ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಚುನಾವಣಾ ಆಯೋಗದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆಂಬ ಪತ್ರಿಕಾ ವರದಿಯಿಂದ ದೇಶಾದ್ಯಂತ ಭುಗಿಲೆದ್ದ ರಾಜಕೀಯ ಕದನಕ್ಕೆ ಇದೀಗ ಸುಪ್ರೀಂಕೋರ್ಟ್ ಪ್ರವೇಶ ಮಾಡಿದೆ.
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಚುನಾವಣಾ ಆಯೋಗದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆಂಬ ಪತ್ರಿಕಾ ವರದಿಯಿಂದ ದೇಶಾದ್ಯಂತ ಭುಗಿಲೆದ್ದ ರಾಜಕೀಯ ಕದನಕ್ಕೆ ಇದೀಗ ಸುಪ್ರೀಂಕೋರ್ಟ್ ಪ್ರವೇಶ ಮಾಡಿದೆ.
ಆರೋಪ ಸಂಬಂಧಿತ ಅರ್ಜಿಗಳನ್ನು ಸೋಮವಾರ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ‘ಒಂದು ವೇಳೆ ಚುನಾವಣಾ ಆಯೋಗದ ನಿರ್ಧಾರಗಳು ಏಕಪಕ್ಷೀಯ ಮತ್ತು ಕಾನೂನುಬಾಹಿರವಾಗಿದ್ದರೆ ಅವುಗಳನ್ನು ರದ್ದುಗೊಳಿಸುವುದಾಗಿ ತಿಳಿಸಿದೆ. ಅಲ್ಲದೆ ಆಯೋಗದ ನಿರ್ಧಾರ ಏಕಪಕ್ಷೀಯವಾಗಿತ್ತೇ? ಅಥವಾ ಸರ್ವಸಮ್ಮತವಾಗಿತ್ತೇ? ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರ, ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾ ಆಯುಕ್ತರಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ಅಲ್ಲದೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳೆ ಬಳಸಲಾಗಿರುವ ಫಾರಂ 6 ಪರಿಷ್ಕರಣೆಗೆ ತಾನು ಯಾವುದೇ ಅನುಮೋದನೆ ನೀಡಿಲ್ಲ. ಅಂಥ ಬದಲಾವಣೆಗೆ ಸೂಚಿಸಿದ್ದು ಯಾರು ಎಂಬುದನ್ನು ದಾಖಲೆ ಸಮೇತ ತಿಳಿಸಿ ಎಂದು ಕೋರ್ಟ್ ಸೂಚಿಸಿದೆ. ಆದರೆ, ಜ್ಞಾನೇಶ್ ಕುಮಾರ್ ಅವರನ್ನು ಅಮಾನತು ಮಾಡಿ ಮಧ್ಯಂತರ ಆದೇಶ ನೀಡಬೇಕು ಎಂಬ ಮನವಿಯನ್ನು ನ್ಯಾಯಾಲಯ ಸ್ಪಷ್ಟವಾಗಿ ತಳ್ಳಿಹಾಕಿದೆ.
ಅರ್ಜಿ ವಿಚಾರಣೆ:
ರಾಷ್ಟ್ರಾದ್ಯಂತ ಕೈಗೊಂಡಿರುವ ಎಸ್‌ಐಆರ್ ಅನ್ನು ಅಕ್ರಮ ಎಂದು ಘೋಷಿಸಿ ರದ್ದುಪಡಿಸಬೇಕು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಕೈಗೊಂಡ ಎಲ್ಲಾ ನಿರ್ಧಾರ, ಹೊರಡಿಸಿದ ನಿರ್ದೇಶನ, ಚುನಾವಣಾ ಆಯೋಗದ ಸಾಫ್ಟ್‌ವೇರ್‌ನಲ್ಲಿ ಮಾಡಿದ ಬದಲಾವಣೆಗಳಿಗೆ ತಡೆ ನೀಡಬೇಕು. ಸಿಇಸಿ ವಿರುದ್ಧ ಎಸ್‌ಐಟಿ ತನಿಖೆಗೆ ಆದೇಶಿಸಬೇಕು. ಜ್ಞಾನೇಶ್‌ಕುಮಾರ್, ಹಿರಿಯ ಉಪಚುನಾವಣಾ ಆಯುಕ್ತ ಮನೀಶ್ ಗರ್ಗ್ ಮತ್ತು ಚುನಾವಣಾ ಆಯೋಗದ ಪ್ರಧಾನ ನಿರ್ದೇಶಕಿ (ಮಾಹಿತಿ ತಂತ್ರಜ್ಞಾನ) ಸೀಮಾ ಖನ್ನಾ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಕೋರಿ ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಲಾಗಿತ್ತು.
ಈ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾ.ಜೋಯ್‌ಮಲ್ಯ ಬಾಗ್ಚಿ ಮತ್ತು ನ್ಯಾ.ಮೋಹನಾ ಅವರಿದ್ದ ಪೀಠವು ‘ನಾವು ಚುನಾವಣಾ ಆಯೋಗದ ನಿರ್ಧಾರವನ್ನು ಪರಿಶೀಲಿಸಲಿದ್ದೇವೆ. ಒಂದು ವೇಳೆ ಯಾವುದೇ ನಿರ್ಧಾರ ಕಾನೂನಿಗೆ ವಿರುದ್ಧವಾಗಿದ್ದರೆ ರದ್ದು ಮಾಡಲಿದ್ದೇವೆ’ ಎಂದು ತಿಳಿಸಿತು.
ಅರ್ಜಿದಾರ ರಾಕೇಶ್ ಕುಮಾರ್ ಸಿಂಗ್ ಪರ ಹಾಜರಿದ್ದ ಹಿರಿಯ ವಕೀಲ ವಿಕಾಸ್ ಸಿಂಗ್, ಜ್ಞಾನೇಶ್ ಕುಮಾರ್ ಯಾವುದೇ ನಿರ್ಧಾರ ಕೈಗೊಳ್ಳದಂತೆ ಮಧ್ಯಂತರ ನಿರ್ದೇಶನ ನೀಡಬೇಕು, ಜತೆಗೆ ಮತದಾನದ ಹಕ್ಕಿಗೆ ಸಂಬಂಧಿಸಿ ದೇಶದ ಎಲ್ಲ ನಾಗರಿಕರು ಅಸುರಕ್ಷಿತ ಭಾವನೆ ಎದುರಿಸುತ್ತಿದ್ದಾರೆಂದು ಆರೋಪಿಸಿ ಜ್ಞಾನೇಶ್ ಕುಮಾರ್ ಅವರ ವಜಾಗೂ ಆಗ್ರಹಿಸಿದರು.
ಆಗ ಪೀಠವು, ಅವರನ್ನು ವಜಾ ಮಾಡಿದರೆ ಆಯೋಗದ ಕಾರ್ಯ ಸ್ಥಗಿತಗೊಳ್ಳಲಿದೆ. ಆಗ ಚುನಾವಣೆಗಳನ್ನು ಯಾರು ನಡೆಸುತ್ತಾರೆಂದು ಪ್ರಶ್ನಿಸಿತು. ಇನ್ನಿಬ್ಬರು ಚುನಾವಣಾ ಆಯುಕ್ತರಿದ್ದಾರೆ, ಅವರು ಆಯೋಗದ ಕಾರ್ಯಗಳನ್ನು ನಿರ್ವಹಿಸಬಹುದಲ್ಲವೇ ಎಂದು ವಕೀಲ ಸಿಂಗ್ ತಿಳಿಸಿದಾಗ, ಯಾವುದೇ ಆದೇಶ ಹೊರಡಿಸುವ ಮೊದಲು ಆಯೋಗ ಹಾಗೂ ಕೇಂದ್ರದ ಅಭಿಪ್ರಾಯ ಕೇಳುವುದಾಗಿ ಪೀಠ ತಿಳಿಸಿತು. ಜತೆಗೆ, ಚುನಾವಣಾ ಆಯೋಗವು ಅಂತಿಮ ಆದೇಶದ ವರೆಗೆ ಸರ್ವಾನುಮತದ ನಿರ್ಧಾರ ತೆಗೆದುಕೊಳ್ಳುವಂತೆಯೂ ಸೂಚಿಸಿತು.
ಆಯೋಗ ಸ್ಪಷ್ಟನೆ:
ಈ ನಡುವೆ ‘ಫಾರ್ಮ್ 6’ ಗದ್ದಲದ ಕುರಿತು ಸ್ಪಷ್ಟನೆ ನೀಡಿರುವ ಆಯೋಗದ ಹಿರಿಯ ಅಧಿಕಾರಿಗಳು ‘ಫಾರ್ಮ್ 6ನಲ್ಲಿ ನಾವು ಬದಲಾವಣೆ ಮಾಡಿಲ್ಲ ಹಾಗೂ ಇದಕ್ಕೆ ಲಗತ್ತಿಸಲಾದ ಸ್ವಯಂ ಘೋಷಣಾಪತ್ರಕ್ಕೆ ಸುಪ್ರೀಂ ಅನುಮೋದನೆ ನೀಡಿದೆ’ ಎಂದು ತಿಳಿಸಿದ್ದಾರೆ. ಬಿಹಾರದಲ್ಲಿ 2025ರ ಜೂ.24ರ ಎಸ್‌ಐಆರ್ ಆದೇಶದ ಸಂದರ್ಭದಲ್ಲಿ ಫಾರ್ಮ್ 6 ಗೆ ಸ್ವಯಂ ಘೋಷಣಾಪತ್ರವನ್ನು ಲಗತ್ತಿಸಲಾಗಿತ್ತು. ಈ ಕ್ರಮವನ್ನು ಸುಪ್ರೀಂ ತನ್ನ ಮೇ 27ರ ಆದೇಶದಲ್ಲಿ ಎತ್ತಿಹಿಡಿದಿತ್ತು ಎಂದು ಆಯೋಗವು ಸೆ.26ರ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿತ್ತು. ಆದರೆ ತಾನು ಈ ರೀತಿ ಆದೇಶ ನೀಡಿಲ್ಲ ಎಂದು ಸುಪ್ರೀಂ ಸೋಮವಾರ ತಿಳಿಸಿತ್ತು.
