ಸಾರಾಂಶ
ಬೆಂಗಳೂರು : ಅಧಿವೇಶನಕ್ಕೆ ಹಾಜರಾಗುವ ಸಚಿವರು ಮತ್ತು ಶಾಸಕರ ಹಾಜರಾತಿ ಪರಿಶೀಲನೆಗಾಗಿ ಈ ಬಾರಿ ವಿಶೇಷ ತಂತ್ರಜ್ಞಾನ ಅಳವಡಿಸಲಾಗಿದೆ. ಈ ತಂತ್ರಜ್ಞಾನದಿಂದಾಗಿ ಯಾರು, ಎಷ್ಟು ಸಮಯ ಅಧಿವೇಶನದಲ್ಲಿ ಹಾಜರಿದ್ದರು ಎಂಬುದು ಗೊತ್ತಾಗಲಿದೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಜತೆ ಜಂಟಿ ಪ್ರತಿಕಾಗೋಷ್ಠಿ ನಡೆಸಿದ ಅವರು, ಹೊಸ ತಂತ್ರಜ್ಞಾನ ಅಳವಡಿಕೆಯಿಂದ ದಿನಕ್ಕೆ ಎಷ್ಟು ಬಾರಿ ಅಧಿವೇಶನಕ್ಕೆ ಬಂದು ಹೋದರು ಎಂಬ ಬಗ್ಗೆ ನಿಖರವಾದ ಮಾಹಿತಿ ಸಿಗಲಿದೆ. ಅಲ್ಲದೇ, ಸದಸ್ಯರು ಅಧಿವೇಶನದೊಳಗೆ ಎಷ್ಟು ಹೊತ್ತು ಕುಳಿತಿದ್ದಾರೆ ಎಂಬುದು ಸಹ ತಿಳಿಯಲಿದೆ ಎಂದರು.
ಇದೇ ವೇಳೆ ಇಡೀ ದಿನ ಸದನದೊಳಗೆ ಇರುವಂತಹ ಸದಸ್ಯರಿಗೆ ವಿಶೇಷ ಕೊಡುಗೆ ನೀಡಲು ತೀರ್ಮಾನಿಸಲಾಗಿದೆ. ಸದ್ಯಕ್ಕೆ ಸದನಕ್ಕೆ ಮೊದಲು ಆಗಮಿಸುವವರಿಗೆ ವಿಶೇಷ ಕೊಡುಗೆಯಾಗಿ ಟೀ ಕಪ್ ಅನ್ನು ನೀಡಲಾಗುತ್ತಿದೆ. ಅಂತೆಯೇ ಇಡೀ ದಿನ ಸದನದಲ್ಲಿರುವ ಸದಸ್ಯರಿಗೂ ವಿಶೇಷ ಕೊಡುಗೆ ನೀಡುವ ಬಗ್ಗೆ ನಿರ್ಧರಿಸಲಾಗಿದೆ. ಇನ್ನು, ಈ ಬಾರಿ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಈ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವ ಸಲುವಾಗಿ ಆಯ್ಕೆ ಸಮಿತಿಯನ್ನು ಶೀಘ್ರದಲ್ಲಿಯೇ ರಚಿಸಲಾಗುವುದು ಎಂದು ತಿಳಿಸಿದರು.ವಿಧಾನಮಂಡಲದ ಅಧಿವೇಶನ ವೀಕ್ಷಿಸಲು ದೇಶ-ವಿದೇಶದಿಂದಲೂ ಸಮಿತಿಗಳು ಆಗಮಿಸುತ್ತವೆ. ಈ ಹಿನ್ನೆಲೆಯಲ್ಲಿ ಕೆಲವೊಂದು ನವೀಕರಣ ಮಾಡಲಾಗುತ್ತಿದೆ. ನವೀಕರಣ ಕಾರ್ಯಗಳು ಮುಗಿದಿದ್ದು, ಇದೇ 15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಉಭಯ ಸದನಗಳ ಗೌರವವು ದೇಶ-ವಿದೇಶದಲ್ಲಿಯೂ ಹೆಚ್ಚುವಂತಹ ಕಾರ್ಯ ಕೈಗೊಳ್ಳಲಾಗಿದೆ ಎಂದು ಹೇಳಿದರು.
9 ದಿನ ಅಧಿವೇಶನ: ಸೋಮವಾರದಿಂದ ಅಧಿವೇಶನ ಆರಂಭವಾಗಲಿದ್ದು, ಇದೇ 26ರವರೆಗೆ ನಡೆಯಲಿದೆ. ಒಟ್ಟು ಒಂಭತ್ತು ದಿನಗಳ ಕಾಲ ಸದನ ನಡೆಯಲಿದ್ದು, ನಿಧನ ಹೊಂದಿರುವ ಗಣ್ಯವ್ಯಕ್ತಿಗಳಿಗೆ ಮೊದಲ ದಿನ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಲಾಗುವುದು. ನಂತರ ಸರ್ಕಾರದಿಂದ ಸ್ವೀಕರಿಸಲಾಗುವ ವಿಧೇಯಕಗಳನ್ನು ಪರ್ಯಾಲೋಚನೆಗೆ ಹಾಗೂ ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುವುದು. ವಿಧೇಯಕಗಳನ್ನು ಮೊದಲೇ ಸದನಕ್ಕೆ ನೀಡುವಂತೆ ಸರ್ಕಾರಕ್ಕೆ ತಿಳಿಸಲಾಗಿದೆ. ಇದರಿಂದ ಚರ್ಚೆ ನಡೆಸಲು ಸುಲಭವಾಗಲಿದೆ ಎಂದು ತಿಳಿಸಿದರು.
2023-24ನೇ ಸಾಲಿನ ಕರ್ನಾಟಕ ವಿಧಾನ ಮಂಡಲ, ವಿಧಾನಸಭೆಯ ಸ್ಥಾಯಿ ಸಮಿತಿಗಳ ಅವಧಿಯು ಆ.8 ರಂದು ಮುಕ್ತಾಯಗೊಳ್ಳಲಿದೆ. ಹೀಗಾಗಿ 2024-25ನೇ ಸಾಲಿಗೆ ಹೊಸದಾಗಿ ಸಮಿತಿಗಳನ್ನು ರಚಿಸುವ ಸಂಬಂಧ ಚುನಾವಣಾ ಪ್ರಸ್ತಾವವನ್ನು ಮಂಡಿಸಿ, ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ವರ್ಷಕ್ಕೆ 60 ದಿನ ಅಧಿವೇಶನ ನಡೆಯಬೇಕು ಎಂಬ ನಿಯಮ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ನಿಯಮದಂತೆ ನಡೆಯುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಹೆಚ್ಚು ದಿನ ಅಧಿವೇಶನ ನಡೆದರೆ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸಹಕಾರಿಯಾಗಲಿದೆ. ಹೆಚ್ಚು ದಿನ ಅಧಿವೇಶನ ನಡೆಯುವುದು ಒಳ್ಳೆಯದು. ಆದರೆ, ಅಧಿವೇಶನವನ್ನು ಎಷ್ಟು ದಿನ ನಡೆಸಬೇಕೆಂಬುದರ ಬಗ್ಗೆ ನಿರ್ಧಾರ ಮಾಡುವುದು ಸರ್ಕಾರ. ಈ ನಡುವೆ, ಈ ಬಾರಿ ಕಳೆದ ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿ ಮಂಡಿಸಲಾದ ವಿಧೇಯಕಗಳನ್ನು ಪರಿಷತ್ತಿನಲ್ಲಿ ಅಂಗೀಕಾರಕ್ಕಾಗಿ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಒಂಭತ್ತು ದಿನ ಅಧಿವೇಶನ ನಡೆಯುತ್ತದೆ. ಸಲಹಾ ಸಮಿತಿ ಸಭೆ ನಂತರ ಅಧಿವೇಶನ ಮುಂದುವರಿಸಬೇಕೇ? ಬೇಡವೇ? ಎಂಬುದರ ಕುರಿತು ನಿರ್ಧಾರವಾಗಲಿದೆ ಎಂದು ಹೇಳಿದ ಅವರು, ಸಚಿವರು ಕೊಠಡಿಗಳಿಗೆ ಸುಣ್ಣ, ಬಣ್ಣ ಹಚ್ಚಿಕೊಳ್ಳಲು ಅವಕಾಶ ಇದೆ. ಆದರೆ, ನವೀಕರಣ ಮಾಡಬಾರದು, ಅದಕ್ಕೆಅನುಮತಿ ಪಡೆದು ಮಾಡಬೇಕು. ವಿಧಾನಸೌಧವನ್ನು ವಾಸ್ತು ಪ್ರಕಾರ ನಿರ್ಮಿಸಿದ್ದಾರೆ. ಯಾವ ಸಚಿವರೂ ಕೊಠಡಿಯ ಗೋಡೆ ಹೊಡೆಯುವುದಕ್ಕೆ ಅವಕಾಶವಿಲ್ಲ ಎಂದು ಹೇಳಿದರು.
ಲೆಜಿಸ್ಲೇಚರ್ ಕಪ್ ಚೆಸ್ ಪಂದ್ಯಾವಳಿ: ವಿಶ್ವ ಚೆಸ್ ದಿನಾಚರಣೆಯ ಅಂಗವಾಗಿ ಈ ಬಾರಿ ಸಚಿವರು, ಶಾಸಕರು, ಅಧಿಕಾರಿಗಳಿಗೆ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಲೆಜಿಸ್ಲೇಚರ್ ಕಪ್ ಚೆಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ ಪಂದ್ಯಾವಳಿಗೆ ಪತ್ರಕರ್ತರೂ ಭಾಗವಹಿಸಬಹುದಾಗಿದ್ದು, ಅವರೂ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಇದೇ 20ರಂದು ಚೆಸ್ ಸ್ಪರ್ಧೆ ಆಯೋಜಿಸಲಾಗಿದೆ. ಜಯ ಗಳಿಸುವವರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ ಎಂದು ಖಾದರ್ ತಿಳಿಸಿದರು.