ಸಾರಾಂಶ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿನಿಂದ ತೀವ್ರ ನಿರಾಶೆಗೊಂಡಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಈ ಬಗ್ಗೆ ಚರ್ಚಿಸಲು ಹಿಂದೇಟು ಹಾಕಿದ್ದಾರೆ.
ಬೆಂಗಳೂರು : ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿನಿಂದ ತೀವ್ರ ನಿರಾಶೆಗೊಂಡಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಈ ಬಗ್ಗೆ ಚರ್ಚಿಸಲು ಹಿಂದೇಟು ಹಾಕಿದ್ದಾರೆ.
ತಮ್ಮ ಮೊಮ್ಮಗನ ಗೆಲುವಿಗೆ ಖುದ್ದು ಪ್ರಚಾರ ಮಾಡಿದ ದೇವೇಗೌಡ ಅವರು ಸಾಕಷ್ಟು ಬೆವರು ಹರಿಸಿದ್ದರು. ಜತೆಗೆ ಎಚ್.ಡಿ. ಕುಮಾರಸ್ವಾಮಿ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡಿದ್ದರು. ಸಮೀಕ್ಷೆಗಳು ಸಹ ನಿಖಿಲ್ ಗೆಲ್ಲಲಿದ್ದಾರೆಂದು ಭವಿಷ್ಯ ನುಡಿದಿದ್ದವು. ಆದರೆ ಫಲಿತಾಂಶ ಅವರ ಎಲ್ಲ ನಿರೀಕ್ಷೆಗಳನ್ನು ಹುಸಿ ಮಾಡುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಹಿಂಜರಿದರು.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಎಚ್.ಡಿ. ದೇವೇಗೌಡ ಅವರು, ನಾನು ಪಕ್ಷದ ಕಚೇರಿಗೆ ಬಂದು ನಿಮ್ಮೆಲ್ಲರ ಪ್ರಶ್ನೆಗೆ ಉತ್ತರಿಸುತ್ತೇನೆ. ದೆಹಲಿಯಿಂದ ವಾಪಸ್ ಬಂದ ನಂತರ ಮಾತನಾಡುತ್ತೇನೆ. ಆದರೆ ಸದ್ಯ ಮಾತನಾಡುವುದಿಲ್ಲ ಎಂದಷ್ಟೇ ಉತ್ತರಿಸಿದರು.
ಇದೇ ರೀತಿ ಕುಮಾರಸ್ವಾಮಿ ಅವರು ಚನ್ನಪಟ್ಟಣ ಚುನಾವಣಾ ಫಲಿತಾಂಶ ಕುರಿತು ಮಾತನಾಡಲು ಏನೂ ಇಲ್ಲ. ಜನರು ನೀಡಿರುವ ಜನಾದೇಶವನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಹೇಳಿದರು. ನಿಖಿಲ್ ಕುಮಾರಸ್ವಾಮಿ ಅವರು ಮಾತ್ರ ಫಲಿತಾಂಶ ಹೊರಬಿದ್ದ ದಿನವೇ ಬಿಡದಿಯಲ್ಲಿ ಪ್ರತಿಕ್ರಿಯಿಸಿದ್ದರು.