ಗವರ್ನರ್‌ ಗೈರು ಹಾಜರಿಗೆ ಹಾಜರಿಗೆ ನಿಖರ ಕಾರಣ ಗೊತ್ತಿಲ್ಲ : ಸಿಎಂ ಬದಲಾವಣೆ ಶೇ.100ರಷ್ಟು ಆಗುವುದಿಲ್ಲ

| Published : Sep 03 2024, 01:38 AM IST / Updated: Sep 03 2024, 04:07 AM IST

Dr MC Sudhakar

ಸಾರಾಂಶ

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ರಾಜ್ಯಪಾಲರು ಗೈರಾಗಿದ್ದಕ್ಕೆ ನಿಖರ ಕಾರಣ ತಿಳಿದಿಲ್ಲ ಎಂದು ಸಚಿವ ಸುಧಾಕರ್ ಹೇಳಿದ್ದಾರೆ. ಸಿಎಂ ಬದಲಾವಣೆ ಸಾಧ್ಯತೆ ಇಲ್ಲ ಮತ್ತು ಮಹಿಳಾ ಸಂಘಗಳ ಸಾಲ ಮನ್ನಾ ಮಾಡುವ ಭರವಸೆ ನೀಡಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

 ಕೋಲಾರ  : ಇಂದಿನ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲರು ಗೈರು ಹಾಜರಾಗುವಿಕೆಗೆ ನಿಖರ ಕಾರಣ ಗೊತ್ತಿಲ್ಲ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ 4ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ ಕುರಿತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಕಾರಣಕ್ಕೆ ರಾಜ್ಯಪಾಲರು ಬಂದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಬೇರೆ ಕಾರಣವೂ ಇರಬಹುದು ಎಂದರು.ಎತ್ತಿನ ಹೊಳೆ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ತುಮಕೂರಿಗೆ 5 ಟಿ.ಎಂ.ಸಿ ನೀರು ವಿತರಣೆಯ ಯೋಜನೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಇನ್ನು ಪರಿಹಾರ ವಿತರಣೆಯು ತೀರ್ಮಾನವಾಗದ ಹಿನ್ನೆಲೆಯಲ್ಲಿ ವಿಳಂಬವಾಗಿದೆ ಎಂದರು.ಸಿಎಂ ಬದಲಾವಣೆ ಆಗೋಲ್ಲ

ಸಿಎಂ ಬದಲಾವಣೆ ಶೇ.100 ರಷ್ಟು ಆಗುವುದಿಲ್ಲ, ದೇಶಪಾಂಡೆ ಹೇಳಿಕೆ ಅವರ ವೈಯುಕ್ತಿಕ. ರಾಜಕಾರಣದಲ್ಲಿ ಪ್ರತಿಯೊಬ್ಬರಿಗೆ ಉನ್ನತ ಸ್ಥಾನಮಾನದ ಬಗ್ಗೆ ಆಶೆ ಇರುವುದು ಸಹಜ, ಆದರೆ ಸಿಎಂ ಬದಲಾವಣೆ ವಿಷಯವಾಗಿ ಪ್ರತಿಪಕ್ಷಗಳಿಗೆ ಪ್ರಶ್ನಿಸುವಂತ ಯಾವುದೇ ನೈತಿಕತೆ ಇಲ್ಲ ಎಂದರು. ಕೋವಿಡ್ ಹಗರಣದ ಬಗ್ಗೆ ಲೋಪ ದೋಷಗಳ ಕುರಿತು ತಾವುಗಳು ಸತ್ಯಹರಿಶ್ಚಂದ್ರರಲ್ಲ ಎಂಬುವ ಮೂಲಕ ತಮ್ಮ ತಪ್ಪನ್ನು ಒಪ್ಪಿಕೊಂಡಂತೆ ಆಗಿದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಸಂಸದ ಡಾ.ಸುಧಾಕರ್‌ರನ್ನು ದೂರಿದರು.

ಸಾಲ ಮನ್ನಾ ಭರವಸೆ ನೀಡಿಲ್ಲ

ಡಿಸಿಸಿ ಬ್ಯಾಂಕ್ ಬಗ್ಗೆ ನಮ್ಮ ಕೇತ್ರದಲ್ಲೂ ಸಮಸ್ಯೆ ಇದೆ. ಮಹಿಳಾ ಸಂಘಗಳ ಸಾಲ ಮನ್ನಾ ಮಾಡುತ್ತೇವೆ ಎಂದು ನಾವು ಹೇಳಿಲ್ಲ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಪರಿಶೀಲಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದರೇ ಹೊರತು ಸಾಲ ಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿರಲಿಲ್ಲ. ಇದನ್ನು ತಿರುಚಲಾಗಿದೆ ಎಂದರು.

ಕೋಚಿಮುಲ್ ಚುನಾವಣೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚೇಳೂರು ಮತ್ತು ಮಂಚೇನಹಳ್ಳಿ ಎರಡು ತಾಲೂಕುಗಳನ್ನು ಹೊಸದಾಗಿ ಘೋಷಿಸುವ ಪ್ರಕ್ರಿಯೆ ಪೂರ್ಣಗೊಂಡ ನಂತರ ಚುನಾವಣೆಯು ನಡೆಯಲಿದೆ. ಈ ಸಂಬಂಧವಾಗಿ ನ್ಯಾಯಾಲಯದಲ್ಲಿ ಚುನಾವಣೆಗೆ ತಡೆಯಾಜ್ಞೆಯು ಇದೆ. ಇನ್ನು ಇಬ್ಬರು ನಿರ್ದೇಕರನ್ನು ಪ್ರತಿನಿಧಿಯಾಗಿ ಆಯ್ಕೆಯಾದ ನಂತರ ಚುನಾವಣೆ ನಡೆಯಲಿದೆ ಎಂದರು.