ವಿದ್ಯಾರ್ಥಿಗಳು ವೈಯಕ್ತಿಕ ಯಶಸ್ಸು ಸಾಧಿಸಿ ಸಮಾಜಕ್ಕೆ ಕೊಡುಗೆ ನೀಡಿ : ಗೌರ್ನರ್‌ ಗೆಹಲೋತ್‌

| N/A | Published : Mar 03 2025, 01:46 AM IST / Updated: Mar 03 2025, 04:21 AM IST

ಸಾರಾಂಶ

ವಿದ್ಯಾರ್ಥಿಗಳು ವೈಯಕ್ತಿಕ ಯಶಸ್ಸು ಸಾಧಿಸಿ, ಸಮಾಜ ಮತ್ತು ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವ ಜೊತೆಗೆ ಇತರರನ್ನು ಪ್ರೇರೇಪಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಹೇಳಿದರು.

 ಬೆಂಗಳೂರು : ವಿದ್ಯಾರ್ಥಿಗಳು ವೈಯಕ್ತಿಕ ಯಶಸ್ಸು ಸಾಧಿಸಿ, ಸಮಾಜ ಮತ್ತು ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವ ಜೊತೆಗೆ ಇತರರನ್ನು ಪ್ರೇರೇಪಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಹೇಳಿದರು.

ಕರ್ನಾಟಕ ಆರ್ಯ ವೈಶ್ಯ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ 2024-25ನೇ ಸಾಲಿನ ವಾರ್ಷಿಕ ಉನ್ನತ ಶಿಕ್ಷಣ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಣಕಾಸಿನ ತೊಂದರೆಗಳಿಂದ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ನೀಡುವ ವಿದ್ಯಾರ್ಥಿವೇತನ ಬಹಳಷ್ಟು ನೆರವಾಗಿ ಗುರಿ ಮತ್ತು ಕನಸು ನನಸು ಮಾಡಲು ಸಾಧ್ಯವಾಗುತ್ತದೆ ಎಂದರು.

ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ದೇಶವಾಗಿದೆ. ಉದ್ಯಮಶೀಲತೆ ಮನೋಭಾವ, ನಾವೀನ್ಯತೆ, ಹೊಸ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಅಭಿವೃದ್ಧಿಶೀಲ ರಾಷ್ಟ್ರವಾಗಿ ಬದಲಾಗಲು ಯುವಕರ ಪಾತ್ರ ಮುಖ್ಯವಾಗಿದೆ ಎಂದು ರಾಜ್ಯಪಾಲರು ನುಡಿದರು.

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಇಂತಹ ಕೆಲಸಗಳು ಇನ್ನಷ್ಟು ಹೆಚ್ಚಾಗಬೇಕು. ಇದರಿಂದ ಉತ್ತಮ, ಶಿಕ್ಷಿತ ಮತ್ತು ಆರ್ಥಿಕವಾಗಿ ಸುಸ್ಥಿರವಾದ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದರು.

ಶ್ರೀ ವಾಸವಿ ಪೀಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನಗಳ ಮೇಲೆ ಅತಿಯಾಗಿ ಅವಲಂಬಿತರಾಗದೆ ಸ್ವಂತ ಸಾಮರ್ಥ್ಯ, ಬುದ್ಧಿವಂತಿಕೆ ಬೆಳೆಸಿ, ಬಳಸುವುದನ್ನು ಕಲಿಯಬೇಕು. ನಮ್ಮ ಮೆದುಳನ್ನು ಸಮರ್ಥವಾಗಿ ಬೆಳಸಿಕೊಳ್ಳಬೇಕು ಎಂದರು.

ಒಟ್ಟು 880 ವಿದ್ಯಾರ್ಥಿಗಳಿಗೆ ₹1 ಕೋಟಿಯಷ್ಟು ವಿದ್ಯಾರ್ಥಿ ವೇತನ ವಿತರಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಡಾ.ಸಿ.ಎ.ಐ.ಎಸ್.ಪ್ರಸಾದ್, ಹಿರಿಯ ಉಪಾಧ್ಯಕ್ಷರಾದ ಕೆ. ಆರ್. ಪ್ರದೀಪ್ ಮತ್ತು ಡಾ.ಎಸ್.ವಿ.ಎಸ್. ಗುಪ್ತಾ ಮುಂತಾದವರು ಉಪಸ್ಥಿತರಿದ್ದರು.