ಸರ್ಕಾರ ತಾಳಕ್ಕೆ ಸ್ಪೀಕರ್‌ ಕುಣಿದಿದ್ದಾರೆ - ಅಮಾನತ್ತಾದ 18 ಬಿಜೆಪಿ ಸದಸ್ಯರು ಉಗ್ರರಾ, ನಕ್ಸಲರಾ : ಬಿವೈವಿ

| N/A | Published : Mar 23 2025, 11:31 AM IST

BY vijayendraa
ಸರ್ಕಾರ ತಾಳಕ್ಕೆ ಸ್ಪೀಕರ್‌ ಕುಣಿದಿದ್ದಾರೆ - ಅಮಾನತ್ತಾದ 18 ಬಿಜೆಪಿ ಸದಸ್ಯರು ಉಗ್ರರಾ, ನಕ್ಸಲರಾ : ಬಿವೈವಿ
Share this Article
  • FB
  • TW
  • Linkdin
  • Email

ಸಾರಾಂಶ

ಸಭಾಧ್ಯಕ್ಷರು ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಖಂಡನೀಯ, ಆ ಶಾಸಕರೇನು ಭಯೋತ್ಪಾದಕರಾ ಅಥವಾ ನಕ್ಸಲರಾ? ತಕ್ಷಣ ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ಬೆಂಗಳೂರು : ಸಭಾಧ್ಯಕ್ಷರು ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಖಂಡನೀಯ, ಆ ಶಾಸಕರೇನು ಭಯೋತ್ಪಾದಕರಾ ಅಥವಾ ನಕ್ಸಲರಾ? ತಕ್ಷಣ ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ಶನಿವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರು ತಿಂಗಳು ಶಾಸಕರನ್ನು ಅಮಾನತು ಮಾಡಿರುವುದು ಕಾನೂನು ಬಾಹಿರ ಮತ್ತು ಅಸಂವಿಧಾನತ್ಮಕ. ಸಭಾಧ್ಯಕ್ಷರು ಏಕಪಕ್ಷೀಯ ಮತ್ತು ಮನಸೋ ಇಚ್ಛೆಯಿಂದ ನಿರ್ಧಾರ ಕೈಗೊಂಡಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.

ಸದನದಲ್ಲಿ ಕಾಂಗ್ರೆಸ್ ಸರ್ಕಾರದ ಸಂವಿಧಾನ ವಿರೋಧಿ ನಡೆಯ ವಿರುದ್ಧ ಹೋರಾಟ ನಡೆಸಲಾಗುತ್ತಿತ್ತು. ಆದರೆ ಸಭಾಧ್ಯಕ್ಷರು ಆರು ತಿಂಗಳು ನಮ್ಮ 18 ಶಾಸಕರನ್ನು ಅಮಾನತು ಮಾಡಿದ್ದಾರೆ. ಸಭಾಧ್ಯಕ್ಷರು ನಮ್ಮ ರಕ್ಷಣೆಗೆ ಬರಬೇಕಿತ್ತು. ಇತಿಹಾಸದಲ್ಲಿ ಇಷ್ಟು ಸುದೀರ್ಘವಾಗಿ ಅಮಾನತು ಮಾಡಿರುವ ಉದಾಹಾರಣೆಗಳಿಲ್ಲ. ಆ ಶಾಸಕರೇನು ಭಯೋತ್ಪಾದಕರಾ ಅಥವಾ ನಕ್ಸಲರಾ? ಎಂದು ಕಿಡಿಕಾರಿದರು.

ಅಮಾನತಾದವರು ವಿಧಾನಸಭಾ ಲಾಬಿ, ಸಭಾಂಗಣ ಪ್ರವೇಶಿಸುವಂತಿಲ್ಲ, ಸ್ಥಾಯಿ ಸಮಿತಿ ಸಭೆಯಲ್ಲಿ ಭಾಗವಹಿಸುವಂತಿಲ್ಲ ಎಂದಿದ್ದಾರೆ. ಇದು ಶಾಸಕರ ಹಕ್ಕು ಮೊಟಕುಗೊಳಿಸುವ ಕೆಲಸವಾಗಿದೆ. ಕ್ಷೇತ್ರಾಭಿವೃದ್ಧಿಗೆ ಎರಡು ಕಾಸು ಬಿಡುಗಡೆ ಮಾಡುವ ಯೋಗ್ಯತೆ ಸರ್ಕಾರಕ್ಕೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಪಸಂಖ್ಯಾತರನ್ನು ಖುಷಿ ಪಡಿಸಲು ಮೀಸಲಾತಿ ಕೊಟ್ಟ ಸರ್ಕಾರದ ನಿರ್ಧಾರವನ್ನು ಬಿಜೆಪಿ ವಿರೋಧಿಸಲಿದ್ದು, ತೀವ್ರ ಹೋರಾಟ ನಡೆಸಿ ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿ ಕೊಡಲು ಅವಕಾಶವಿಲ್ಲ. ಇದರ ನಡುವೆ ಮೀಸಲಾತಿ, ಹೊರದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವ ಮುಸ್ಲಿಂ ವಿದ್ಯಾರ್ಥಿಗಳಿಗೆ ₹20 ಲಕ್ಷ ಬದಲು ₹30 ಲಕ್ಷ ಕೊಡುವುದಾಗಿ ತಿಳಿಸುವುದು, ಮುಸ್ಲಿಂ ಮಹಿಳೆಯರಿಗೆ ಆತ್ಮರಕ್ಷಣೆ ಕಲೆಗೆ ಸಂಬಂಧಿಸಿದಂತೆ ಬಜೆಟ್‍ನಲ್ಲಿ ಹಣ ಮೀಸಲಿಟ್ಟಿರುವುದು ಸರಿಯೇ? ಹಿಂದೂಗಳಲ್ಲಿ ಹಾಗಿದ್ದರೆ ಬಡವರೇ ಇಲ್ಲವೇ? ಅವರಿಗೆ ಹೊರದೇಶಕ್ಕೆ ಉನ್ನತ ಶಿಕ್ಷಣಕ್ಕೆ ಹೋಗುವ ಕನಸುಗಳಿಲ್ಲವೇ ಎಂದು ಪ್ರಶ್ನಿಸಿದರು.ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್‌ ಉಪಸ್ಥಿತರಿದ್ದರು.

ಇದು ತುಘಲಕ್‌ ದರ್ಬಾರ್‌: ಅಶೋಕ್‌

ವಿಧಾನಸಭಾ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಮಾತನಾಡಿ, ಹನಿಟ್ರ್ಯಾಪ್ ಕುರಿತ ಸಚಿವರ ಹೇಳಿಕೆ, ಮುಸ್ಲಿಮರಿಗೆ ಸಂವಿಧಾನ ವಿರೋಧಿಯಾಗಿ ಮೀಸಲಾತಿ ವಿಚಾರ ಮುಂದಿಟ್ಟು ಬಿಜೆಪಿ ಹೋರಾಟ ನಡೆಸಿದೆ. ಸಭಾಧ್ಯಕ್ಷರ ನಡವಳಿಕೆ ತುಘಲಕ್ ದರ್ಬಾರ್‌ನಂತಿದೆ. ಹಿಟ್ಲರ್ ಸಂಸ್ಕೃತಿಯನ್ನು ನೋಡುತ್ತಿದ್ದೇವೆ. ಸದನದಲ್ಲಿ ಸಭಾಧ್ಯಕ್ಷರ ಪ್ರಚೋದನೆಯಿಂದ ಈ ಘಟನೆಯಾಗಿದೆ. ಸರ್ಕಾರದ ಸಭಾಧ್ಯಕ್ಷರು ಒಡಂಬಡಿಕೆ ಮಾಡಿಕೊಂಡು ಮುಸ್ಲಿಮರಿಗೆ ಮೀಸಲಾತಿ ತೀರ್ಮಾನ ಮಾಡಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.