ಸಾರಾಂಶ
ಚೆನ್ನೈ/ಕೋಲ್ಕತಾ: ಮೋದಿ ಸರ್ಕಾರ ಜಾರಿಗೆ ತಂದಿರುವ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಹಿಂದೂಯೇತರರಿಗೆ ಭಾರತದ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ ಮತ್ತು ಎಂ.ಕೆ. ಸ್ಟಾಲಿನ್ ವಿರೋಧಿಸಿದ್ದಾರೆ. ಈ ಕಾನೂನನ್ನು ತಮ್ಮ ರಾಜ್ಯದಲ್ಲಿ ಜಾರಿಗೆ ತರಲು ಬಿಡಲ್ಲ ಎಂದು ಉಭಯ ಸಿಎಂಗಳು ಹೇಳಿದ್ದಾರೆ.
ಸೋಮವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತಮ್ಮ ರಾಜ್ಯದಲ್ಲಿ ಸಿಎಎ ಜಾರಿಗೆ ಅವಕಾಶ ನೀಡಲ್ಲ ಎಂದಿದ್ದರು. ಹೀಗಾಗಿ ಸಿಎಎ ಜಾರಿಗೆ ಸಡ್ಡು ಹೊಡೆದ ರಾಜ್ಯಗಳ ಸಂಖ್ಯೆ 3ಕ್ಕೇರಿದಂತಾಗಿದೆ.ಸಿಎಎಗೆ ಅರ್ಜಿ ಸಲ್ಲಿಸುವವರು ತಾವು ಭಾರತದಲ್ಲಿ ಇರುವ ಬಗ್ಗೆ ತಾವಿರುವ ಊರಿನ ಅಧಿಕಾರಿಗಳಿಗೆ ತಮ್ಮ ವಾಸ ಪ್ರಮಾಣಪತ್ರಕ್ಕೆ ಕೋರಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಹೀಗಾಗಿ ಈ ಪ್ರಮಾಣಪತ್ರ ನೀಡಿಕೆಯಲ್ಲಿ ರಾಜ್ಯ ಸರ್ಕಾರಿ ಅಧಿಕಾರಿಗಳ ಪಾತ್ರವೂ ಇರುತ್ತದೆ. ಆದ್ದರಿಂದ ಈ 3 ರಾಜ್ಯಗಳ ಸಿಎಂಗಳ ಹೇಳಿಕೆಗೆ ಮಹತ್ವ ಬಂದಿದೆ.
ಸಿಎಎ ಸಮಾನತೆ ವಿರೋಧಿ- ಮಮತಾ:ಮಂಗಳವಾರ ಪ.ಬಂಗಾಳದ ಬರಸಾತ್‌ನಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ‘ಸಿಎಎ ಜಾರಿಯು ಸಮಾನತೆಯನ್ನು ಉಲ್ಲಂಘಿಸುವ ಕಾರಣದಿಂದ ಅಸಾಂವಿಧಾನಿಕ ಕ್ರಮವಾಗಿದೆ. ಬಂಗಾಳದಲ್ಲಿ ಇದರ ಜಾರಿಗೆ ನಾನು ಅವಕಾಶ ನೀಡಲ್ಲ’ ಎಂದಿದ್ದಾರೆ.
ಚೆನ್ನೈನಲ್ಲಿ ಸ್ಟಾಲಿನ್ ಮಾತನಾಡಿ, ‘ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾವುದೇ ಉಪಯೋಗವಿಲ್ಲ. ಇದರಿಂದ ಜನರಲ್ಲಿ ಒಡಕು ಮೂಡುತ್ತದೆಯೇ ಹೊರತು ಮತ್ತೇನೂ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ತಮಿಳನಾಡಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡುವುದಿಲ್ಲ’ ಎಂದಿದ್ದಾರೆ.