ಸಾರಾಂಶ
ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ನನಗೆ ಸ್ಪರ್ಧಿಸುವ ಇಚ್ಛೆ ಇತ್ತು. ಪಕ್ಷ ಅದಕ್ಕೆ ಒಪ್ಪಲಿಲ್ಲ - ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಚನ್ನಪಟ್ಟಣ : ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ನನಗೆ ಸ್ಪರ್ಧಿಸುವ ಇಚ್ಛೆ ಇತ್ತು. ಪಕ್ಷ ಅದಕ್ಕೆ ಒಪ್ಪಲಿಲ್ಲ. ಸುರೇಶ್ ಅವರು ಸ್ಪರ್ಧಿಸಲು ಒತ್ತಡ ಇತ್ತು. ಆದರೆ, ಕುಟುಂಬಕ್ಕಿಂತ ಪಕ್ಷ ಮುಖ್ಯ ಎಂದು ತೀರ್ಮಾನ ಮಾಡಿದೆ. ಯೋಗೇಶ್ವರ್ ಅವರು ಪಕ್ಷ ಹಾಗೂ ನಾಯಕತ್ವ ಒಪ್ಪಿ ಬಂದ ನಂತರ, ನಮ್ಮ ಪಕ್ಷದ ಹಿರಿಯ ನಾಯಕರ ಜತೆ ಚರ್ಚೆ ಮಾಡಿ, ಅವರನ್ನು ಕಣಕ್ಕಿಳಿಸಲು ತೀರ್ಮಾನ ಮಾಡಿದೆವು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಕಾರ್ಯಕರ್ತರ ಅಭಿಪ್ರಾಯ ಕೇಳಲು ಆಗಲಿಲ್ಲ. ಆದರೆ, ಚಿಂತೆ ಮಾಡುವುದು ಬೇಡ, ನಾವು ಎಲ್ಲಾ ಕಾರ್ಯಕರ್ತರ ರಕ್ಷಣೆ ಮಾಡೇ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜನ ಭಾವನಾತ್ಮಕ ಮಾತುಗಳಿಗೆ, ಬ್ಲ್ಯಾಕ್ ಮೇಲ್‌ಗೆ ಜಗ್ಗದೆ ಅಭಿವೃದ್ಧಿಗೆ ಮತ ನೀಡಿದ್ದಾರೆ. ಮತದಾರರು ಈ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಶಕ್ತಿ ನೀಡಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಎಲ್ಲಾ ನಾಯಕರು ಸೇರಿ ಇಡೀ ಜಿಲ್ಲೆಯ ಚಿತ್ರಣ ಬದಲಿಸುತ್ತೇವೆ. ಬೆಂಗಳೂರು ದಕ್ಷಿಣದ ಚಿತ್ರಣವೇ ಬದಲಾಗಲಿದೆ ಎಂದರು.
ನಮ್ಮನ್ನು ಅಪೂರ್ವ ಸಹೋದರರು ಎಂದವರು, ನಮ್ಮ ಬಗ್ಗೆ ತುಚ್ಛವಾಗಿ ಮಾತನಾಡಿದ ದೇವೇಗೌಡರು, ಕುಮಾರಸ್ವಾಮಿ, ಯಡಿಯೂರಪ್ಪ ಸೇರಿದಂತೆ ಬಿಜೆಪಿ ಹಾಗೂ ದಳದ ಎಲ್ಲ ನಾಯಕರಿಗೆ ನಿಮ್ಮ ತಟ್ಟೆ ಮರೆ ಏಟು ಉತ್ತರವಾಗಿದೆ. ನೀವು ಕೇವಲ ಚನ್ನಪಟ್ಟಣಕ್ಕೆ ಮಾತ್ರ ಉತ್ತರ ನೀಡಿಲ್ಲ, ಇಡೀ ದೇಶಕ್ಕೆ ಸಂದೇಶ ರವಾನಿಸಿದ್ದೀರಿ ಎಂದರು.
ಚನ್ನಪಟ್ಟಣದ ನಿವೇಶನರಹಿತರಿಗೆ ನಿವೇಶನ ಮತ್ತು ಮನೆಗಳಿಗಾಗಿ 300 ಎಕರೆ ಜಮೀನು ಗುರುತಿಸಲಾಗಿದೆ. ಸಚಿವ ಜಮೀರ್ ಅಹಮದ್ ಖಾನ್ 5 ಸಾವಿರ ಮನೆಗಳನ್ನು ಮಂಜೂರು ಮಾಡಿದ್ದಾರೆ. ಇವುಗಳನ್ನು ಹಂಚುವ ಕೆಲಸ ಮಾಡುತ್ತೇವೆ. ನೀವು ಯಾರಿಗೂ ಇದಕ್ಕೆ ಲಂಚ ನೀಡಬೇಡಿ ಎಂದರು.
ಮಂಡಿ ನೋವು, ಬಾರದ ಸಿಎಂ
ಮಂಡಿ ನೋವು ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಮಾವೇಶಕ್ಕೆ ಬರಲಿಲ್ಲ. ರೈತರು ಪೂರೈಕೆ ಮಾಡುವ ಹಾಲಿನ ಖರೀದಿ ದರ ಹೆಚ್ಚಳ ಕುರಿತು ಸಿಎಂ ಗಮನ ಸೆಳೆಯಲು ಮಹಿಳೆಯರು ಪ್ಲೆಕಾರ್ಡ್ ಹಿಡಿದು ಬಂದಿದ್ದರು. ಸಿದ್ದರಾಮಯ್ಯ ಭೇಟಿ ರದ್ದಾದ ಹಿನ್ನೆಲೆಯಲ್ಲಿ ಅವರು ನಿರಾಶೆ ಅನುಭವಿಸಿದರು.
ಕನ್ನಡಿಗರು ಎಚ್ಚೆತ್ತುಕೊಳ್ಳುವ
ಕಾಲ ಬಂದಿದೆ: ಸುರೇಶ್
ಮಾಜಿ ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಕೇಂದ್ರ ಸರ್ಕಾರದ ಖಾತೆಗೆ ಕರ್ನಾಟಕದ 5 ಲಕ್ಷ ಕೋಟಿ ಹಣ ಹೋಗ್ತಾ ಇದೆ. ಇಷ್ಟು ಹಣ ಕೊಟ್ಟರೂ ರಾಜ್ಯದ ಯಾವುದೇ ಯೋಜನೆಗೆ ಕೇಂದ್ರ ಅನುಮೋದನೆ ಕೊಟ್ಟಿಲ್ಲ. ಕನ್ನಡಿಗರು ಮಲಗಿದ್ರೆ ನಮ್ಮನ್ನು ಮುಗಿಸ್ತಾರೆ. ಕನ್ನಡಿಗರೆ, ದಯವಿಟ್ಟು ಎದ್ದೇಳಿ, ಕನ್ನಡಿಗರು ಎಚ್ಚೆತ್ತುಕೊಳ್ಳುವ ಕಾಲ ಹತ್ತಿರ ಬಂದಿದೆ ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಬಿಹಾರಕ್ಕೆ ಬಂಪರ್ ಕೊಡಿಗೆ ಕೊಟ್ಟು, ಕರ್ನಾಟಕಕ್ಕೆ ಬಂಡಲ್ ಕೊಟ್ಟಿದ್ದಾರೆ. ಇಡೀ ದಕ್ಷಿಣ ಭಾರತಕ್ಕೆ ಅನ್ಯಾಯ ಮಾಡಿದ್ದಾರೆ. ಇದನ್ನು ಸರಿಪಡಿಸದಿದ್ದರೆ ಬೇರೆ, ಬೇರೆ ರೀತಿ ಕೂಗೂ ಏಳುತ್ತಾ ಇರುತ್ತವೆ. ಆಮೇಲೆ ತಡೆಯೋದಕ್ಕೆ ಕಷ್ಟ ಆಗುತ್ತೆ. ಬಿಜೆಪಿಯವರಿಗೆ ಚುನಾವಣಾ ದೃಷ್ಟಿಯಷ್ಟೇ ಮುಖ್ಯ. ಅಭಿವೃದ್ಧಿ ಅವರಿಗೆ ಮುಖ್ಯ ವಿಚಾರ ಅಲ್ಲ ಎಂದು ವಾಗ್ದಾಳಿ ನಡೆಸಿದರು.