ ಖರೀದಿ ಕೇಂದ್ರಗಳ ಸ್ಥಾಪನೆಗೆ ನೋಡಲ್‌ ಏಜೆನ್ಸಿಗಳ ಮೇಲೆ ಒತ್ತಡ ಹಾಗೂ ಮೆಕ್ಕೆಜೋಳ ಆಮದು ಮೇಲೆ ನಿಯಂತ್ರಣ ಹೇರುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿದೆ.

  ಬೆಂಗಳೂರು :  ಬೆಲೆ ಕುಸಿತದಿಂದ ಸಂಕಷ್ಟಕ್ಕೊಳಗಾಗಿರುವ ರಾಜ್ಯದ ಮೆಕ್ಕೆಜೋಳ ಬೆಳೆಗಾರರಿಗೆ ನೆರವಾಗಲು ಶೀಘ್ರ 12.50 ಲಕ್ಷ ಮೆಟ್ರಿಕ್‌ ಟನ್‌ ಜೋಳ ಖರೀದಿಗೆ ಖರೀದಿ ಕೇಂದ್ರಗಳ ಸ್ಥಾಪನೆಗೆ ನೋಡಲ್‌ ಏಜೆನ್ಸಿಗಳ ಮೇಲೆ ಒತ್ತಡ ಹಾಗೂ ಮೆಕ್ಕೆಜೋಳ ಆಮದು ಮೇಲೆ ನಿಯಂತ್ರಣ ಹೇರುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿದೆ.

ಮೆಕ್ಕೆಜೋಳ ಬೆಲೆ ಕುಸಿತದಿಂದಾಗಿ ರೈತರು ನಡೆಸುತ್ತಿರುವ ಪ್ರತಿಭಟನೆ ಮತ್ತು ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವ ಸಂಬಂಧ ಮುಖ್ಯಮಂತ್ರಿ ನಿವಾಸ ಕಾವೇರಿಯಲ್ಲಿ ಶುಕ್ರವಾರ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಮೆಕ್ಕೆಜೋಳ ಬೆಲೆ ದಿಢೀರ್‌ ಕಡಿಮೆಯಾಗಲು ಇರುವ ಕಾರಣಗಳ ಕುರಿತು ಸುಧೀರ್ಘ ಚರ್ಚೆ ಮಾಡಲಾಯಿತು. ಈ ವೇಳೆ ಸಚಿವರು ಮತ್ತು ಅಧಿಕಾರಿಗಳು, ರಾಜ್ಯ ಸೇರಿ ದೇಶದಲ್ಲಿ ಮೆಕ್ಕೆಜೋಳ ಉತ್ಪಾದನೆಯಲ್ಲಿ ಭಾರೀ ಹೆಚ್ಚಳವಾಗಿದೆ. ಆದರೂ, ಕೇಂದ್ರ ಸರ್ಕಾರ ವಿದೇಶಗಳಿಂದ 70 ಲಕ್ಷ ಮೆಟ್ರಿಕ್‌ ಟನ್ ಮೆಕ್ಕೆಜೋಳ ಆಮದು ಮಾಡಿಕೊಂಡಿದೆ. ಜತೆಗೆ ಮೆಕ್ಕೆಜೋಳದಿಂದ ಎಥೆನಾಲ್‌ ಉತ್ಪಾದಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ ನಿಗದಿ ಮಾಡಿರುವ ಕೋಟಾ ಪ್ರಮಾಣ ಕಡಿಮೆಯಿದೆ. ಅದರಿಂದಾಗಿ ಡಿಸ್ಟಿಲರಿಗಳು ಮೆಕ್ಕೆಜೋಳ ಖರೀದಿಸುವ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದರು

ಕೇಂದ್ರದಿಂದ ನೋಡಲ್‌ ಏಜೆನ್ಸಿಗಳಾಗಿ ನೇಮಕವಾಗಿರುವ ನಾಫೆಡ್‌-ಎನ್ಸಿಸಿಎಫ್‌ ಮೂಲಕ ಬೆಂಬಲ ಬೆಲೆ ಯೋಜನೆ ಅಡಿ ಮೆಕ್ಕೆಜೋಳ ಸಂಗ್ರಹ ಮತ್ತು ಎಥೆನಾಲ್‌ ಉತ್ಪಾದನೆಗೆ ಬಳಕೆ ಕುರಿತು ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಆದರೆ, ನೋಡಲ್‌ ಏಜೆನ್ಸಿಗಳು ಮಾರ್ಗಸೂಚಿಯಂತೆ ಇನ್ನೂ ಖರೀದಿ ಪ್ರಕ್ರಿಯೆ ಆರಂಭಿಸಿಲ್ಲ. ಇದು ಸಮಸ್ಯೆ ಹೆಚ್ಚಿಸಿದೆ. ಹಾಗೆಯೇ, ಡಿಸ್ಟಿಲರಿಗಳು ಬೆಲೆ ಕಡಿಮೆಯಿದ್ದಾಗಲೇ ಜೋಳ ಖರೀದಿಸಿಟ್ಟುಕೊಂಡಿವೆ. ಇದು ನಿಯಮದ ಉಲ್ಲಂಘನೆ. ಜತೆಗೆ ಈಗ ಬೆಲೆ ಕುಸಿಯಲು ಕಾರಣವಾಗಿದೆ ಎಂದು ವಿವರಿಸಿದರು.

12.50 ಲಕ್ಷ ಮೆಟ್ರಿಕ್‌ ಟನ್‌ ಖರೀದಿ:

ಸುಮಾರು 12.50 ಲಕ್ಷ ಮೆಟ್ರಿಕ್‌ ಟನ್‌ ಮೆಕ್ಕೆಜೋಳವನ್ನು ಬೆಂಬಲ ಬೆಲೆ ಅಡಿ ಖರೀದಿಗೆ ಖರೀದಿ ಕೇಂದ್ರ ಸ್ಥಾಪಿಸಿರುವ ನೋಡಲ್‌ ಏಜೆನ್ಸಿಗಳ ಮೇಲೆ ಒತ್ತಡ ಹೇರಬೇಕು. ಒಮ್ಮೆ ಬೆಂಬಲ ಬೆಲೆ ಅಡಿ ಮೆಕ್ಕೆಜೋಳ ಖರೀದಿ ಆರಂಭಿಸಿದರೆ ರೈತರ ಆತಂಕ ಕಡಿಮೆಯಾಗುವ ಜತೆಗೆ, ಮಾರುಕಟ್ಟೆ ಸ್ಥಿರ ಮಾಡಬಹುದಾಗಿದೆ.

ಜತೆಗೆ ಮೆಕ್ಕೆಜೋಳ ಆಮದು ಮೇಲೆ ಕೇಂದ್ರ ಸರ್ಕಾರ ನಿಯಂತ್ರಣ ಹೇರಬೇಕು. ಸದ್ಯ ಕೇಂದ್ರ ಸರ್ಕಾರ 70 ಲಕ್ಷ ಮೆಟ್ರಿಕ್‌ ಟನ್‌ ಮೆಕ್ಕೆಜೋಳ ಆಮದು ಮಾಡಿಕೊಳ್ಳುತ್ತಿದೆ. ಇದು ಮೆಕ್ಕೆಜೋಳ ಖರೀದಿ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಆಮದು ತಗ್ಗಿಸಲು ಗಂಭೀರ ಕ್ರಮ ಕೈಗೊಳ್ಳುವಂತೆ, ಪತ್ರ ಬರೆಯುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಸಿದ್ದರಾಮಯ್ಯ ಸೂಚಿಸಿದರು.

ಮೆಕ್ಕೆಜೋಳ ಖರೀದಿ ಸಂಬಂಧ ಡಿಸ್ಟಿಲರಿ ಮಾಲೀಕರೊಂದಿಗೆ ಮಾತುಕತೆ ನಡೆಸಬೇಕು. ನಿಯಮಾನುಸಾರ ಮೆಕ್ಕೆಜೋಳ ಖರೀದಿಗೆ ಸೂಚಿಸಬೇಕು. ಕುಕ್ಕುಟೋದ್ಯಮದಲ್ಲಿ ಮೆಕ್ಕೆಜೋಳದ ಬೇಡಿಕೆಯಿದ್ದು, ಅವರೊಂದಿಗೂ ಮಾತುಕತೆ ನಡೆಸಿ ರಾಜ್ಯದ ಮೆಕ್ಕೆಜೋಳ ಖರೀದಿಗೆ ಮನವೊಲಿಸಬೇಕು. ಬೆಲೆ ಕುಸಿತದಿಂದ ಸಂಕಷ್ಟಕ್ಕೊಳಗಾಗಿರುವ ರೈತರ ನೆರವಿಗೆ ಸರ್ಕಾರದಿಂದ ಎಲ್ಲ ನೆರವು ಒದಗಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.

ಸಚಿವರಾದ ಎಚ್‌.ಕೆ.ಪಾಟೀಲ್‌. ಕೆ.ಎಚ್‌.ಮುನಿಯಪ್ಪ, ಶಿವಾನಂದ ಪಾಟೀಲ್‌, ಕೆ. ವೆಂಕಟೇಶ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್‌ ಇತರರಿದ್ದರು.

ಸಿಎಂ ನಿರ್ದೇಶನ ಬೆನ್ನಲ್ಲೇ ಕೇಂದ್ರಕ್ಕೆ ಸಿಎಸ್‌ರಿಂದ ಪತ್ರ

ಮೆಕ್ಕೆಜೋಳ ರೈತರ ಸಮಸ್ಯೆ ಸಭೆ ಮುಗಿಯುತ್ತಿದ್ದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ಅವರು ಕೇಂದ್ರ ಸಹಕಾರ ಸಚಿವಾಲಯದ ಕಾರ್ಯದರ್ಶಿ ಅಶೀಶ್‌ ಕುಮಾರ್‌ ಭೂತಾನಿ ಅವರಿಗೆ ಪತ್ರ ಬರೆದಿದ್ದಾರೆ. ಮೆಕ್ಕೆಜೋಳ ರೈತರ ಸಮಸ್ಯೆ, ಬೆಲೆ ವ್ಯತ್ಯಾಸದ ಬಗ್ಗೆ ವಿವರಿಸಿದ್ದಾರೆ. ಮಾರುಕಟ್ಟೆಯಲ್ಲಿ ಮೆಕ್ಕೆ ಜೋಳ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ಕುಸಿತ ಕಂಡಿದೆ. ಎಂಎಸ್‌ಪಿ ಅಡಿ ಪ್ರತಿ ಮೆಟ್ರಿಕ್‌ ಟನ್‌ ಮೆಕ್ಕೆಜೋಳಕ್ಕೆ 2,400 ರು. ನಿಗದಿಯಾಗಿದೆ. ಆದರೆ ಮಾರುಕಟ್ಟೆ ದರ 1,600 ರು. ಇದೆ. ಹೀಗಾಗಿ ಕೂಡಲೇ ಎಂಎಸ್‌ಪಿ ಅಡಿ ನೋಡಲ್‌ ಏಜೆನ್ಸಿಗಳಿಗೆ ಖರೀದಿ ಕೇಂದ್ರ ತೆರೆದು, ಮೆಕ್ಕೆಜೋಳ ಖರೀದಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು. ಜತೆಗೆ, ರಾಜ್ಯದ ಮೆಕ್ಕೆಜೋಳ ಉತ್ಪಾದನಾ ಪ್ರಮಾಣದ ಶೇ.25ರಷ್ಟಾದ 12.50 ಲಕ್ಷ ಮೆಟ್ರಿಕ್‌ ಟನ್‌ ಖರೀದಿಗೆ ನೋಡಲ್‌ ಏಜೆನ್ಸಿಗಳಿಗೆ ಸೂಚಿಸಬೇಕು. ಉಳಿದ ಮೆಕ್ಕೆಜೋಳದಲ್ಲಿ 20 ಲಕ್ಷ ಮೆಟ್ರಿಕ್‌ ಟನ್‌ಅನ್ನು ಎಥೆನಾಲ್‌ ಉತ್ಪಾದನೆಗೆ ಡಿಸ್ಟಿಲರಿಗಳಿಗೆ ಖರೀದಿಸುವಂತೆ ನಿರ್ದೇಶಿಸಬೇಕು. ಅದರೊಂದಿಗೆ ಮೆಕ್ಕೆಜೋಳ ಆಮದಿಗೆ ನಿಯಂತ್ರಣ ಹೇಳಲು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆನ್‌ಲೈನ್‌ ಮೂಲಕ ಸಚಿವ ಚೆಲುವ ಭಾಗಿ

ದೆಹಲಿ ಪ್ರವಾಸದಲ್ಲಿರುವ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಅವರಿಗೆ ಸಿದ್ದರಾಮಯ್ಯ ಅವರು, ಕೇಂದ್ರ ಕೃಷಿ ಸಚಿವರನ್ನು ಭೇಟಿಯಾಗಿ ಮೆಕ್ಕೆಜೋಳ ರೈತರ ಸಮಸ್ಯೆ ವಿವರಿಸುವಂತೆ ಸೂಚಿಸಿದರು. ಅದಕ್ಕೆ ಚೆಲುವರಾಯಸ್ವಾಮಿ ಅವರು, ಗುರುವಾರ ರಾತ್ರಿಯೇ ಕೃಷಿ ಸಚಿವರನ್ನು ಭೇಟಿಯಾಗಿ ಸಮಸ್ಯೆ ವಿವರಿಸಿ ನೆರವಿಗೆ ಬರುವಂತೆ ಕೋರಿದ್ದೇನೆ. ಮತ್ತೊಮ್ಮೆ ಮನವಿ ಮಾಡುತ್ತೇನೆಂದರು.

Read more Articles on