ಸಾರಾಂಶ
ಮಾಲೂರು : ಲೋಕಸಭೆ ಚುನಾವಣೆಯ ಸೋಲಿನಿಂದ ಹತಾಶರಾಗಿ ಜನತೆಯ ಮೇಲೆ ದ್ವೇಷ ಸಾಧಿಸಲು ರಾಜ್ಯ ಸರ್ಕಾರವು ತೈಲ ಬೆಲೆ ಹೆಚ್ಚಿಸಿದೆ. ಇದು ಜನ ವಿರೋಧಿ ಸರ್ಕಾರ ಎಂದು ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ಹೇಳಿದರು. ರಾಜ್ಯ ಸರ್ಕಾರದ ತೈಲ ಬೆಲೆ ಹೆಚ್ಚಿಸಿರುವುದನ್ನು ಖಂಡಿಸಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ತಹಸೀಲ್ದಾರ್ ಕಚೇರಿವರೆಗೆ ಎತ್ತಿನ ಗಾಡಿಯಲ್ಲಿ ಬಂದ ಮೈತ್ರಿ ಪಕ್ಷದ ಮುಖಂಡರುಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಮಾಜವಾದಿ ತತ್ವ ಎಲ್ಲಿ ಹೋಯ್ತು
ಈ ಹಿಂದೆ ಉತ್ತಮ ಆಡಳಿತ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಣ್ಣ ಅವರ ಸಮಾಜವಾದಿ ತತ್ವ ಎಲ್ಲಿ ಹೋಯಿತು. ಪ್ರಧಾನಿ ನರೇಂದ್ರ ಮೋದಿ ಅವರು ತೈಲ ಬೆಲೆಯನ್ನು ನಿಯಂತ್ರಣದಲ್ಲಿಡಲು ಯುರೋಪ್ ಒಕ್ಕೂಟ ರಾಜ್ಯಗಳನ್ನು ಎದುರು ಹಾಕಿಕೊಂಡು ರಷ್ಯ ದೇಶದಿಂದ ಕಡಿಮೆ ಬೆಲೆಗೆ ತೈಲ ಅಮದು ಮಾಡಿಕೊಂಡು ತೈಲ ದರ ನಿಯಂತ್ರಣದಲ್ಲಿಟ್ಟಿದ್ದರು. ಆದರೆ ರಾಜ್ಯ ಸರ್ಕಾರ ಇದಕ್ಕೆ ತದ್ವಿರುದ್ಧವಾಗಿದೆ ಎಂದರು.
ಕೋಚಿಮುಲ್ ನಂತಹ ರೈತರ ಸಂಸ್ಥೆಯಲ್ಲಿ ನೇಮಕಾತಿ ವಿಷಯದಲ್ಲಿ ಭಷ್ಟ್ರಚಾರ ನೆಡೆದಿದ್ದರೂ ಅಂತಹವರನ್ನು ರಕ್ಷಿಸಲು ಸರ್ಕಾರ ಹೊರಟ್ಟಿದೆ. ಇಂದಿನ ಕಾಂಗ್ರೆಸ್ ಸರ್ಕಾರ ಜನರ ಹಿತಕ್ಕಾಗಿ ಆಡಳಿತ ನಡೆಸದೆ ಕೇವಲ ೧೩೬ ಶಾಸಕರ ಜೀವನಕ್ಕಾಗಿ ನಡೆಸುತ್ತಿದೆ. ತೈಲ ಬೆಲೆ ಹೆಚ್ಚಳದಿಂದ ನೇರವಾಗಿ ಬಡಸಾಮಾನ್ಯರ ಜೀವನಕ್ಕೆ ತೊಂದರೆಯಾಗಲಿದೆ ಎಂದರು.ಲಂಚ ಕಾನೂನು ಬದ್ಧ ಮಾಡಿ
ಜೆಡಿಎಸ್ ಮುಖಂಡ ಜಿ.ಇ.ರಾಮೇಗೌಡ ಮಾತನಾಡಿ, ಕಾಂಗ್ರೆಸ್ ಆಡಳಿತ ರಾಜ್ಯ ಸರ್ಕಾರದಲ್ಲಿ ಎಷ್ಟು ಭಷ್ಟ್ರಚಾರ ತುಂಬಿಕೊಂಡಿದೆ. ಎಲ್ಲ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ಲಂಚವನ್ನು ಲೀಗಲೈಸ್ ಮಾಡಿ ದೇವಾಲಯಗಳಲ್ಲಿ ಹಾಕಲಾಗುವ ಸೇವಾ ಶುಲ್ಕದಂತೆ ಲಂಚ ದ ಪಟ್ಟಿಯ ಫಲಕಗಳನ್ನು ಹಾಕಿಸಿಬೇಕಾಗಿದೆ. ಇದರಿಂದ ಜನಸಾಮಾನ್ಯರು ನಿತ್ಯ ಅಲೆದಾಡುವುದನ್ನು ತಪ್ಪಿ ಸೇವಾ ಶುಲ್ಕದ ಜತೆ ಲಂಚದ ಹಣವನ್ನು ನೀಡಿ ತಮ್ಮ ಕೆಲಸ ಮಾಡಿಕೊಳ್ಳುತ್ತಾರೆ ಎಂದು ವ್ಯಗ್ಯವಾಡಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ,ಜೆಡಿಎಸ್ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ,ಬಿಜೆಪಿಯ ಮಾಜಿ ಅಧ್ಯಕ್ಷ ಪುರನಾರಾಯಣಸ್ವಾಮಿ,ಮಾಜಿ ಜಿ.ಪಂ.ಸದಸ್ತ ರಾಮಸ್ವಾಮಿ ರೆಡ್ಡಿ,ಚಿನ್ನಸ್ವಾಮಿಗೌಡ,ಎಸ್.ವಿ.ಲೋಕೇಶ್,ಬೆಳ್ಳಾವಿ ಸೋಮಣ್ಣ ,ಅಪ್ಪಿ ರಾಜು,ಚಂದ್ರಶೇಖರ್ ,ಗ್ಯಾಸ್ ರಾಘು,ವೇಮನ,ಮುನಿಯಪ್ಪ,ಪಂಚೆ ನಂಜುಂಡಪ್ಪ, ಇನ್ನಿತರರು ಇದ್ದರು.