ಸಾರಾಂಶ
ನವದೆಹಲಿ: ಲೋಕಸಭಾ ಚುನಾವಣೆಗೆ ಅಗತ್ಯವಾದಷ್ಟು ಅಳಿಸಲಾಗದ ಇಂಕ್ ಪೂರೈಕೆ ಕಾರ್ಯ ಪೂರ್ಣಗೊಂಡಿದೆ ಎಂದು ಮೈಸೂರಿನ ‘ದ ಮೈಸೂರು ಪೇಂಟ್ಸ್ ಆ್ಯಂಡ್ ವಾರ್ನಿಷ್ ಲಿ.’ ಮಾಹಿತಿ ನೀಡಿದೆ.
ಮತದಾನದ ಬಳಿಕ ಕೈಬೆರಳಿಗೆ ಹಾಕುವ ಇಂಕ್ ಪೂರೈಸುವ ದೇಶದ ಏಕೈಕ ಸಂಸ್ಥೆ ಇದಾಗಿದೆ. ಚುನಾವಣೆಗೆ ಅಗತ್ಯವಾದ 26.55 ಲಕ್ಷ ಬಾಟಲ್ ಇಂಕ್ ಅನ್ನು ದೇಶದ ವಿವಿಧ ರಾಜ್ಯಗಳಿಗೆ ಪೂರೈಸಲಾಗಿದೆ. ಇದರ ಒಟ್ಟು ವೆಚ್ಚ 55 ಕೋಟಿ ರುಪಾಯಿ.
ಈ ಪೈಕಿ ಉತ್ತರಪ್ರದೇಶಕ್ಕೆ ಅತಿಹೆಚ್ಚು 3.64 ಲಕ್ಷ ಬಾಟಲ್ ಮತ್ತು ಲಕ್ಷದ್ವೀಪಕ್ಕೆ ಅತಿಕಡಿಮೆ 125 ಬಾಟಲ್ ರವಾನಿಸಲಾಗಿದೆ. ಕರ್ನಾಟಕಕ್ಕೆ 1.32 ಲಕ್ಷ ಬಾಟಲ್ ಇಂಕ್ ಪೂರೈಸಲಾಗಿದೆ. 2019ರಲ್ಲಿ 25.98 ಲಕ್ಷ ಬಾಟಲ್ ರವಾನಿಸಲಾಗಿತ್ತು. ಆಗ ಅದಕ್ಕೆ 36 ಕೋಟಿ ರು. ಶುಲ್ಕ ವಿಧಿಸಲಾಗಿತ್ತು ಎಂದು ಸಂಸ್ಥೆ ಹೇಳಿದೆ.ಒಂದು ಬಾಟಲ್‌ನಲ್ಲಿ 10 ಎಂಎಲ್‌ನಷ್ಟು ಇಂಕ್ ಇದ್ದು ಅದನ್ನು 700 ಜನರಿಗೆ ಹಾಕಬಹುದು.
ಸಾಮಾನ್ಯವಾಗಿ ಒಂದು ಮತಗಟ್ಟೆಯಲ್ಲಿ 1500 ಮತದಾರರು ಇರುತ್ತಾರೆ. ಆ ಲೆಕ್ಕಾಚಾರದಲ್ಲಿ ಪ್ರತಿ ಮತಗಟ್ಟೆಗೆ ಕನಿಷ್ಠ 3 ಬಾಟಲ್ ಬೇಕಾಗುತ್ತದೆ.ಲೋಕಸಭಾ ಚುನಾವಣೆಯಲ್ಲಿ 97 ಕೋಟಿ ಮತದಾರರು ಮತ ಚಲಾವಣೆಯ ಹಕ್ಕು ಹೊಂದಿದ್ದು, 12 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.