ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅನೇಕರು ಕಟ್ಟಿರುವ ಅಹಿಂದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸೋಣ. ನಾನು ಸಹಾ ಅಹಿಂದ ವರ್ಗದಿಂದ ಗೆದ್ದಿರುವ ಏಕೈಕ ಶಾಸಕನಾಗಿದ್ದೇನೆ. ಯಾವುದೇ ತನಿಖೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಏನೂ ಮಾಡಲು ಆಗಲ್ಲ, ನಾವೆಲ್ಲಾ ಅವರ ಜೊತೆಗಿದ್ದೇವೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ರಾಷ್ಟ್ರೀಯ ಅಹಿಂದ ಸಂಘಟನೆಯ ಜಿಲ್ಲಾ ಶಾಖೆ ಉಧ್ಘಾಟಿಸಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ 40ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ಆದರೆ ವಿರೋಧ ಪಕ್ಷಗಳ ಷಡ್ಯಂತ್ರದಿಂದ ವಿಚಾರಣೆ ಎದುರಿಸುವಂತಾಗಿದೆ. ಅವರು ಎಲ್ಲಾ ಹಗರಣಗಳಿಂದ ನಿಷ್ಕಳಂಕರಾಗಿ ಹೊರ ಹೊಮ್ಮುತ್ತಾರೆ ಎಂದರು.
ಸಂಘಟನೆ ಬಲಪಡಿಸಬೇಕುಅಹಿಂದ ಸಂಘಟನೆಯಲ್ಲಿ ಬರೀ ಒಂದು ಸಮುದಾಯ ಮಾತ್ರಇಲ್ಲ , ಎಲ್ಲ ಹಿಂದುಳಿದ ಅಲ್ಪಸಂಖ್ಯಾತ ದಲಿತ ಸಮುದಾಯದರು ಇದ್ದಾರೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಸಂಘಟನೆ ಮಾಡಲಾಗಿದೆ. ಸಂಘಟನೆಯನ್ನು ಜಿಲ್ಲೆಯಲ್ಲಿ ಬಲಿಷ್ಠಗೊಳಿಸಿ ರಾಜ್ಯದಲ್ಲಿ ಮಾದರಿ ಸಂಘಟನೆ ಮಾಡುವಂತೆ ಸಲಹೆ ನೀಡಿದರು.
ಜಾತಿವ್ಯವಸ್ಥೆಯಿಂದ ಸಮಾಜದಲ್ಲಿ ವೈರುಧ್ಯತೆ , ಅಸಮಾನತೆಯಿದೆ. ಬಡವರು, ದೀನದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ಸಿಕ್ಕಾಗ ಮಾತ್ರ ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಲು ಸಾಧ್ಯ. ಬುದ್ಧ, ಬಸವಾದಿ ಶರಣರು, ಮಹಾತ್ಮ ಗಾಂಧೀಜಿಯವರ ಸಮಾನ ಸಮಾಜದ ಕನಸು ಈಡೇರಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ಅಹಿಂದ ರಾಜ್ಯಾಧ್ಯಕ್ಷ ಮುತ್ತಣ್ಣ ಶಿವಳ್ಳಿ,ಜಿಲ್ಲಾ ಕಾರ್ಯಾಧ್ಯಕ್ಷ ಕಳವಾರ ಶ್ರೀಧರ್.ಜಿ.ಪಂ.ಮಾಜಿ ಅಧ್ಯಕ್ಷ ಗಂಗರೇ ಕಾಲುವೆ ನಾರಾಯಣಸ್ವಾಮಿ, ಮಾಜಿ ಸದಸ್ಯರಾದಕೆ.ಸಿ.ರಾಜಾಕಾಂತ್,ಕೆ.ಎಂ.ಮುನೇಗೌಡ, ಮುಖಂಡರಾದ ಪಿ.ಎಂ. ರಘು ಡ್ಯಾನ್ಸ್ ಶ್ರೀನಿವಾಸ್, ಎಸ್.ಪಿ.ಶ್ರೀನಿವಾಸ್,ಅಲ್ಲು ಅನಿಲ್,ಕುಭೇರ್ ಅಚ್ಚು, ರವಿಕುಮಾರ್, ಪೆದ್ದಣ್ಣ,ನಾಗಭೂಷಣ್, ವಿನಯ್ ಬಂಗಾರಿ, ಮತ್ತಿತರರು ಇದ್ದರು.