ಸಾರಾಂಶ
ಬೆಂಗಳೂರು : ಬೇಲಿಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ 2011ರ ಜುಲೈನಲ್ಲಿ ಲೋಕಾಯುಕ್ತ ಸಲ್ಲಿಸಿದ್ದ ತನಿಖಾ ವರದಿಯಲ್ಲಿ ಪ್ರಧಾನಿ ಮೋದಿ ಕೃಪಾಪೋಷಿತ ಅದಾನಿ ಗ್ರೂಪ್‌ನ ಹೆಸರಿದ್ದು, ಅವರ ವಿರುದ್ಧ ಕೂಡಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಅರಣ್ಯ ಇಲಾಖೆ ಅಧಿಕಾರಿಗಳು ಸುಮಾರು 8.05 ಲಕ್ಷ ಟನ್ ಅಕ್ರಮ ಅದಿರು ಮುಟ್ಟುಗೋಲು ಹಾಕಿಕೊಂಡಿದ್ದರು. ಈ ಅದಿರನ್ನು ಮಲ್ಲಿಕಾರ್ಜುನ ಶಿಪ್ಪಿಂಗ್, ಅದಾನಿ ಎಂಟರ್‌ಪ್ರೈಸಸ್, ಸಲಗಾಂವಕರ್ ಮೈನಿಂಗ್ ಇಂಡಸ್ಟ್ರಿ ಮತ್ತು ರಾಜ್‌ಮಹಲ್ ಸಂಸ್ಥೆಗಳು ವಿದೇಶಕ್ಕೆ ಅಕ್ರಮವಾಗಿ ಸಾಗಣೆ ಮಾಡಿರುವುದು ಲೋಕಾಯುಕ್ತ ತನಿಖೆಯಲ್ಲಿ ಪತ್ತೆಯಾಗಿತ್ತು. ಈ ಎಲ್ಲ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುವಂತೆಯೂ ಲೋಕಾಯುಕ್ತ ತನ್ನ ವರದಿಯಲ್ಲಿ ತಿಳಿಸಿತ್ತು. ಆದರೆ, ಅದಾನಿ ಎಂಟರ್‌ಪ್ರೈಸಸ್ ಹೊರತುಪಡಿಸಿ ಉಳಿದ ಮೂರು ಸಂಸ್ಥೆಗಳ ವಿರುದ್ಧ ಸಿಬಿಐ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದರು.
ಹೀಗೆ ನಾಲ್ಕು ಸಂಸ್ಥೆಗಳ ಪೈಕಿ ಮೂರು ಸಂಸ್ಥೆಗಳ ವಿರುದ್ಧ ಮಾತ್ರ ತನಿಖೆ ನಡೆಸಿ, ಆರೋಪ ಪಟ್ಟಿ ಸಲ್ಲಿಸಲಾಗಿದೆ. ಅದೇ ರೀತಿಯ ಅಪರಾಧ ಎಸಗಿರುವ ಅದಾನಿ ಸಂಸ್ಥೆ ವಿರುದ್ಧ ಯಾವುದೇ ತನಿಖೆಯೂ ನಡೆದಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಅದಾನಿ ಸಂಸ್ಥೆ ಲಂಚ ನೀಡಿ ಅಕ್ರಮ ಅದಿರು ಕಳ್ಳ ಸಾಗಣೆ ಮಾಡಿದೆ ಎಂಬ ಆರೋಪದ ಬಗ್ಗೆ ವಿಚಾರಣೆ ನಡೆದಿಲ್ಲ.
ಲೋಕಾಯುಕ್ತ ಪೊಲೀಸರು ಅದಾನಿ ಸಂಸ್ಥೆಯ ಕಂಪ್ಯೂಟರ್ ಜಪ್ತಿ ಮಾಡಿದಾಗ, ಅದರಲ್ಲಿ ಸಂಸ್ಥೆಯವರು ಯಾವ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರಿಗೆ ಎಷ್ಟು ಹಣ ನೀಡಬೇಕು ಎಂಬ ವಿವರಗಳನ್ನು ಒಳಗೊಂಡ ಮಾಹಿತಿಯೂ ಇದೆ. ಅದು ಲೋಕಾಯುಕ್ತ ವರದಿಯಲ್ಲೂ ಉಲ್ಲೇಖಿಸಲಾಗಿದೆ. ಆದರೂ ಅದಾನಿ ವಿರುದ್ಧ ಕ್ರಮ ಕೈಗೊಳ್ಳದಿರುವುದು ವಿಚಿತ್ರವಾಗಿದೆ ಎಂದು ಹೇಳಿದರು.
ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ನೀಡಿದ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲಾಗುವುದು. ಕಾನೂನಾತ್ಮಕವಾಗಿ ಕೂಡಲೇ ಅದಾನಿ ಸಂಸ್ಥೆ ವಿರುದ್ಧ ಕ್ರಮ ಜರುಗಿಸಲು ಮುಖ್ಯಮಂತ್ರಿಗಳು ಮುಂದಾಗಬೇಕು. ಪ್ರಕರಣದಲ್ಲಿ ಭಾಗಿಯಾದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.