ಪ್ರತಿ ಕ್ಷೇತ್ರಕ್ಕೆ 2-3 ಹೆಸರು ಇರಿಸಿಕೊಂಡು ಬಿಜೆಪಿ ಸಭೆ

| Published : Mar 08 2024, 01:49 AM IST / Updated: Mar 08 2024, 09:45 AM IST

ಪ್ರತಿ ಕ್ಷೇತ್ರಕ್ಕೆ 2-3 ಹೆಸರು ಇರಿಸಿಕೊಂಡು ಬಿಜೆಪಿ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕಗ್ಗಂಟಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ರಾಜ್ಯ ಬಿಜೆಪಿ ನಾಯಕರು ಎರಡನೇ ದಿನವಾದ ಗುರುವಾರವೂ ಕಸರತ್ತು ಮುಂದುವರೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು/ದೆಹಲಿ

ಲೋಕಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕಗ್ಗಂಟಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ರಾಜ್ಯ ಬಿಜೆಪಿ ನಾಯಕರು ಎರಡನೇ ದಿನವಾದ ಗುರುವಾರವೂ ಕಸರತ್ತು ಮುಂದುವರೆಸಿದ್ದಾರೆ.

ಬುಧವಾರ ತಡರಾತ್ರಿ ಸುಮಾರು ಐದು ಗಂಟೆಗೂ ಹೆಚ್ಚು ಕಾಲ ಸಭೆ ನಡೆದರೂ ಹಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ. 

ರಾಜಕೀಯ ನಿವೃತ್ತಿ ಘೋಷಿಸಿದವರನ್ನು ಹೊರತುಪಡಿಸಿ ಹಾಲಿ ಸಂಸದರ ಜತೆ ಪ್ರತಿ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ ಎರಡೆರಡು ಹೆಸರುಗಳ ಪಟ್ಟಿಯನ್ನು ರಾಜ್ಯ ನಾಯಕರು ಮುಂದಿಟ್ಟುಕೊಂಡು ರಾಷ್ಟ್ರೀಯ ನಾಯಕರ ಜತೆ ಸಭೆ ನಡೆಸಿದರೂ ಒಮ್ಮತಾಭಿಪ್ರಾಯ ಮೂಡಲಿಲ್ಲ. 

ಜತೆಗೆ ಜೆಡಿಎಸ್‌ಗೆ ಯಾವ ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂಬುದರ ಬಗ್ಗೆಯೂ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಬಳಿಕ ಗುರುವಾರವೂ ಸಭೆ ಮುಂದುವರೆದಿದ್ದು, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎನ್ನಲಾಗಿದೆ.

ಪಕ್ಷದ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪ್ರಕಾರ, ಇನ್ನೂ ಎರಡು ಅಥವಾ ಮೂರು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳುವ ಸಾಧ್ಯತೆಯಿದೆ.

ಈ ನಡುವೆ ಶುಕ್ರವಾರ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಅಂತಿಮಗೊ‍ಳಿಸಿ ಪ್ರಕಟಿಸುವ ಸಂಬಂಧ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯುವುದು ಅನುಮಾನವಾಗಿದ್ದು, ಒಂದೆರಡು ದಿನಗಳ ಕಾಲ ವಿಳಂಬವಾಗುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.

2-3 ದಿನದಲ್ಲಿ ಅಂತಿಮ- ಬಿಎಸ್‌ವೈ: ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಅಭ್ಯರ್ಥಿಗಳ ಆಯ್ಕೆ ಮತ್ತು ಬಿಜೆಪಿ-ಜೆಡಿಎಸ್ ನಡುವಿನ ಕ್ಷೇತ್ರ ಹಂಚಿಕೆ ಬಗ್ಗೆ ಅಂತಿಮಗೊಂಡಿಲ್ಲ. 

ಅದೆಲ್ಲವನ್ನೂ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತುಕತೆ ನಡೆಸಿ 2-3 ದಿನದಲ್ಲಿ ಅಂತಿಮಗೊಳಿಸಲಾಗುವುದು. ಎಲ್ಲ 28 ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸುತ್ತೇವೆ ಎಂಬ ವಿಶ್ವಾಸ ಇದೆ ಎಂದರು.

ಜೆಡಿಎಸ್-ಬಿಜೆಪಿ ಹಂಚಿಕೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ತೀರ್ಮಾನ ಕೈಗೊಳ್ಳಲಿದ್ದಾರೆ. ನಿನ್ನೆ ನಡೆದ ಸಭೆಯಲ್ಲಿ ನಡೆದ ಮಾತುಕತೆಗಳು ಬಹುತೇಕ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲೂ ಚರ್ಚೆ ಆಗಲಿವೆ ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕೇಂದ್ರ ಸಚಿವರ ವಿರುದ್ಧ ಅಸಮಾಧಾನ ಇರುವುದು ಮತ್ತು ಮಹಿಳೆಯರಿಗೆ ಹೆಚ್ಚಿನ ಸ್ಥಾನ ನೀಡುವ ಕುರಿತು ಮಾಹಿತಿ ಇಲ್ಲ ಎಂದು ತಿಳಿಸಿದರು.

ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಮಂಡ್ಯದಲ್ಲಿ ಸಂಸದೆ ಸುಮಲತಾ ಸ್ಪರ್ಧಿಸುವ ಬಗ್ಗೆ ಮಾತನಾಡಲು ನಾನು ಯಾರು? ಹೈಕಮಾಂಡ್‌ ನಿರ್ಧರಿಸಲಿದೆ. 

ಜಯದೇವ ಹೃದ್ರೋಗ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಬಗ್ಗೆ ಚರ್ಚೆಯಾಗಿದೆ. ಆದರೆ, ಅಂತಿಮಗೊಂಡಿಲ್ಲ ಎಂದು ಹೇಳಿದರು.

ಮಾಜಿ ಸಿಎಂಗಳ ಹೆಸರು ಪ್ರಸ್ತಾಪ- ಬಿಎಸ್‌ವೈ
ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಿದೆ ಎಂದು ಯಡಿಯೂರಪ್ಪ ಮಾಹಿತಿ ನೀಡಿದರು. 

ಬಸವರಾಜ ಬೊಮ್ಮಾಯಿ, ಜಗದೀಶ್‌ ಶೆಟ್ಟರ್‌ ಅವರಿಗೆ ಟಿಕೆಟ್‌ ಕೊಡುವುದರ ಬಗ್ಗೆ ಚರ್ಚೆಯಾಗಿದೆ. ಆದರೆ, ಅಂತಿಮವಾಗಿಲ್ಲ. ಡಿ.ವಿ.ಸದಾನಂದಗೌಡ ಅವರು ಸ್ಪರ್ಧೆ ಮಾಡುವ ಬಗ್ಗೆ ಅಂತಿಮ ತೀರ್ಮಾನವನ್ನು ಕೇಂದ್ರದ ವರಿಷ್ಠರು ಕೈಗೊಳ್ಳಲಿದ್ದಾರೆ ಎಂದರು.

ಮೋದಿ ಜತೆ ಚರ್ಚಿಸಿ 2-3 ದಿನದಲ್ಲಿ ಅಂತಿಮ: ಅಭ್ಯರ್ಥಿಗಳ ಆಯ್ಕೆ ಮತ್ತು ಬಿಜೆಪಿ-ಜೆಡಿಎಸ್ ನಡುವಿನ ಕ್ಷೇತ್ರ ಹಂಚಿಕೆ ಬಗ್ಗೆ ಅಂತಿಮಗೊಂಡಿಲ್ಲ. ಅದೆಲ್ಲವನ್ನೂ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತುಕತೆ ನಡೆಸಿ 2-3 ದಿನದಲ್ಲಿ ಅಂತಿಮಗೊಳಿಸಲಾಗುವುದು. ಎಲ್ಲ 28 ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸಲಾಗಿದೆ.- ಬಿ.ಎಸ್‌.ಯಡಿಯೂರಪ್ಪ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ