ಇರಾನ್‌ ಮತ್ತು ಅಮೆರಿಕ ನಡುವೆ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಇರಾನ್‌ ಹತ್ಯೆಯ ಬೆದರಿಕೆ ಹಾಕಿದೆ. ಈ ಬಾರಿ ಗುಂಡು ಗುರಿ ತಪ್ಪಲ್ಲ ಎಂದು ಇರಾನ್‌ನ ಸರ್ಕಾರಿ ಸ್ವಾಮ್ಯದ ಟೀವಿ ವಾಹಿನಿ ಎಚ್ಚರಿಕೆ ನೀಡಿದೆ.

2024ರ ಘಟನೆ ಫೋಟೋ ಹಾಕಿ ಅಧ್ಯಕ್ಷಗೆ ಎಚ್ಚರಿಕೆ

ಇರಾನ್‌ನ ಸರ್ಕಾರಿ ಟೀವಿ ವಾಹಿನಿಯಲ್ಲಿ ಸಂದೇಶಟೆಹ್ರಾನ್‌: ಇರಾನ್‌ ಮತ್ತು ಅಮೆರಿಕ ನಡುವೆ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಇರಾನ್‌ ಹತ್ಯೆಯ ಬೆದರಿಕೆ ಹಾಕಿದೆ. ಈ ಬಾರಿ ಗುಂಡು ಗುರಿ ತಪ್ಪಲ್ಲ ಎಂದು ಇರಾನ್‌ನ ಸರ್ಕಾರಿ ಸ್ವಾಮ್ಯದ ಟೀವಿ ವಾಹಿನಿ ಎಚ್ಚರಿಕೆ ನೀಡಿದೆ.

2024ರಲ್ಲಿ ಟ್ರಂಪ್‌ ಚುನಾವಣಾ ಪ್ರಚಾರ ನಿರತವಾಗಿದ್ದ ವೇಳೆ ಬಂದೂಕುಧಾರಿಯೊಬ್ಬ ಹಾರಿಸಿದ್ದ ಗುಂಡು, ಅದೃಷ್ಟವಶಾತ್‌ ಅವರ ತಲೆಗೆ ತಗುಲದೇ, ಕಿವಿಯನ್ನು ಘಾಸಿಗೊಳಿಸಿತ್ತು. ಈ ಘಟನೆಯ ಫೋಟೋವನ್ನು ಹಾಕಿರುವ ಸುದ್ದಿವಾಹಿನಿ ಈ ಬಾರಿ ಗುಂಡಿನ ಗುರಿ ತಪ್ಪುವುದಿಲ್ಲ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದೆ.

ಈ ಹಿಂದೆ 2022ರಲ್ಲೂ ಒಮ್ಮೆ ಟ್ರಂಪ್‌ ಮೇಲೆ ಇಂಥದ್ದೇ ಗುಂಡಿನ ದಾಳಿಯ ವಿಫಲ ಯತ್ನ ನಡೆದಿತ್ತು. ಆಗಲೂ ಇರಾನ್‌ನ ಟೀವಿ ವಾಹಿನಿ ಇಂಥದ್ದೇ ಎಚ್ಚರಿಕೆ ನೀಡಿತ್ತು.

==

ನೊಬೆಲ್ ಶಾಂತಿ ಆಕಾಂಕ್ಷಿ ಟ್ರಂಪ್ 1 ವರ್ಷದಲ್ಲಿ ನಡೆಸಿದ ದಾಳಿ 573, ಸಾವು 1,000!

-ಬೈಡನ್‌ 4 ವರ್ಷದಲ್ಲಿ ನಡೆಸಿದ ದಾಳಿಗಿಂತ ಹೆಚ್ಚು

-‘ಶಾಂತಿಪ್ರಿಯ’ ಅಧ್ಯಕ್ಷರ ಯುದ್ಧದಾಹ ಬಹಿರಂಗ

ವಾಷಿಂಗ್ಟನ್‌: ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಹರಸಾಹಸ ಪಡುತ್ತಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತದಲ್ಲಿ ಕೇವಲ ಒಂದು ವರ್ಷದ ಅವಧಿಯಲ್ಲಿ ಅಮೆರಿಕ ಪರದೇಶಗಳ ಮೇಲೆ 573 ದಾಳಿ ನಡೆಸಿದೆ. ಈ ದಾಳಿಗಳಲ್ಲಿ ಅಂದಾಜು 1,093 ಜನರು ಸಾವಿಗೀಡಾಗಿದ್ದಾರೆ. ಇದು ಈ ಹಿಂದಿನ ಅಧ್ಯಕ್ಷರಾಗಿದ್ದ ಜೋ ಬೈಡನ್ ಆಡಳಿತದಲ್ಲಿ 4 ವರ್ಷಗಳ ಅವಧಿಯಲ್ಲಿ ನಡೆದ ದಾಳಿಗಿಂತಲೂ (694)ಹೆಚ್ಚು ಎಂಬ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ಈ ಮೂಲಕ ಜಗತ್ತಿಗೆ ತಮ್ಮನ್ನು ಶಾಂತಿದೂತನಂತೆ ಬಿಂಬಿಸಿಕೊಳ್ಳಲು ಯತ್ನಿಸುತ್ತಿರುವ ಟ್ರಂಪ್‌ ಯುದ್ಧದಾಹ ಬಹಿರಂಗವಾಗಿದೆ.ಎಸಿಎಲ್‌ಇಡಿ ಸಂಸ್ಥೆಯ ವರದಿ ಪ್ರಕಾರ, 2025ರ ಜ.20ರಿಂದ 2026ರ ಜ.5ರ ಅವಧಿಯಲ್ಲಿ ಅಮೆರಿಕ 573 ವಾಯು ಮತ್ತು ಡ್ರೋನ್‌ ದಾಳಿಗಳನ್ನು ನಡೆಸಿದೆ. ಸಿರಿಯಾ ಮತ್ತು ಇರಾಕ್‌ನಂತಹ ಮಿತ್ರದೇಶಗಳೊಂದಿಗೆ ಸೇರಿ ಐಸಿಸ್ ಗುರಿಗಳ ಮೇಲೆ ನಡೆಸಿದ ದಾಳಿಗಳನ್ನು ಸೇರಿಸಿದರೆ, ಈ ಸಂಖ್ಯೆ 658ಕ್ಕೆ ಏರುತ್ತದೆ.

ಟ್ರಂಪ್‌ ತಾವು ಭಾರತ-ಪಾಕಿಸ್ತಾನದ ನಡುವಿನ ಯುದ್ಧವೂ ಸೇರಿದಂತೆ ಜಗತ್ತಿನ 8 ಯುದ್ಧಗಳನ್ನು ನಿಲ್ಲಿಸಿದ್ದಾಗಿ ಬೊಗಳೆ ಬಿಡುತ್ತಿದ್ದಾರೆ. ತನಗಲ್ಲದೆ ಇನ್ಯಾರಿಗೆ ನೊಬೆಲ್ ಸಿಗಲು ಸಾಧ್ಯ ಎಂದು ಹಲವು ಬಾರಿ ಬಹಿರಂಗ ಹೇಳಿಕೆಯನ್ನೂ ನೀಡಿದ್ದಾರೆ.

==

ಪಟಾಫಟ್‌ ಗಲ್ಲು ಶಿಕ್ಷೆಗೆ ಇರಾನ್‌ ಬ್ರೇಕ್‌: ಟ್ರಂಪ್‌

ಅಮೆರಿಕೆ ಎಚ್ಚರಿಕೆ ಬೆನ್ನಲ್ಲೇ ತಣ್ಣಗಾದ ಇರಾನ್‌

ವಾಷಿಂಗ್ಟನ್‌: ಸರ್ಕಾರಿ ವಿರೋಧಿ ಪ್ರತಿಭಟನಾಕರರ ವಿರುದ್ಧ ಪ್ರಕರಣಗಳನ್ನು ತ್ವರಿತ ವಿಚಾರಣೆ ನಡೆಸಿ ಅವರನ್ನು ತಕ್ಷಣವೇ ಗಲ್ಲಿಗೇರಿಸಲಾಗುವುದು ಎಂಬ ಇರಾನ್‌ನ ನ್ಯಾಯಾಂಗ ಇಲಾಖೆ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಇಂಥ ಬೆಳವಣಿಗೆಗೆ ಇರಾನ್‌ ಸರ್ಕಾರ ಬ್ರೇಕ್‌ ಹಾಕಿದೆ.ಇಂಥದ್ದೊಂದು ಸುದ್ದಿಯನ್ನು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಂಚಿಕೊಂಡಿದ್ದಾರೆ. ‘ಇರಾನ್‌ನಲ್ಲಿ ಹತ್ಯೆಗಳನ್ನು ನಿಲ್ಲಿಸಲಾಗಿದೆ. ತಕ್ಷಣಕ್ಕೆ ಯಾವುದೇ ವ್ಯಕ್ತಿಗಳನ್ನು ಗಲ್ಲಿಗೇರಿಸುವ ಯೋಜನೆ ಇಲ್ಲ ಎಂದು ನನಗೆ ಮಾಹಿತಿ ನೀಡಲಾಗಿದೆ’ ಎಂದು ಟ್ರಂಪ್‌ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರತಿಭಟನಾಕಾರರಿಗೆ ಬೆಂಬಲ ನೀಡಲು ಸಿದ್ದ ಎಂದು ಟ್ರಂಪ್ ಘೋಷಿಸಿದ ಬೆನ್ನಲ್ಲೇ, ಅಂಥವರನ್ನು ಗಲ್ಲಿಗೇರಿಸಿದರೆ ಅದು ಯಾವುದೇ ಕ್ಷಣದಲ್ಲಿ ಅಮೆರಿಕಕ್ಕೆ ತನ್ನ ಮೇಲೆ ದಾಳಿಗೆ ಪ್ರಚೋದನೆ ನೀಡಬಹುದು ಎಂಬ ಆತಂಕದಿಂದ ಇರಾನ್‌ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.ಈ ನಡುವೆ ನಾರ್ವೆಯಲ್ಲಿ ಕಚೇರಿ ಹೊಂದಿರುವ ಇರಾನ್‌ ಮಾನವ ಹಕ್ಕು ಸಂಘಟನೆ, ಇದುವರೆಗೂ ಇರಾನ್‌ನಲ್ಲಿ 3428 ಪ್ರತಿಭಟನಾಕಾರನ್ನು ಹತ್ಯೆ ಮಾಡಲಾಗಿದೆ, 10000ಕ್ಕೂ ಹೆಚ್ಚು ಜನರನ್ನ ಬಂಧಿಸಲಾಗಿದೆ ಎಂದು ಆರೋಪಿಸಿದೆ.

==

ಗ್ರೀನ್‌ ಲ್ಯಾಂಡ್‌ ದ್ವೀಪ ಖರೀದಿಸಬೇಕಿದ್ರೆ

63 ಲಕ್ಷ ಕೋಟಿ ರು. ನೀಡಬೇಕಾಗ್ಬಹುದು!

- ಅಮೆರಿಕ ಸರ್ಕಾರದಿಂದಲೇ ಅಂದಾಜು? । ಈ ವೆಚ್ಚ 90 ಲಕ್ಷ ಕೋಟಿ ದಾಟಲೂಬಹುದು । ಅಲ್ಲಿನ ಖನಿಜ ಸಂಪತ್ತು ಮೌಲ್ಯವೇ 397 ಲಕ್ಷ ಕೋಟಿ!ವಾಷಿಂಗ್ಟನ್‌: ಉತ್ತರ ಅಟ್ಲಾಂಟಿಕ್‌ ಸಮುದ್ರದಲ್ಲಿರುವ ವಿಶ್ವದ ಅತಿದೊಡ್ಡ ದ್ವೀಪ ಗ್ರೀನ್‌ ಲ್ಯಾಂಡ್‌ ಅನ್ನು ಹಣಕೊಟ್ಟು ಖರೀದಿಸುವ ಪ್ರಸ್ತಾಪವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಈಗಾಗಲೇ ಡೆನ್ಮಾರ್ಕ್‌ ಸರ್ಕಾರದ ಮುಂದಿಟ್ಟಿದ್ದಾರೆ. ಒಂದು ವೇಳೆ ಈ ದ್ವೀಪವನ್ನು ಹಣ ಕೊಟ್ಟು ಖರೀದಿಸುವುದೇ ಆಗಿದ್ದರೆ ಎಷ್ಟು ಹಣ ನೀಡಬೇಕಾಗಬಹುದು? ವರದಿಯೊಂದರ ಪ್ರಕಾರ ಸರಿ ಸುಮಾರು 63 ಲಕ್ಷ ಕೋಟಿ ರು!

ಡೆನ್ಮಾರ್ಕ್‌ ನಿಯಂತ್ರಣದಲ್ಲಿರುವ ಗ್ರೀನ್‌ಲ್ಯಾಂಡ್‌ ದ್ವೀಪವು ರಾಷ್ಟ್ರೀಯ ಭದ್ರತೆ ಕಾರಣಕ್ಕೆ ನಮಗೆ ಬೇಕೇ ಬೇಕು. ಈ ದ್ವೀಪವನ್ನು ಹಣ ಕೊಟ್ಟು ಖರೀದಿಸಲು ನಾವು ಯತ್ನಿಸುತ್ತೇವೆ ಎಂದು ಟ್ರಂಪ್‌ ಬುಧವಾರ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರು. ಎನ್‌ಬಿಸಿ ನ್ಯೂಸ್‌ ಸುದ್ದಿಸಂಸ್ಥೆ ಪ್ರಕಾರ ಇದಕ್ಕಾಗಿ ಡೆನ್ಮಾರ್ಕ್‌ ಸರ್ಕಾರದ ಮುಂದೆ 63.18 ಲಕ್ಷ ಕೋಟಿ ರು. ಪ್ರಸ್ತಾಪ ಇಡುವ ಸಾಧ್ಯತೆ ಇದೆ.ವಿದೇಶಾಂಗ ಸಚಿವ ಮಾರ್ಕೋ ರುಬಿನೋ ಅವರು ಸದ್ಯದಲ್ಲೇ ಗ್ರೀನ್‌ಲ್ಯಾಂಡ್‌ ಖರೀದಿ ಸಂಬಂಧ ಪ್ರಸ್ತಾಪವೊಂದನ್ನು ಡೆನ್ಮಾರ್ಕ್‌ ಮುಂದಿಡಲಿದ್ದಾರೆ. ಸದ್ಯದ ಟ್ರಂಪ್‌ ಸರ್ಕಾರದ ಅಂದಾಜಿನ ಪ್ರಕಾರ ಗ್ರೀನ್‌ ಲ್ಯಾಂಡ್‌ ಖರೀದಿಗೆ 63.18 ಲಕ್ಷ ಕೋಟಿ ರು.ಆಗಬಹುದು. ಈ ಮೊತ್ತ 90 ಲಕ್ಷ ಕೋಟಿ ದಾಟಲೂಬಹುದು ಎಂದೂ ಹೇಳಲಾಗುತ್ತಿದೆ.

ಅಧ್ಯಯನವೊಂದರ ಪ್ರಕಾರ ಗ್ರೀನ್‌ ಲ್ಯಾಂಡ್‌ನಲ್ಲಿರುವ ಖನಿಜ ಸಂಪನ್ಮೂಲಗಳ ಮೌಲ್ಯವೇ 397 ಲಕ್ಷ ಕೋಟಿ ರು. ದಾಟುತ್ತದೆ.ಅಮೆರಿಕದ ಆ್ಯಕ್ಷನ್‌ ಫೋರಂ ಅಂದಾಜಿನ ಪ್ರಕಾರ 8 ಲಕ್ಷ ಚದರ ಮೈಲಿಗಳಷ್ಟು ವಿಸ್ತೀರ್ಣದ 55 ಸಾವಿರಕ್ಕೂ ಹೆಚ್ಚು ಮಂದಿ ನಿವಾಸಿಗಳಿರುವ ಈ ದ್ವೀಪ ಖರೀದಿಗಾಗಿ ಅಮೆರಿಕವು 252 ಲಕ್ಷ ಕೋಟಿ ರು.ನಷ್ಟು ವೆಚ್ಚ ಮಾಡಬೇಕಾಗಬಹುದು.

2019ರಲ್ಲೇ ಪ್ರಸ್ತಾಪ:2019ರಲ್ಲೇ ಗ್ರೀನ್‌ ಲ್ಯಾಂಡ್‌ ಖರೀದಿಗಾಗಿ ಟ್ರಂಪ್‌ ಅವರು ಡೆನ್ಮಾರ್ಕ್‌ ಮುಂದೆ ಪ್ರಸ್ತಾಪ ಇಟ್ಟಿದ್ದರು. ಆದರೆ ಎಷ್ಟು ಹಣ ನೀಡಲು ಸಿದ್ಧವಿದೆ ಎಂದು ಈವರೆಗೆ ಬಹಿರಂಗಪಡಿಸಿಲ್ಲ. 1946ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಹ್ಯಾರಿ ಟ್ರೂಮನ್‌ ಅವರು 902 ಕೋಟಿ ರು.ನಷ್ಟು ಮೌಲ್ಯದ ಹಣವನ್ನು ಚಿನ್ನದ ರೂಪದಲ್ಲಿ ನೀಡುವುದಾಗಿ ತಿಳಿಸಿದ್ದರು. ಅದರ ಈಗಿನ ಮೌಲ್ಯ 15,346 ಕೋಟಿ ರು. ಆಗಿರಲಿದೆ. ಆಗಲೂ ಡೆನ್ಮಾರ್ಕ್‌ ಅಮೆರಿಕದ ಈ ಪ್ರಸ್ತಾಪ ತಿರಸ್ಕರಿಸಿತ್ತು.