ಸಾರಾಂಶ
ಬೆಂಗಳೂರಿನ ‘ಅಭಿವೃದ್ಧಿ’ ಕುರಿತು ಉದ್ಯಮಿ ಹರ್ಷ ಗೋಯೆಂಕಾ ಅವರು ಮಾಡಿರುವ ಟೀಕಾತ್ಮಕ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮುಂಬೈ: ಬೆಂಗಳೂರಿನ ‘ಅಭಿವೃದ್ಧಿ’ ಕುರಿತು ಉದ್ಯಮಿ ಹರ್ಷ ಗೋಯೆಂಕಾ ಅವರು ಮಾಡಿರುವ ಟೀಕಾತ್ಮಕ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇನ್ಫೋಸಿಸ್ ಸಹ-ಸಂಸ್ಥಾಪಕರಾದ ನಾರಾಯಣಮೂರ್ತಿ ಮತ್ತು ನಂದನ್ ನಿಲೇಕಣಿ ಅವರ ಫೋಟೋವನ್ನು ಹಂಚಿಕೊಂಡ ಅವರು, ಬೆಂಗಳೂರು ನಗರವು ‘ಶಾಂತಿಯುತ ಸ್ವರ್ಗ’ದಿಂದ ಜನದಟ್ಟಣೆ ಹಾಗೂ ವಾಹನದಟ್ಟಣೆಯಿಂದ ಕೂಡಿದ ಮಹಾನಗರವಾಗಿ ಹೇಗೆ ಬದಲಾಗಿದೆ ಎಂಬುದನ್ನು ವಿವರಿಸಿದ್ದಾರೆ. ಅದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ಟ್ವೀಟ್‌ನಲ್ಲೇನಿದೆ?:
‘ಒಂದು ಕಾಲದಲ್ಲಿ, ಬೆಂಗಳೂರು ಪ್ರಶಾಂತವಾದ ಸ್ವರ್ಗವಾಗಿತ್ತು. ಕಬ್ಬನ್ ಪಾರ್ಕ್‌ನಲ್ಲಿ ಬೆಳಗಿನ ನಡಿಗೆ, ಪ್ರೀಮಿಯರ್ ಪದ್ಮಿನಿಯಲ್ಲಿ ಡ್ರೈವ್‌ಗಳು ಮತ್ತು ಪುಸ್ತಕ ಮಳಿಗೆಗಳಲ್ಲಿ ಕಳೆದ ‘ಸೋಮಾರಿ ಮಧ್ಯಾಹ್ನ’ಗಳು ಸೊಗಸಾಗಿದ್ದವು. ಆದರೆ ನಂತರ ಒಂದಷ್ಟು ಪ್ರತಿಭಾವಂತ ಐಐಟಿಯನ್ನರು ತಮ್ಮ ಸಂಗಾತಿಯಿಂದ ಹಣ ಪಡೆದು ಐಟಿ ಉದ್ಯಮ ಬೆಳೆಸಿದರು. ಈಗ ಗಾರ್ಡನ್ ಸಿಟಿಯ ತಂಗಾಳಿಯನ್ನು ಆನಂದಿಸುವುದಕ್ಕಿಂತ ಔಟರ್ ರಿಂಗ್ ರಸ್ತೆಯಲ್ಲಿ (ಟ್ರಾಫಿಕ್ ಜಾಂನಲ್ಲಿ) ಹೆಚ್ಚು ಸಮಯ ಕಳೆಯುತ್ತೇವೆ. ಇದನ್ನು ಪ್ರಗತಿ ಎಂದು ಕರೆಯುತ್ತಾರೆ!’ ಎಂದು ಪೋಸ್ಟ್ ಮಾಡಿದ್ದಾರೆ.ಚರ್ಚೆಗೆ ಗ್ರಾಸ:
ಗೋಯೆಂಕಾ ಅವರ ಟ್ವೀಟ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಒಂದು ಕಾಲದಲ್ಲಿ ಪ್ರಶಾಂತ ಉದ್ಯಾನವನಗಳಿಗೆ ಹೆಸರುವಾಸಿಯಾಗಿದ್ದ ಬೆಂಗಳೂರು ಈಗ ಕೆಟ್ಟ ಟ್ರಾಫಿಕ್ ಅನುಭವ ನೀಡುತ್ತದೆ. ನಿಮ್ಮ ವಾಹನವೇ ನಿಮಗಿಂತ ಹೆಚ್ಚು ಸಮಯ ಪಾರ್ಕ್ ಆಗಿರುತ್ತದೆ. ಬೆಂಗಳೂರಿನ ರೂಪಾಂತರದ ಕುರಿತೇ ಅಧ್ಯಯನ ಕೈಗೊಳ್ಳಬಹುದು. ಐಐಟಿಯನ್ನರು ಮತ್ತು ಇನ್ಫೋಸಿಸ್‌ಗೆ ಧನ್ಯವಾದಗಳು’ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.ಇನ್ನೊಬ್ಬರು ‘ಬ್ರೆಡ್‌ನ ಎರಡೂ ಬದಿ ಬೆಣ್ಣೆ ಹಾಕಿಕೊಂಡು ತಿನ್ನಲು ಸಾಧ್ಯವಿಲ್ಲ ಗೋಯೆಂಕಾ ಸಾಹೇಬ್. ನಗರ ನಿರ್ಮಾತೃಗಳು ಐಟಿ ಕಂಪನಿಗಳಿಗೆ ಜಾಗ ಕೊಟ್ಟಿದ್ದೇ ಅವರನ್ನಿಂದು ತಿನ್ನುತ್ತಿರಬೇಕು’ ಎಂದಿದ್ದಾರೆ.