ಚುನಾವಣಾ ಕಣದ ಘಟಾನುಘಟಿಗಳು ಕೋಟ್ಯಧಿಪತಿಗಳು

| Published : Apr 16 2024, 09:48 AM IST

Withdrawal Money

ಸಾರಾಂಶ

ರಾಜ್ಯದಲ್ಲಿ 2ನೇ ಹಂತದಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಸೋಮವಾರ 52 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.  ಇದರಲ್ಲಿ ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ. ಬಹುತೇಕ ಘಟಾನುಘಟಿ ಅಭ್ಯರ್ಥಿಗಳ ಆಸ್ತಿ ಕೋಟಿಗಳ ಲೆಕ್ಕದಲ್ಲಿ ಇದೆ. 

ಬೆಂಗಳೂರು:  ರಾಜ್ಯದಲ್ಲಿ 2ನೇ ಹಂತದಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಸೋಮವಾರ 52 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಜಗದೀಶ್‌ ಶೆಟ್ಟರ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಪುತ್ರ ಮೃಣಾಲ್‌, ಗೀತಾ ಸೇರಿ ಹಲವರು ಉಮೇದುವಾರಿಕೆ ಸಲ್ಲಿಸಿದ್ದು ಇದರಲ್ಲಿ ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ. ಬಹುತೇಕ ಘಟಾನುಘಟಿ ಅಭ್ಯರ್ಥಿಗಳ ಆಸ್ತಿ ಕೋಟಿಗಳ ಲೆಕ್ಕದಲ್ಲಿ ಇದೆ.  

ಧಾರವಾಡ : ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ಉಮೇದುವಾರಿಕೆ ಸಲ್ಲಿಸಿರುವ ಪ್ರಹ್ಲಾದ ಜೋಶಿ ಅವರು ತಮ್ಮ ಹೆಸರಿನಲ್ಲಿ ಚರಾಸ್ತಿ ಹಾಗೂ ಸ್ಥಿರಾಸ್ತಿ ಸೇರಿ ₹13.96 ಕೋಟಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.

ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದ ಆಸ್ತಿ ಘೋಷಣೆ ಮಾಡಿರುವ ಜೋಶಿ ತಮ್ಮಲ್ಲಿ ₹2.72 ಕೋಟಿ ಚರಾಸ್ತಿ, ₹11.24 ಕೋಟಿ ಸ್ಥಿರಾಸ್ತಿ ಸೇರಿ ಒಟ್ಟು ₹13.96 ಕೋಟಿ ಆಸ್ತಿ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಚರಾಸ್ತಿ ಪೈಕಿ ಪ್ರಹ್ಲಾದ ಜೋಶಿ ₹1 ಲಕ್ಷ ನಗದು ಹೊಂದಿದ್ದು, ₹12.14 ಲಕ್ಷ ಮೌಲ್ಯದ 184 ಗ್ರಾಂ ಚಿನ್ನದ ಆಭರಣ, ₹3.65 ಲಕ್ಷ ಮೌಲ್ಯದ 5 ಕೆಜಿ ಬೆಳ್ಳಿ ಹೊಂದಿದ್ದಾರೆ.

ಹಾಗೆಯೇ, ಸ್ಥಿರಾಸ್ತಿ ಪೈಕಿ ಹುಬ್ಬಳ್ಳಿ, ಬೆಂಗಳೂರಿನಲ್ಲಿ ₹2.64 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಹೊಂದಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ ₹6.63 ಲಕ್ಷ ಸಾಲವನ್ನೂ ಹೊಂದಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಇನ್ನು, ಪತ್ನಿ ಜ್ಯೋತಿ ಹೆಸರಿನಲ್ಲಿ ₹5.93 ಕೋಟಿ ಚರಾಸ್ತಿ ಹಾಗೂ ₹86.39 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ. ಚರಾಸ್ತಿ ಪೈಕಿ ₹1.10 ಲಕ್ಷ ನಗದು ಹೊಂದಿದ್ದಾರೆ. ₹33 ಲಕ್ಷ ಮೌಲ್ಯದ 500 ಗ್ರಾಂ ಚಿನ್ನದ ಆಭರಣ, ₹1.46 ಲಕ್ಷ ಮೌಲ್ಯದ 2 ಕೆಜಿ ಬೆಳ್ಳಿ ವಸ್ತು ಹೊಂದಿದ್ದಾರೆ. ಹಾಗೆಯೇ ₹1.37 ಕೋಟಿ ಸಾಲವನ್ನೂ ಮಾಡಿಕೊಂಡಿದ್ದಾರೆ. ಪ್ರಹ್ಲಾದ ಜೋಶಿ ಅವರ ಕುಟುಂಬದ ಹೆಸರಿನಲ್ಲಿ ₹21.07 ಕೋಟಿ ಆಸ್ತಿ ಇದೆ. ವಿಶೇಷ ಎಂದರೆ ಕುಟುಂಬದ ಯಾರ ಹೆಸರಿನಲ್ಲಿ ಒಂದೂ ಕಾರು ಇಲ್ಲ.

ಐದು ವರ್ಷಗಳಲ್ಲಿ ಜೋಶಿ ಅವರ ಆಸ್ತಿ ₹2.82 ಕೋಟಿ ಏರಿಕೆಯಾಗಿದೆ. ಹಾಗೆಯೇ, ಕುಟುಂಬದ ಆಸ್ತಿಯಲ್ಲಿ ₹6.9 ಕೋಟಿ ಏರಿಕೆಯಾಗಿದೆ.