ಸಾರಾಂಶ
‘ನಾನು ಯಾವಾಗ ಕರ್ನಾಟಕಕ್ಕೆ ಬಂದರೂ ನಿಮ್ಮದು (ಮಾಧ್ಯಮದವರದ್ದು) ಒಂದೇ ಅಜೆಂಡಾನಾ? ಈ ಸರ್ಕಾರ, ಮುಖ್ಯಮಂತ್ರಿ ಐದು ವರ್ಷ ಇರ್ತಾರಾ?, ಎರಡೂವರೆ ವರ್ಷಕ್ಕೆ ಸರ್ಕಾರ ಬದಲಾಗುತ್ತಾ? ಅಂತ ಬರೀ ಇದೇ ಪ್ರಶ್ನೆ ಕೇಳುತ್ತೀರಿ. ಪಕ್ಷದಲ್ಲಿ ಯಾವಾಗ ಏನಾಗಬೇಕೆಂದು ನಿರ್ಧರಿಸುವ ಸಾಮರ್ಥ್ಯ ಕಾಂಗ್ರೆಸ್‌ಗಿದೆ.
ಬೆಂಗಳೂರು : ‘ನಾನು ಯಾವಾಗ ಕರ್ನಾಟಕಕ್ಕೆ ಬಂದರೂ ನಿಮ್ಮದು (ಮಾಧ್ಯಮದವರದ್ದು) ಒಂದೇ ಅಜೆಂಡಾನಾ? ಈ ಸರ್ಕಾರ, ಮುಖ್ಯಮಂತ್ರಿ ಐದು ವರ್ಷ ಇರ್ತಾರಾ?, ಎರಡೂವರೆ ವರ್ಷಕ್ಕೆ ಸರ್ಕಾರ ಬದಲಾಗುತ್ತಾ? ಅಂತ ಬರೀ ಇದೇ ಪ್ರಶ್ನೆ ಕೇಳುತ್ತೀರಿ. ಪಕ್ಷದಲ್ಲಿ ಯಾವಾಗ ಏನಾಗಬೇಕೆಂದು ನಿರ್ಧರಿಸುವ ಸಾಮರ್ಥ್ಯ ಕಾಂಗ್ರೆಸ್‌ಗಿದೆ. ನಿಮಗೆ ಅದರ ಚಿಂತೆ ಬೇಡ...’
ಇದು, ಮುಖ್ಯಮಂತ್ರಿ ಬದಲಾವಣೆ, ಅಧಿಕಾರ ಹಂಚಿಕೆ ಕುರಿತು ಕಾಂಗ್ರೆಸ್ ನಾಯಕರಿಂದ ನಿಲ್ಲದ ಹೇಳಿಕೆಗಳ ಕುರಿತ ಮಾಧ್ಯಮದವರ ಪ್ರಶ್ನೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ನೀಡಿದ ಉತ್ತರ.
ಗುರುವಾರವಷ್ಟೇ ಉಸಿರಾಟ ಸಮಸ್ಯೆಗೆ ಶಸ್ತ್ರಚಿಕಿತ್ಸೆಗೊಳಗಾಗಿ ಮನೆಗೆ ಮರಳಿ ಚೇತರಿಸಿಕೊಳ್ಳುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಶುಕ್ರವಾರ ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ವೇಣುಗೋಪಾಲ್ ಅವರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಈ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷ ನಾನೇ ಮುಖ್ಯಮಂತ್ರಿ ಎಂದಿದ್ದಾರೆ, ಕೆಲ ಶಾಸಕರು ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡುತ್ತಿದ್ದಾರಲ್ಲಾ ಎಂಬ ಪ್ರಶ್ನೆ ಎತ್ತುತ್ತಿದ್ದಂತೆ ಮಾಧ್ಯಮದವರ ಮೇಲೆಯೇ ಗರಂ ಆದಂತೆ ಕಂಡುಬಂದ ವೇಣುಗೋಪಾಲ್ ಅವರು, ನಾನು ಯಾವಾಗ ಕರ್ನಾಟಕಕ್ಕೆ ಬಂದರೂ ನಿಮ್ಮದು ಒಂದೇ ಅಜೆಂಡನಾ, ಐದು ವರ್ಷ, ಎರಡು ವರೆ ವರ್ಷ ಅಂತ ಬರೀ ಇದೇ ಪ್ರಶ್ನೆ ಕೇಳುತ್ತೀರಿ. ಪಕ್ಷದಲ್ಲಿ ಯಾವಾಗ ಏನಾಗಬೇಕು ಅನ್ನುವುದನ್ನು ನಿರ್ಧರಿಸಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮರ್ಥವಾಗಿದೆ. ಅದನ್ನು ದಯವಿಟ್ಟು ನಮ್ಮ ಪಕ್ಷಕ್ಕೆ ಬಿಡಿ, ಮಾಧ್ಯಮಗಳಿಗೆ ಇದರ ಚಿಂತೆ ಬೇಡ. ಯಾವಾಗ ಅಂತಹ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿರುತ್ತದೆಯೋ ಆಗ ಪಕ್ಷ ಅದನ್ನು ತೆಗೆದುಕೊಳ್ಳಲು ಸಮರ್ಥವಾಗಿದೆ ಅಷ್ಟೆ ಎಂದು ಹೇಳಿದರು.