ಇತ್ತೀಚೆಗೆ ಕೆಲ ದೇಶದ್ರೋಹಿಗಳು ಸಂವಿಧಾನ ಬದಲಾವಣೆಯ ಕೂಗು ಎತ್ತುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಂಬಿರುವವರು ಒಕ್ಕೊರಲಿನಿಂದ ಅದನ್ನು ಖಂಡಿಸಬೇಕು ಎಂದು ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಬೆಂಗಳೂರು : ಇತ್ತೀಚೆಗೆ ಕೆಲ ದೇಶದ್ರೋಹಿಗಳು ಸಂವಿಧಾನ ಬದಲಾವಣೆಯ ಕೂಗು ಎತ್ತುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಂಬಿರುವವರು ಒಕ್ಕೊರಲಿನಿಂದ ಅದನ್ನು ಖಂಡಿಸಬೇಕು ಎಂದು ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಗಣರಾಜ್ಯೋತ್ಸವ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್, ನಮ್ಮ ಪಕ್ಷ ಮತ್ತು ಸರ್ಕಾರ ಜಾತಿ-ಧರ್ಮಗಳ ಬೇಧವಿಲ್ಲದೆ ಸಂಪತ್ತು, ಅವಕಾಶ ಮತ್ತು ಅಧಿಕಾರದಲ್ಲಿ ಸರ್ವರಿಗೂ ಸಮಪಾಲು ಕಲ್ಪಿಸಿದೆ. ಸ್ವಾತಂತ್ರ್ಯದ ಸಂದರ್ಭದಲ್ಲಿ ನಮ್ಮನ್ನು ಕಾಡುತ್ತಿದ್ದ ಎಲ್ಲ ಸಮಸ್ಯೆಗಳನ್ನು ಮೆಟ್ಟಿನಿಲ್ಲುವ ತಾಕತ್ತು ಹೊಂದಿದ್ದೇವೆ. ಇದೆಲ್ಲವೂ ಸಾಧ್ಯವಾಗಿದ್ದು, ಸಂವಿಧಾನದ ಅಂಶಗಳ ಸಮರ್ಪಕ ಜಾರಿಯಿಂದ. ಆದರೆ, ಇತ್ತೀಚೆಗೆ ಕೆಲ ದೇಶದ್ರೋಹಿಗಳು ಸಂವಿಧಾನ ಬದಲಾವಣೆ ಕೂಗು ಎತ್ತುತ್ತಿದ್ದಾರೆ. ಅದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟವರು ವಿರೋಧಿಸಬೇಕು. ಸಂವಿಧಾನಕ್ಕೆ ಗೌರವ ನೀಡುವವನೇ ನಿಜವಾದ ದೇಶಭಕ್ತ, ಅಗೌರವ ತೋರುವವರು ದೇಶದ್ರೋಹಿಗಳು ಎಂದರು.
ಸಂವಿಧಾನವೇ ನಮ್ಮ ಧರ್ಮ:
ಎಲ್ಲರನ್ನು ಒಳಗೊಂಡ ಸಮಾಜ ನಿರ್ಮಾಣವೇ ಸಂವಿಧಾನದ ಆಶಯ ಮತ್ತು ನಮ್ಮ ಸರ್ಕಾರದ ಗುರಿ ಕೂಡ ಅದೇ ಆಗಿದೆ. ಸಂವಿಧಾನವೇ ನಮ್ಮ ಧರ್ಮ, ಅದನ್ನು ಸಾಕಾರಗೊಳಿಸುವುದು ನಮ್ಮ ರಾಜಧರ್ಮ. ಕಾನೂನಿನ ಮುಂದೆ ಜಾತಿ, ಧರ್ಮ, ಸಂಪತ್ತು, ಅಧಿಕಾರ ಯಾವುದೂ ಲೆಕ್ಕವಿಲ್ಲ ಎನ್ನುವುದನ್ನು ಸಂವಿಧಾನದಲ್ಲಿ ಹೇಳಲಾಗಿದೆ. 75 ವರ್ಷಗಳ ಹಿಂದೆ ಬಡತನ, ಅನಕ್ಷತೆ, ಹಸಿವು, ಅಪೌಷ್ಟಿಕತೆ ಸಮಸ್ಯೆಗಳು ದೇಶವನ್ನು ಕಾಡಿತ್ತು. ಕಾಂಗ್ರೆಸ್ ಆಡಳಿತವು ಈಗ ದೇಶದ ಚಿತ್ರಣ ಬದಲಿಸಿದೆ ಎಂದರು.
ಸಂವಿಧಾನ ಆಶಯ ಸಾಕಾರಗೊಳಿಸುವುದು ಸರ್ಕಾರಗಳ ಕರ್ತವ್ಯ. ನಮ್ಮ ಸರ್ಕಾರದ ಯೋಚನೆ ಮತ್ತು ಯೋಜನೆಗಳು ಸಂವಿಧಾನದ ಆಶಯದಂತಿವೆ. ಕರ್ನಾಟಕ ಮಾದರಿಯು ಇಡೀ ದೇಶವಷ್ಟೇ ಅಲ್ಲದೆ ಜಗತ್ತಿನ ಅನೇಕ ಆರ್ಥಿಕ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಕನ್ನಡಿಗರೆಲ್ಲರಿಗೂ ಅಭಿಮಾನದ ಸಂಗತಿ. ಗ್ಯಾರಂಟಿ ಯೋಜನೆಗಳು ಬದುಕಿನ ಗ್ಯಾರಂಟಿ ಹೆಚ್ಚಿಸಿವೆ. ಈವರೆಗೆ 1.16 ಲಕ್ಷ ಕೋಟಿ ರು.ಗೂ ಹೆಚ್ಚಿನ ಹಣವನ್ನು ಗ್ಯಾರಂಟಿಗೆ ವಿನಿಯೋಗಿಸಲಾಗಿದೆ ಎಂದು ತಿಳಿಸಿದರು.

