ಯತ್ನಾಳ್‌ ನಂಬಿದ್ದ ಭಿನ್ನರ ಬಣಕ್ಕೆ ಉಚ್ಚಾಟನೆ ಶಾಕ್‌ : ಅಚ್ಚರಿ ಮೂಡಿಸಿದ ಹೈಕಮಾಂಡ್‌ ನಿರ್ಧಾರ

| N/A | Published : Mar 27 2025, 11:15 AM IST

bjp flag
ಯತ್ನಾಳ್‌ ನಂಬಿದ್ದ ಭಿನ್ನರ ಬಣಕ್ಕೆ ಉಚ್ಚಾಟನೆ ಶಾಕ್‌ : ಅಚ್ಚರಿ ಮೂಡಿಸಿದ ಹೈಕಮಾಂಡ್‌ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಪಕ್ಷದ ಶಿಸ್ತು ಉಲ್ಲಂಘಿಸಿದ ಆರೋಪದಡಿ ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಆದೇಶದ ಸುದ್ದಿ ಅವರ ಬಣದ ಮುಖಂಡರಿಗೆ ಬರಸಿಡಿಲಿನಂತೆ ಅಪ್ಪಳಿಸಿದ್ದು, ನಿರಾಸೆಯ ಛಾಯೆ ಆವರಿಸುವಂತೆ ಮಾಡಿದೆ.

ಬೆಂಗಳೂರು : ಪಕ್ಷದ ಶಿಸ್ತು ಉಲ್ಲಂಘಿಸಿದ ಆರೋಪದಡಿ ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಆದೇಶದ ಸುದ್ದಿ ಅವರ ಬಣದ ಮುಖಂಡರಿಗೆ ಬರಸಿಡಿಲಿನಂತೆ ಅಪ್ಪಳಿಸಿದ್ದು, ನಿರಾಸೆಯ ಛಾಯೆ ಆವರಿಸುವಂತೆ ಮಾಡಿದೆ.

ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಂಬಲಿಗರೂ ಆಗಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರಿಗೆ ಹೈಕಮಾಂಡ್‌ನಿಂದ ಶೋಕಾಸ್ ನೋಟಿಸ್ ಜಾರಿಗೊಳಿಸಿದ ಬೆನ್ನಲ್ಲೇ ಯತ್ನಾಳ್ ಬಣದಲ್ಲಿ ಸಂತಸ ಉಂಟಾಗಿತ್ತು. ಇನ್ನೇನು ತಮ್ಮ ಬೇಡಿಕೆ ಈಡೇರಬಹುದು ಎಂಬ ಉತ್ಸಾಹ ಹೆಚ್ಚಿತ್ತು.

ಆದರೆ, ಆ ಉತ್ಸಾಹ ಒಂದಿನ ದಿನವೂ ಉಳಿಯಲಿಲ್ಲ. ಬುಧವಾರ ಸಂಜೆ ಹೊತ್ತಿಗೆ ತಮ್ಮ ಬಣದ ನಾಯಕ ಯತ್ನಾಳ್ ಅವರನ್ನೇ ಉಚ್ಚಾಟಿಸುವ ಆದೇಶ ಹೊರಬೀ‍ಳುತ್ತದೆ ಎಂಬ ಸಣ್ಣ ಸುಳಿವೂ ಮುಖಂಡರಿಗೆ ಸಿಕ್ಕಿರಲಿಲ್ಲ. ಹೈಕಮಾಂಡ್ ತಮ್ಮ ಪರವಾಗಿ ನಿಲ್ಲಲಿದೆ ಎಂಬ ನಿರೀಕ್ಷೆಯಲ್ಲಿದ್ದ ಯತ್ನಾಳ್ ಬಣದ ಮುಖಂಡರಿಗೆ ಮುಂದೇನು ಎಂಬ ಪ್ರಶ್ನೆ ಎದುರಾಗಿದೆ.

ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿರುವ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ, ಜಿ.ಎಂ.ಸಿದ್ದೇಶ್ವರ್‌, ಅಣ್ಣಾ ಸಾಹೇಬ್ ಜೊಲ್ಲೆ, ಪ್ರತಾಪ್ ಸಿಂಹ, ಬಿ.ವಿ.ನಾಯಕ್‌, ಬಿ.ಪಿ.ಹರೀಶ್‌ ಮತ್ತಿತರರಿಗೂ ಇದೀಗ ಆತಂಕ ಶುರುವಾಗಿದೆ. ಒಂದು ವೇಳೆ ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸುವ ನಿರ್ಧಾರ ಹೊರಬಿದ್ದಲ್ಲಿ ಏನು ಮಾಡಬೇಕು ಎಂಬ ಗೊಂದಲದಲ್ಲಿ ಅವರು ಸಿಲುಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ದೂರವಾಣಿ ಮೂಲಕ ಪರಸ್ಪರ ಸಮಾಲೋಚನೆ ನಡೆಸಿರುವ ಮುಖಂಡರು ಯತ್ನಾಳ್ ಬೆಂಗಳೂರಿಗೆ ವಾಪಸಾದ ಬಳಿಕ ಒಂದು ಸುತ್ತಿನ ಮಾತುಕತೆ ನಡೆಸುವ ಸಾಧ್ಯತೆಯೂ ಇದೆ. ಆದರೆ, ಮಾಧ್ಯಮಗಳಿಂದ ದೂರ ಉಳಿದು ತಂತ್ರಗಾರಿಕೆ ಮುಂದುವರೆಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.