ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಮಂಡ್ಯ ಹಾಲು ಒಕ್ಕೂಟದ ಚುನಾವಣೆಯನ್ನು ಫೆ.2ರಂದು ನಡೆಸಲು ಜಿಲ್ಲಾಧಿಕಾರಿಗಳು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ತಾಲೂಕಿನಿಂದ ಕದಲೂರು ರಾಮಕೃಷ್ಣ, ಹರೀಶ್ ಸೇರಿದಂತೆ 6 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೋಮವಾರ ಹೇಳಿದರು.ತಾಲೂಕಿನ ಕದಲೂರು ಗ್ರಾಮದ ಶಾಸಕ ಕೆ.ಎಂ.ಉದಯ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ದೂರು ನಂತರ ಮಳವಳ್ಳಿಯಿಂದ ಕೃಷ್ಣೇಗೌಡ, ನಾಗಮಂಗಲದಿಂದ ವಿಧಾನ ಪರಿಷತ್ ಮಾಜಿ ಸದಸ್ಯ ಅಪ್ಪಾಜಿಗೌಡ, ಲಕ್ಷ್ಮೀನಾರಾಯಣ, ಶ್ರೀರಂಗಪಟ್ಟಣದಿಂದ ಬೋರೇಗೌಡ ಸ್ಪರ್ಧೆ ಮಾಡಲಿದ್ದಾರೆ ಎಂದರು.
ಮಂಡ್ಯ, ಪಾಂಡವಪುರ ತಾಲೂಕಿನ ಅಭ್ಯರ್ಥಿಗಳ ಪಟ್ಟಿಯನ್ನು ಮುಂದಿನ ನಾಲ್ಕೈದು ದಿನಗಳೊಳಗೆ ಘೋಷಣೆ ಮಾಡಲಾಗುವುದು. ಕೆ.ಆರ್.ಪೇಟೆ ತಾಲೂಕಿನ ಅಭ್ಯರ್ಥಿ ಆಯ್ಕೆಯನ್ನು ಕಾಯ್ದಿರಿಸಲಾಗಿದೆ. ಪಕ್ಷದ ಪರವಾಗಿ ಬೆಂಬಲಿಸುವ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷದ ಪರ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.ಹಾಲು ಖರೀದಿ ಮಾಡುವ ರೈತರಿಗೆ ಸರ್ಕಾರದ ಪ್ರೋತ್ಸಾಹ ಧನವನ್ನು ಕಾಲ ಕಾಲಕ್ಕೆ ಪಾವತಿ ಮಾಡಲಾಗುತ್ತಿದೆ. ಒಂದು ವೇಳೆ ತಡವಾದರೂ ಸಹ ಎರಡು ತಿಂಗಳ ಬಾಕಿಯನ್ನು ಒಟ್ಟಿಗೇ ಪಾವತಿ ಮಾಡಲಾಗುತ್ತಿದೆ. ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ಹಾಲು ಉತ್ಪಾದಕರಿಗೆ 5 ರು. ಪ್ರೋತ್ಸಾಹ ಧನ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅವರು ರೈತರ ಪರವಾಗಿ ಇದೆ ಎಂಬುದನ್ನು ಸಾಬೀತುಪಡಿಸಿದೆ ಎಂದರು.
ಬಿಜೆಪಿ-ಜೆಡಿಎಸ್ ಆಡಳಿತಾವಧಿಯಲ್ಲಿ ಆ ನಾಯಕರಿಂದ ಯಾವುದೇ ಅಭಿವೃದ್ಧಿ ಪ್ರಸ್ತಾಪವಿಲ್ಲ. ಈ ಎರಡೂ ಪಕ್ಷದ ನಾಯಕರಿಗೆ ನಮ್ಮ ಕಾಂಗ್ರೆಸ್ ಪಕ್ಷದ ವಿರುದ್ಧ ಹೇಳಿಕೆ ನೀಡುವುದು ದಿನ ನಿತ್ಯದ ಕಾಯಕವಾಗಿದೆ ಎಂದು ವ್ಯಂಗ್ಯವಾಡಿದರು.ಮೈಷುಗರ್ ಪ್ರಸಕ್ತ ಸಾಲಿನಲ್ಲಿ 1.80 ಲಕ್ಷ ಟನ್ ಕಬ್ಬು ಅರೆಯಲಾಗಿದೆ. 1.40 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಡಿಸೆಂಬರ್ ಒಳಗೆ ಮೈಷುಗರ್ ಹೆಚ್ಚಿನ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಕದಲೂರು ಉದಯ್, ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್. ಚಿದಂಬರ್, ಕದಲೂರು ರಾಮಕೃಷ್ಣ ಇದ್ದರು.