ಸಾರಾಂಶ
ಚಿಕ್ಕಬಳ್ಳಾಪುರ ಪ್ರಾಥಮಿಕ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್ ಚುನಾವಣೆಯಲ್ಲಿ ಎನ್‌ಡಿಎ ಬೆಂಬಲಿತ 10 ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ. ಈ ಮೂಲಕ ಸಂಸದ ಡಾ.ಕೆ.ಸುಧಾಕರ್ ಮತ್ತೊಮ್ಮೆ ಪಿಎಲ್‌ಡಿ ಬ್ಯಾಂಕ್ ಅಧಿಕಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಪ್ರಾಥಮಿಕ ಕೃಷಿ ಮತ್ತು ಭೂ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್‌ಗೆ ಗುರುವಾರ ನಡೆದ ಚುನಾವಣೆಯಲ್ಲಿ ಎನ್‌ಡಿಎ ಬೆಂಬಲಿತ 10 ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ. ಈ ಮೂಲಕ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಮತ್ತೊಮ್ಮೆ ಪಿಎಲ್‌ಡಿ ಬ್ಯಾಂಕ್ ಅಧಿಕಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಒಟ್ಟು 12 ನಿರ್ದೇಶಕರ ಹುದ್ದೆಗಳಿಗೆ ಈಗಾಗಲೇ 5 ಜನ ಅವಿರೋಧ ಆಯ್ಕೆಯಾಗಿದ್ದು, ಈ ಪೈಕಿ 4 ಮಂದಿ ಎನ್‌ಡಿಎ ಬೆಂಬಲಿತರು. ಉಳಿದ 7 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎನ್‌ಡಿಎ ಬೆಂಬಲಿತ 6 ಮಂದಿ ಜಯ ಗಳಿಸಿದ್ದಾರೆ. ನಂದಿ ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ.
20 ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 10,642 ಮತಗಳ ಅಂತರದಿಂದ ಡಾ.ಕೆ.ಸುಧಾಕರ್ ಪರಾಭವಗೊಂಡಿದ್ದರು. ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಅವರು ಕಡೆಯ ಕ್ಷಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಜೊತೆ ಕೈ ಜೋಡಿಸಿದ್ದರಿಂದ ಡಾ.ಸುಧಾಕರ್ ಅವರಿಗೆ ಅನಿರೀಕ್ಷಿತ ಸೋಲಾಗಿತ್ತು. ನಂತರದ ದಿನಗಳಲ್ಲಿ ಕೆ.ಪಿ.ಬಚ್ಚೇಗೌಡರು ಕಾಂಗ್ರೆಸ್ ಪಕ್ಷ ಸೇರಿದ್ದರು. ನಂತರ 2024ರ ಏಪ್ರಿಲ್‌ನಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 20,941 ಮತ ಮುನ್ನಡೆ ಮೂಲಕ ಡಾ.ಸುಧಾಕರ್ ಗೆಲುವು ಸಾಧಿಸಿದ್ದರು. ನಂತರ ಚಿಕ್ಕಬಳ್ಳಾಪುರ ನಗರಸಭೆಯನ್ನು ಬಿಜೆಪಿ ವಶಕ್ಕೆ ಪಡೆದಿದ್ದರು. ಈಗ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲೂ ಮೇಲುಗೈ ಸಾಧಿಸಿದ್ದಾರೆ. ಈ ಮೂಲಕ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಮತ್ತೆ ಡಾ.ಕೆ.ಸುಧಾಕರ್ ಕೈ ವಶವಾಗುತ್ತಿರುವುದು ಸ್ಪಷ್ಟವಾಗಿದೆ.ಪಿಎಲ್‌ಡಿ ಬ್ಯಾಂಕ್ ಹಿನ್ನೆಲೆ:
ಚಿಕ್ಕಬಳ್ಳಾಪುರ ಪಿಎಲ್‌ಡಿ ಬ್ಯಾಂಕ್ 1934ರಲ್ಲಿ ಸ್ಥಾಪನೆಗೊಂಡಿದ್ದು, ಬಹಳ ವರ್ಷಗಳ ಕಾಲ ಅಂದಿನ ಜೆಡಿಎಸ್ ಶಾಸಕರಾಗಿದ್ದ ಕೆ.ಪಿ.ಬಚ್ಚೇಗೌಡರ ಹಿಡಿತದಲ್ಲಿತ್ತು. ಡಾ.ಕೆ.ಸುಧಾಕರ್ ಪ್ರಥಮ ಬಾರಿಗೆ ಶಾಸಕರಾದ ನಂತರ 2015 ರಲ್ಲಿ ಬ್ಯಾಂಕ್ ಅಧಿಕಾರ ತಮ್ಮ ತೆಕ್ಕೆಗೆ ತೆಗೆದುಕೊಂಡರು. ಸುಮಾರು 9 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತ ಸ್ವಂತ ಕಟ್ಟಡ ನಿರ್ಮಿಸಿದ್ದರು. ನಂತರ ಬ್ಯಾಂಕ್ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಬೋನಸ್ ನೀಡುವ ಮಟ್ಟಕ್ಕೆ ಬ್ಯಾಂಕ್ ಅಭಿವೃದ್ಧಿಪಡಿಸಲಾಗಿದೆ. ಈ ಬಾರಿಯೂ ಚುನಾವಣೆ ಜಿದ್ದಾಜಿದ್ದಿ ಕಣವಾಗಿ ಕುತೂಹಲ ಮೂಡಿಸಿತ್ತು. ಶಾಸಕ ಪ್ರದೀಪ್ ಈಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ತಂತ್ರಗಾರಿಕೆ ಹೆಣೆದರೂ 10 ಅಭ್ಯರ್ಥಿಗಳನ್ನು ಡಾ.ಕೆ.ಸುಧಾಕರ್ ಗೆಲ್ಲಿಸಿಕೊಂಡಿದ್ದಾರೆ.
ನೂತನ ನಿರ್ದೇಶಕರು
ಅಗಲಗುರ್ಕಿ- ಚಂದ್ರಶೇಖರ್.ಆರ್
ಕೊಳವನಹಳ್ಳಿ: ಬಿ.ಎಂ.ರಾಮಸ್ವಾಮಿ
ಹೊಸಹುಡ್ಯ: ಮಂಜುನಾಥ. ವೈ.ಎನ್ (ಅವಿರೋಧ)
ಮಂಚನಬಲೆ: ಆನಂದಮೂರ್ತಿ
ಹಾರೊಬಂಡೆ: ಮಂಜುಳಮ್ಮ.ಬಿ.ಎನ್
ಪೆರೇಸಂದ್ರ (ಮೀಸಲು): ರಾಮಪ್ಪ.ಬಿ.
ಮಂಡಿಕಲ್: ಲಾಯರ್ ನಾರಾಯಣಸ್ವಾಮಿ (ಅವಿರೋಧ)
ಕಳವಾರ: ಮುಕ್ತಮುನಿಯಪ್ಪ (ಅವಿರೋಧ)
ದಿಬ್ಬೂರು: ಪ್ರಸಾದ್ (ಅವಿರೋಧ)
ಸಾಲಗಾರರಲ್ಲದ ಕ್ಷೇತ್ರ: ನಾರಾಯಣಸ್ವಾಮಿ