ಸಾರಾಂಶ
ಕೋಲಾರ : ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವಲ್ಲಿ ಕಾರ್ಯಕರ್ತವರು ವಿಫಲವಾಗಿದ್ದಾರೆ. ಪರಿಣಾಮ, ಚುನಾವಣೆಯಲ್ಲಿ ಪಕ್ಷ ಹಿನ್ನಡೆ ಅನುಭವಿಸುವಂತಾಯಿತು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ತಿಳಿಸಿದರು.ನಗರದ ರತ್ನ ಕನ್ವೆನ್ಷನ್ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ದಶಕದಿಂದ ಯಾವುದೇ ಭ್ರಷ್ಟಾಚಾರ ಆರೋಪವಿಲ್ಲದೆ ಆಡಳಿತ ನಡೆಸಿದಂತಹ ಬಿಜೆಪಿ ಸರಕಾರ ೩೦೦ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಬೇಕಾಗಿತ್ತು. ಆದರೆ, ಬೂತ್ ಮಟ್ಟದಲ್ಲಿ ಸರ್ಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸಲು ಸಾಧ್ಯವಾಗಿಲ್ಲ ಎಂದರು.ಸ್ಥಳೀಯ ಚುನಾವಣೆಗೆ ಸಿದ್ಧತೆ
ಜಿಪಂ, ತಾಪಂ ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸಾಧನೆಗಳು, ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ ಪ್ರಕರಣಗಳು ಹಾಗೂ ದಲಿತರಿಗೆ ಮಾಡುತ್ತಿರುವ ಅನ್ಯಾಯದ ವಿಷಯಗಳನ್ನು ಜನರಿಗೆ ಮುಟ್ಟಿಸಬೇಕು. ಇದರಿಂದಾಗಿ ಮುಂದೆ ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ನರೇಂದ್ರ ಮೋದಿಯವರು ಒಂದು ದಿನವೂ ರಜೆ ಹಾಕದೆ ದೇಶದ ಜನರಿಗಾಗಿ ಕೆಲಸ ಮಾಡಿದ್ದಾರೆ. ಹಲವಾರು ಯೋಜನೆಗಳನ್ನು ತಂದಿದ್ದಾರೆ. ಇಷ್ಟು ವರ್ಷಗಳ ಕಾಲ ಸಿದ್ದರಾಮಯ್ಯ ವಿರೋಧ ಪಕ್ಷದವರನ್ನು ಗೇಲಿ ಮಾಡುತ್ತಿದ್ದರು. ಆದರೆ, ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಅವರಿಗೂ ಗೊತ್ತಿರುವುದರಿಂದ ಮನಸ್ಸಿನಲ್ಲಿ ನಾವು ತಪ್ಪು ಮಾಡಿದ್ದೇವೆಂದು ಗೊತ್ತಾಗಿದೆ. ಇದರಿಂದ ಅವರಿಗೆ ರಕ್ತದೊತ್ತಡ ಹಾಗೂ ಮಧುಮೇಹ ಹೆಚ್ಚಾಗಿದೆ ಎಂದು ವ್ಯಂಗ್ಯವಾಡಿದರು.ಸಿದ್ದರಾಮಯ್ಯರ ಕೈಗೊಂಬೆ
ಜಿಲ್ಲೆಯಲ್ಲಿರುವಂತಹ ದಲಿತ ಸಂಘಟನೆಗಳು ದಲಿತರ ಅನ್ಯಾಯವಾದಂತಹ ಸಂದರ್ಭದಲ್ಲಿ ಬೀದಿಗೆ ಬಂದು ಹೋರಾಟ ನಡೆಸಬೇಕಾಗಿತ್ತು. ಆದರೆ, ಕೆಲವು ಸಂಘಟನೆಗಳು ಸಿದ್ದರಾಮಯ್ಯರ ಕೈಗೊಂಬೆಯಾಗಿದ್ದು, ಸಿದ್ದರಾಮಯ್ಯ ದಲಿತರಿಗೆ ಮೋಸ ಮಾಡಿದರೂ ಪರವಾಗಿಲ್ಲ ಎನ್ನುವ ಮನೋಭಾವ ಹೊಂದಿರುವುದು ಕಳವಳಕಾರಿ ವಿಷಯವಾಗಿದೆ ಎಂದು ಟೀಕಿಸಿದರು.ಕೋಲಾರ ಜಿಲ್ಲೆ ಭ್ರಷ್ಟಾಚಾರ
ಜಿಲ್ಲೆಯಲ್ಲಿ ಭ್ರಷ್ಟಾಚಾರ ಕಾನೂನು ಬದ್ಧವಾಗಿಸಿಕೊಂಡಿರುವ ಅಧಿಕಾರಿಗಳು ತಹಸೀಲ್ದಾರ್, ಎಸಿ, ಡಿಸಿಗಳಿಗೆ ಇಂತಿಷ್ಟು ಲಂಚವೆಂದು ದರಪಟ್ಟಿ ಹಾಕಿಕೊಂಡಿದ್ದು, ಹಣ ಕೊಡಿದ್ದರೆ ಯಾವುದೇ ಕೆಲಸವಾಗದಂತಹ ಪರಿಸ್ಥಿತಿಯಿದೆ ಎಂದು ಮಾಜಿ ಶಾಸಕ ಮಂಜುನಾಥಗೌಡ ಆರೋಪಿಸಿದರು.ಕೋಚಿಮುಲ್‌ನ ನೇಮಕಾತಿಯಲ್ಲಿ ಒಬ್ಬ ಅಭ್ಯರ್ಥಿಯಿಂದ ೩೦-೪೦ ಲಕ್ಷ ರೂ. ಲಂಚ ಪಡೆದಿರುವುದು ಸಾಬೀತಾಗಿ, ಜಾರಿ ನಿರ್ದೇಶನಾಲಯ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುವಂತೆ ಲೋಕಾಯುಕ್ತರಿಗೆ ತಿಳಿಸಿದರೂ, ಸರ್ಕಾರ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಹೇಳಿದರು.