ಕೇಜ್ರಿ ಚಾರಿತ್ರ್ಯಕ್ಕೆ ಮಸಿ ಬಳಿಯಲು ಸ್ವಾತಿ ಸಂಚು: ಆಪ್‌

| Published : May 18 2024, 12:38 AM IST / Updated: May 18 2024, 04:27 AM IST

ಸಾರಾಂಶ

 ಮುಖ್ಯಮಂತ್ರಿ ನಿವಾಸದಲ್ಲಿ ತಮಗೆ ಹಲ್ಲೆಯಾಗಿರುವ ಕುರಿತು ದೂರು ದಾಖಲಿಸಿರುವ ತಮ್ಮದೇ ಸಂಸದೆ ಸ್ವಾತಿ ಮಲಿವಾಲ್‌ಗೆ ಆಮ್‌ ಆದ್ಮಿ ಪಕ್ಷ ತಿರುಗೇಟು ನೀಡಿದ್ದು, ಸಿಎಂ ಅರವಿಂದ್‌ ಕೇಜ್ರಿವಾಲ್‌ರ ಚಾರಿತ್ರ್ಯಕ್ಕೆ ಮಸಿ ಬಳಿಯಲೆಂದೇ ಸ್ವಾತಿ ಸಂಚು ರೂಪಿಸಿದ್ದಾರೆ ಎಂದಿದೆ. 

ನವದೆಹಲಿ: ದೆಹಲಿ ಮುಖ್ಯಮಂತ್ರಿ ನಿವಾಸದಲ್ಲಿ ತಮಗೆ ಹಲ್ಲೆಯಾಗಿರುವ ಕುರಿತು ದೂರು ದಾಖಲಿಸಿರುವ ತಮ್ಮದೇ ಸಂಸದೆ ಸ್ವಾತಿ ಮಲಿವಾಲ್‌ಗೆ ಆಮ್‌ ಆದ್ಮಿ ಪಕ್ಷ ತಿರುಗೇಟು ನೀಡಿದ್ದು, ಸಿಎಂ ಅರವಿಂದ್‌ ಕೇಜ್ರಿವಾಲ್‌ರ ಚಾರಿತ್ರ್ಯಕ್ಕೆ ಮಸಿ ಬಳಿಯಲೆಂದೇ ಸ್ವಾತಿ ಸಂಚು ರೂಪಿಸಿದ್ದಾರೆ. ಇದರ ಹಿಂದೆ ಬಿಜೆಪಿ ಸಂಚು ಇದೆ ಆರೋಪಿಸಿದೆ. ಇದರೊಂದಿಗೆ ಮೊದಲ ಬಾರಿ ಸ್ವಾತಿ-ಆಪ್‌ ನಡುವಿನ ಒಡಕು ಬೆಳಕಿಗೆ ಬಂದಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಪ್ ನಾಯಕಿ ಆತಿಶಿ. ಮಾಧ್ಯಮಗಳಲ್ಲಿ ವೈರಲ್‌ ಆಗಿರುವ ಸ್ವಾತಿ ವಿಡಿಯೋವನ್ನು ಪ್ರಸ್ತಾಪಿಸಿದರು. ಸ್ವಾತಿ ಅವರು ಸಿಎಂ ನಿವಾಸದಲ್ಲಿ ಸಿಎಂ ಆಪ್ತ ನಿಭವ್‌ ಕುಮಾರ್‌ನಿಂದ ಹಲ್ಲೆಗೆ ಒಳಗಾದ ನಂತರದ ವಿಡಿಯೋ ಇದು ಎನ್ನಲಾಗಿದೆ.

‘ದೆಹಲಿ ಮುಖ್ಯಮಂತ್ರಿ ನಿವಾಸಕ್ಕೆ ಸ್ವಾತಿ ಬರಲು ಯಾವುದೇ ಅಪಾಯಿಂಟ್‌ಮೆಂಟ್ ತೆಗೆದುಕೊಂಡಿರಲಿಲ್ಲ. ಮೇಲಾಗಿ ಅವರಿಗೆ ಯಾವುದೇ ಗಾಯವಾಗಿಲ್ಲ ಎಂಬುದು ವೈರಲ್‌ ಆಗಿರುವ ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಆಕೆ ಮಾಡಿರುವ ಆರೋಪಗಳೆಲ್ಲವೂ ಆಧಾರರಹಿತವಾಗಿದ್ದು, ಮದ್ಯ ಹಗರಣದಲ್ಲಿ ಸಿಲುಕಿರುವ ಕೇಜ್ರಿವಾಲ್‌ ಅವರ ಚಾರಿತ್ರ್ಯಕ್ಕೆ ಬಿಜೆಪಿ ಕುಮ್ಮಕ್ಕಿನ ಮೇರೆಗೆ ಮಸಿ ಬಳಿಯುವ ಸಂಚು ರೂಪಿಸಿದ್ದಾಗಿ ಕಂಡುಬರುತ್ತಿದೆ’ ಎಂದು ತಿಳಿಸಿದರು.

ಸ್ವಾತಿ ಮೇಲೆ ಬಿಭವ್‌ ಪ್ರತಿದೂರು

ನವದೆಹಲಿ: ತಮ್ಮ ಮೇಲೆ ದೌರ್ಜನ್ಯ ಆರೋಪ ಮಾಡಿರುವ ಆಪ್‌ ಸಂಸದೆ ಸ್ವಾತಿ ಮಲಿವಾಲ್‌ ವಿರುದ್ಧ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಆಪ್ತ ಬಿಭವ್‌ ಕುಮಾರ್‌ ಪ್ರತಿದೂರು ದಾಖಲಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಆಪ್‌ ಸಚಿವೆ ಆತಿಶಿ, ‘ಸಿಎಂ ಮನೆಗೆ ಸ್ವಾತಿ ಬಂದಾಗ ಸಿಎಂ ಬಿಜಿ ಇದ್ದಾರೆ ಎಂದು ಬಿಭವ್ ಮೊದಲು ಹೇಳಿದರು. ಆಗ ಇದಕ್ಕೆ ಕೇರ್ ಮಾಡದ ಸ್ವಾತಿ ಬಿಭವ್‌ಗೆ ಕೂಗಾಡಿದರು. ಈ ಹಿನ್ನೆಲೆಯಲ್ಲಿ ಕೇಜ್ರಿ ಆಪ್ತ ಭಿಭವ್‌ ಕೂಡ ಸ್ವಾತಿ ಮೇಲೆ ಪ್ರತಿದೂರು ದಾಖಲಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದರು.