ಯಾವ್ದೇ ಕಾರಣಕ್ಕೂ ಇಲ್ಲಿ ಇಳಿಯಲ್ರೀ..., ಟೌನ್‌ಹಾಲ್‌ ಹತ್ರ ಕರ್ಕೊಂಡು ಹೋಗಿ : ವಾಟಾಳ್‌ ರಂಪಾಟ

| N/A | Published : Mar 23 2025, 01:30 AM IST / Updated: Mar 23 2025, 04:37 AM IST

Vatal nagaraj

ಸಾರಾಂಶ

ಯಾವ್ದೇ ಕಾರಣಕ್ಕೂ ಇಲ್ಲಿ ಇಳಿಯಲ್ರೀ..., ಟೌನ್‌ಹಾಲ್‌ ಹತ್ರ ಕರ್ಕೊಂಡು ಹೋಗಿ ನನ್ನನ್ನು ಬಿಡಿ. ನಿಮ್ಗೆ ಇಷ್ಟ ಬಂದಂಗೆ ಮಾಡ್ತೀರೇನ್ರಿ... ಎಂದು ವಾಟಾಳ್‌ ನಾಗರಾಜ್‌ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

  ಬೆಂಗಳೂರು :  ಯಾವ್ದೇ ಕಾರಣಕ್ಕೂ ಇಲ್ಲಿ ಇಳಿಯಲ್ರೀ..., ಟೌನ್‌ಹಾಲ್‌ ಹತ್ರ ಕರ್ಕೊಂಡು ಹೋಗಿ ನನ್ನನ್ನು ಬಿಡಿ. ನಿಮ್ಗೆ ಇಷ್ಟ ಬಂದಂಗೆ ಮಾಡ್ತೀರೇನ್ರಿ... ಎಂದು ವಾಟಾಳ್‌ ನಾಗರಾಜ್‌ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ ಸ್ವಾತಂತ್ರ್ಯ ಉದ್ಯಾನದ ಬಳಿ ದೊಡ್ಡ ಹೈಡ್ರಾಮಾ ನಡೆಯಿತು. ಅಲ್ಲಿಗೆ ಪ್ರತಿಭಟನೆಗಾಗಿ ಆಗಮಿಸಿದ್ದ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ಸಾ.ರಾ. ಗೋವಿಂದು ಹಾಗೂ ಇನ್ನಿತರ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ಬಸ್‌ಗಳಿಗೆ ಹತ್ತಿಸಿ ಸ್ವಾತಂತ್ರ್ಯ ಉದ್ಯಾನಕ್ಕೆ ಕರೆತಂದರು.

ಇದಕ್ಕೆ ಕೆರಳಿದ ವಾಟಾಳ್ ಪೊಲೀಸರಿಗೆ ‘ಬಸ್‌ನಿಂದ ಇಳಿಯಲ್ರೀ.. ಅಲ್ಲಿಗೆ ಕರ್ಕೊಂಡು ಹೋಗಿ ಬಿಡಿ ನನ್ನನ್ನು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸರ್ಕಾರ, ಸರ್ಕಾರದಲ್ಲಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಹಾರಾಷ್ಟ್ರ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಟೌನ್‌ಹಾಲ್‌ ಬಳಿ ಬೆಳಗ್ಗೆ 11.45ರ ಸುಮಾರಿಗೆ ವಾಟಾಳ್‌ ನಾಗರಾಜ್‌ ಅವರನ್ನು ವಶಕ್ಕೆ ಪಡೆದು ಸ್ವಾತಂತ್ರ್ಯ ಉದ್ಯಾನಕ್ಕೆ ಪೊಲೀಸರು ಕರೆದೊಯ್ದರು. ಆದರೆ, ಅಲ್ಲಿ ಬಸ್‌ನಿಂದ ಇಳಿಯಲು ಒಪ್ಪದ ವಾಟಾಳ್‌ ನಾಗರಾಜ್‌ ಅವರು ಮಧ್ಯಾಹ್ನ 3.30ರವರೆಗೆ ಬಸ್‌ನಲ್ಲಿ ಇದ್ದರು. ನಂತರ ಉಪ್ಪಾರಪೇಟೆ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋದ ಪೊಲೀಸರು ಸಂಜೆ 4 ಗಂಟೆ ಸುಮಾರಿಗೆ ಹೋರಾಟಗಾರರಾದ ಸಾ.ರಾ.ಗೋವಿಂದು, ಕೆ.ಆರ್‌.ಕುಮಾರ್‌, ಶಿವರಾಮೇಗೌಡ, ರೂಪೇಶ್‌ ರಾಜಣ್ಣ, ಗಿರೀಶ್‌ಗೌಡ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಿಡುಗಡೆಗೆ ಮಾಡಿದರು.