ಸರ್ಕಾರ ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿರುವ 38,000 ಕೋಟಿ ರು. ಬಿಲ್‌ ಪಾವತಿಗೆ ಆಗ್ರಹಿಸಿ ಮಾ.5 ರಂದು ಬೃಹತ್‌ ಪ್ರತಿಭಟನೆ ನಡೆಸಲಿದ್ದು, ಒಂದು ವಾರ ರಾಜ್ಯಾದ್ಯಂತ ಎಲ್ಲಾ ಕಾಮಗಾರಿ ಸ್ಥಗಿತಗೊಳಿಸುವ ಮೂಲಕ   ಬಿಸಿ ಮುಟ್ಟಿಸುತ್ತೇವೆ’ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಎಚ್ಚರಿಕೆ 

 ಬೆಂಗಳೂರು : ‘ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿರುವ 38,000 ಕೋಟಿ ರು. ಬಿಲ್‌ ಪಾವತಿಗೆ ಆಗ್ರಹಿಸಿ ಮಾ.5 ರಂದು ಬೃಹತ್‌ ಪ್ರತಿಭಟನೆ ನಡೆಸಲಿದ್ದು, ಒಂದು ವಾರ ರಾಜ್ಯಾದ್ಯಂತ ಎಲ್ಲಾ ಕಾಮಗಾರಿ ಸ್ಥಗಿತಗೊಳಿಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ’ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್, ‘ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರಿಗೆ ಪತ್ರ ಬರೆಯುತ್ತೇವೆ. ಆ ಮೂಲಕ ನಮ್ಮನ್ನು ಕೆಣಕಬೇಡಿ ಎಂದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡುತ್ತೇವೆ’ ಎಂದು ಹೇಳಿದ್ದಾರೆ.

ಮಾ.5ರೊಳಗೆ ಬೇಡಿಕೆ ಈಡೇರಿಸಿ:

ಮಾ.5ರ ಒಳಗೆ ಸರ್ಕಾರ ನಮ್ಮ ಜತೆ ಸಭೆ ನಡೆಸಿ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಒಂದು ವಾರ ಎಲ್ಲಾ ಕಡೆ ಕಾಮಗಾರಿ ನಿಲ್ಲಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ. ಜತೆಗೆ ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯಪಾಲರಿಗೆ ಪತ್ರ ಬರೆಯಲಿದ್ದು, ಅವರ ಭೇಟಿಗೂ ಕಾಲಾವಕಾಶ ಕೋರಲಿದ್ದೇವೆ ಎಂದು ಹೇಳಿದರು.

ರಾಜ್ಯ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಹೊರತುಪಡಿಸಿ ಎಲ್ಲಾ ಕಡೆ ಪರ್ಸೆಂಟೇಜ್‌ ಹಾವಳಿ, ಬ್ರೋಕರ್‌ಗಳ ಹಾವಳಿ ಹೆಚ್ಚಾಗಿದೆ. ಬೆಂಗಳೂರು ನಗರಾಭಿವೃದ್ಧಿ ಇಲಾಖೆಯಲ್ಲಿ ಪರವಾಗಿಲ್ಲ. ಆದರೂ ನೀರಾವರಿ ಇಲಾಖೆಯಲ್ಲಿ ಸಮಸ್ಯೆಯಿದೆ. ನಗರಾಭಿವೃದ್ಧಿ ಇಲಾಖೆ, ವಸತಿ ಇಲಾಖೆಯಲ್ಲಿ ಬ್ರೋಕರ್‌ಗಳ ಕಾಟ ಹೆಚ್ಚಾಗಿದೆ.

ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ 1.5 ಲಕ್ಷ ಗುತ್ತಿಗೆದಾರರು ಅತಂತ್ರರಾಗಿದ್ದಾರೆ. ಈ ಬಗ್ಗೆ 31 ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ಹೋರಾಟ ಸಂಘಟಿಸಲಾಗುವುದು ಎಂದು ಮಂಜುನಾಥ್‌ ಹೇಳಿದರು.

ದಿವಂಗತ ಕೆಂಪಣ್ಣ ಅವರನ್ನು ಎಲ್ಲರೂ ರಾಜಕೀಯವಾಗಿ ಬಳಸಿಕೊಂಡರು. ಬಳಿಕ ನಮ್ಮ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ 100 ಪುಟಗಳ ದಾಖಲೆ ನೀಡಿದ್ದೇವೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿ ಯಾರೊಬ್ಬರೂ ಸ್ಪಂದಿಸಿಲ್ಲ. 38,000 ಕೋಟಿ ರು. ಒಂದೇ ಹಂತದಲ್ಲಿ ಬಿಡುಗಡೆ ಮಾಡುವುದು ಬೇಡ, ಕನಿಷ್ಠ ಹಂತ-ಹಂತವಾಗಿ ಆದರೂ ಮಾಡಬೇಕಲ್ಲವೇ ಎಂದು ಪ್ರಶ್ನಿಸಿದರು.

ಈ ಸರ್ಕಾರದಲ್ಲೇ ಹೆಚ್ಚು ಶೋಷಣೆ:

ಸಂಘದ ಗೌರವಾಧ್ಯಕ್ಷ ಜಗನ್ನಾಥ್‌ ಶೇಗಜಿ ಮಾತನಾಡಿ, ಹಿಂದಿನ ಸರ್ಕಾರಕ್ಕಿಂತ ಈ ಸರ್ಕಾರದಲ್ಲೇ ನಮಗೆ ಹೆಚ್ಚು ಶೋಷಣೆ ಆಗುತ್ತಿದೆ. ಟೆಂಡರ್‌ ವಿಷಯದಲ್ಲಿ ಬಾರಿ ಅನ್ಯಾಯವಾಗುತ್ತದೆ ಎಂದು ಆರೋಪ ಮಾಡಿದರು.

ಮಧ್ಯವರ್ತಿಗಳ ಆಡಳಿತ: ಗಂಭೀರ ಆರೋಪ

ನಗರಾಭಿವೃದ್ಧಿ ಇಲಾಖೆಯಲ್ಲಿ ಮಧ್ಯವರ್ತಿಗಳ ಆಡಳಿತ ನಡೆಯುತ್ತಿದೆ. ಮಧ್ಯವರ್ತಿಗಳು ಪ್ರತ್ಯೇಕ ಕಚೇರಿ ಮಾಡಿಕೊಂಡು ಮುಖ್ಯ ಎಂಜಿನಿಯರ್‌ಗಳನ್ನು ಕರೆಸಿ ಯಾರಿಗೆ ಗುತ್ತಿಗೆ ನೀಡಬೇಕು, ಯಾರಿಗೆ ನೀಡಬಾರದು ಎಂದು ಸೂಚನೆ ನೀಡುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್‌ ಗಂಭೀರ ಆರೋಪ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಮಧ್ಯವರ್ತಿಗಳ ಆಡಳಿತ ನಡೆಯುತ್ತಿದೆ. ನಗರಾಭಿವೃದ್ಧಿ ಸಚಿವರ ಪರ ಮಧ್ಯವರ್ತಿಗಳು ಆರ್‌.ಟಿ.ನಗರ ಹಾಗೂ ರಾಜಾಜಿನಗರದಲ್ಲಿ ಕಚೇರಿ ಹಾಗೂ ಭದ್ರತಾ ಸಿಬ್ಬಂದಿ ಇಟ್ಟುಕೊಂಡಿದ್ದಾರೆ. ಇಲಾಖೆಯ ಮುಖ್ಯ ಎಂಜಿನಿಯರ್‌ಗಳನ್ನು ಅಲ್ಲಿಗೆ ಕರೆಸಿಕೊಂಡು ಯಾರಿಗೆ ಟೆಂಡರ್‌ ಆಗಬೇಕು ಎಂದು ಹೇಳುತ್ತಾರೆ. ಗುತ್ತಿಗೆದಾರರಿಗೂ ನೀವು ಟೆಂಡರ್‌ ವಾಪಸ್‌ ಪಡೆಯಿರಿ, ನೀವು ಹಾಕಿ ಎಂದು ಸೂಚನೆ ನೀಡುತ್ತಾರೆ. ಅಷ್ಟರ ಮಟ್ಟಿಗೆ ಆಡಳಿತ ಹದಗೆಟ್ಟಿದೆ ಎಂದು ಆರೋಪ ಮಾಡಿದರು.

ನಗರಾಭಿವೃದ್ಧಿ ಇಲಾಖೆಯಲ್ಲಿ 10 ಮಹಾನಗರ ಪಾಲಿಕೆಗಳು ಬರುತ್ತವೆ. ಅವುಗಳಿಗೆ ತುಂಡು ಗುತ್ತಿಗೆ ಬದಲು ಪ್ಯಾಕೇಜ್‌ ಟೆಂಡರ್‌ ಮಾಡಿ ಮಧ್ಯವರ್ತಿಗಳ ಕಚೇರಿಗಳಲ್ಲೇ ವ್ಯವಹಾರ ನಡೆಸಲಾಗುತ್ತದೆ ಎಂದು ದೂರಿದರು.

ಗುತ್ತಿಗೆದಾರರಿಗೆ ಬಿಡುಗಡೆ ಆಗಬೇಕಿರುವ ಹಣ (ಕೋಟಿ ರು.ಗಳಲ್ಲಿ)

ಜಲಸಂಪನ್ಮೂಲ ಇಲಾಖೆ-13,000 ಕೋಟಿ ರು.

ಲೋಕೋಪಯೋಗಿ ಇಲಾಖೆ-8,370

ಗ್ರಾಮೀಣಾಭಿವೃದ್ಧಿ ಇಲಾಖೆ-3,800

ಸಣ್ಣ ನೀರಾವರಿ-3,000

ನಗರಾಭಿವೃದ್ದಿ ಇಲಾಖೆ-2,000

ವಸತಿ ಮತ್ತು ವಕ್ಫ್-2,600

ಕಾರ್ಮಿಕ ಇಲಾಖೆ-2,000

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ-2,600 

ಒಟ್ಟು-37,370 ಕೋಟಿ ರು.

ಆಕ್ರೋಶ ಏಕೆ

ರಾಜ್ಯಾದ್ಯಂತ ಗುತ್ತಿಗೆದಾರರಿಗೆ ಸರ್ಕಾರಿಂದ 38000 ಕೋಟಿ ರು.. ಹಣ ಬಾಕಿ

ಹೀಗಾಗಿ ಸಾಲ ಪಡೆದ ಕಾಮಗಾರಿ ಮಾಡಿದ್ದ 1.5 ಲಕ್ಷ ಗುತ್ತಿಗೆದಾರರಿಗೆ ಸಂಕಷ್ಟ

ಹಣ ಪಾವತಿಸದಿದ್ದರೆ ರಾಹುಲ್‌, ಖರ್ಗೆ, ಗೌರ್ನರ್‌ಗೆ ಪತ್ರ ಬರೆಯುವ ಎಚ್ಚರಿಕೆ