ಯಾವುದೇ ಕ್ಷಣದಲ್ಲೂ ಸರಕಾರ ಬೀಳಬಹುದು : ವಿಜಯೇಂದ್ರ

| Published : Jul 13 2024, 01:33 AM IST / Updated: Jul 13 2024, 04:55 AM IST

BY vijayendraa

ಸಾರಾಂಶ

‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಹುಕೋಟಿ ಹಗರಣದಿಂದ ನೀವು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಮುಖ್ಯಮಂತ್ರಿಗಳೇ. ಇವತ್ತಲ್ಲ ನಾಳೆ ನೀವು ಸಿಬಿಐ ತನಿಖೆಗೆ ಕೊಡಬೇಕಾಗುತ್ತದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

 ಬೆಂಗಳೂರು :  ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಹುಕೋಟಿ ಹಗರಣದಿಂದ ನೀವು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಮುಖ್ಯಮಂತ್ರಿಗಳೇ. ಇವತ್ತಲ್ಲ ನಾಳೆ ನೀವು ಸಿಬಿಐ ತನಿಖೆಗೆ ಕೊಡಬೇಕಾಗುತ್ತದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಶುಕ್ರವಾರ ಮೈಸೂರಿಗೆ ತೆರಳುವ ವೇಳೆ ಪೊಲೀಸರು ತಡೆದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಗರಣವನ್ನು ಖಂಡಿಸಿ ಮೈಸೂರಿಗೆ ಹೊರಟ ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ಬಂಧಿಸುವ ಪ್ರಯತ್ನ ಖಂಡನೀಯ ಎಂದರು.

ಮಾಜಿ ಸಚಿವ ಬಿ.ನಾಗೇಂದ್ರ ಅವರು ಇ.ಡಿ. ಬಂಧನಕ್ಕೆ ಒಳಗಾಗಿದ್ದಾರೆ. ಕಾಂಗ್ರೆಸ್ಸಿನ ಪಾಪದ ಕೊಡ ತುಂಬಿದೆ. ದಲಿತರ ಹಣ ಲೂಟಿ ಮಾಡಿದ್ದೀರಿ. ಅಲ್ಲದೆ ದಲಿತರು, ಬಡವರಿಗೆ ಮೀಸಲಿಟ್ಟ ನಿವೇಶನಗಳನ್ನು ಲಪಟಾಯಿಸಿದ್ದೀರಿ. ಇದನ್ನು ಸಿಬಿಐ ತನಿಖೆಗೆ ಕೊಡಬೇಕಲ್ಲದೆ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಮುಡಾದಲ್ಲಿ ಸಾವಿರಾರು ಕೋಟಿಗೂ ಮೀರಿದ ದೊಡ್ಡ ಹಗರಣ ಬಯಲಾಗಿದೆ. ಇದರಿಂದ ಮುಖ್ಯಮಂತ್ರಿಗಳು ಆತಂಕಗೊಂಡಿದ್ದಾರೆ. ಮೈಸೂರಿನಲ್ಲಿ ಮುಡಾ ಎದುರು ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ತೀರ್ಮಾನ ಮಾಡಿದ್ದೆವು. ಆದರೆ, ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಪೊಲೀಸರು ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸವನ್ನು ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಯಾವುದೇ ಕ್ಷಣದಲ್ಲಿ ಸರ್ಕಾರ ಪತನ: ಸಿದ್ದರಾಮಯ್ಯ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ. ತುಘಲಕ್ ದರ್ಬಾರ್ ಮಾಡಲು ಮುಂದಾಗಿದೆ. ಬಿಜೆಪಿ ಇದಕ್ಕೆ ಹೆದರುವ ಪ್ರಶ್ನೆಯೇ ಇಲ್ಲ. ಯಾವುದೇ ಕ್ಷಣದಲ್ಲೂ ಸರಕಾರ ಬೀಳಬಹುದು ಎಂದು ವಿಜಯೇಂದ್ರ ಆಕ್ರೋಶದಿಂದ ಹೇಳಿದರು.ಹೋರಾಟ ಹತ್ತಿಕ್ಕುವುದು ಅಕ್ಷಮ್ಯ ಅಪರಾಧ. ಬೆಳಗ್ಗೆ 7 ಗಂಟೆಗೇ ನಮ್ಮ ಮುಖಂಡರನ್ನು ಬಂಧಿಸಿದ್ದಾರೆ. ನೈಸ್ ರಸ್ತೆ ಬಳಿ ನಮ್ಮ ಬ್ಯಾನರ್, ಬಾವುಟಗಳನ್ನು ಕಿತ್ತು ಬಿಸಾಕಿ, ಕಾರ್ಯಕರ್ತರಿಗೆ ಕೊಡಲು ತಂದ ತಿಂಡಿಯನ್ನೂ ಒದ್ದು ಬಿಸಾಕಿದ್ದಾರೆ ಆಕ್ಷೇಪಿಸಿದರು.