100 ಕೋಟಿಗೆ ಪೀಡಿಸಿದರು: ತಾತಾ ವಿರುದ್ಧ ರಮೇಶ್‌ ಗೌಡ ಪ್ರತಿ ದೂರು - ಊಟಕ್ಕೆಂದು ಮನೆಗೆ ಕರೆದು ಹಣ ನೀಡಲು ಕೇಳಿದರು

| Published : Oct 04 2024, 08:13 AM IST

JDS flag
100 ಕೋಟಿಗೆ ಪೀಡಿಸಿದರು: ತಾತಾ ವಿರುದ್ಧ ರಮೇಶ್‌ ಗೌಡ ಪ್ರತಿ ದೂರು - ಊಟಕ್ಕೆಂದು ಮನೆಗೆ ಕರೆದು ಹಣ ನೀಡಲು ಕೇಳಿದರು
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ವಿರುದ್ಧ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ತಾತಾ ವಿರುದ್ಧ 100 ಕೋಟಿ ರು. ಹಣಕ್ಕೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಗೌಡ ಶುಕ್ರವಾರ ಪ್ರತಿ ದೂರು ದಾಖಲಿಸಿದ್ದಾರೆ.

ಬೆಂಗಳೂರು : ತಮ್ಮ ವಿರುದ್ಧ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ತಾತಾ ವಿರುದ್ಧ 100 ಕೋಟಿ ರು. ಹಣಕ್ಕೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಗೌಡ ಶುಕ್ರವಾರ ಪ್ರತಿ ದೂರು ದಾಖಲಿಸಿದ್ದಾರೆ.

ತಮ್ಮ ವಿರುದ್ಧ 50 ಕೋಟಿ ರು. ಹಣ ಸುಲಿಗೆ ಆರೋಪ ಮಾಡಿದ್ದ ಉದ್ಯಮಿ ವಿಜಯ್ ತಾತಾ ಮೇಲೆ ನಗರ ಪೊಲೀಸ್ ಹೆಚ್ಚುವರಿ ಆಯುಕ್ತರಿಗೆ ಜೆಡಿಎಸ್ ಮುಖಂಡ ರಮೇಶ್ ಗೌಡ ದೂರು ನೀಡಿದ್ದಾರೆ. ಬಳಿಕ ಈ ದೂರು ಹೆಚ್ಚುವರಿ ಆಯುಕ್ತರ ಕಚೇರಿಯಿಂದ ಅಮೃತಹಳ್ಳಿ ಠಾಣೆಗೆ ರವಾನೆಯಾಗಿದೆ.

ಆ.24ರಂದು ರಾತ್ರಿ ಉದ್ಯಮಿ ವಿಜಯ್ ತಾತಾ ಅವರ ಆಹ್ವಾನದ ಮೇರೆಗೆ ಅವರ ಮನೆಗೆ ಊಟಕ್ಕೆ ತೆರಳಿದ್ದೆ. ಆಗ ನಾನು ಹೆಣ್ಣೂರಿನಲ್ಲಿ ನಿರ್ಮಿಸಿರುವ ದೇವಾಲಯ ಹಾಗೂ ಶಾಲೆ ವಿಚಾರವನ್ನು ತಿಳಿಸಿದೆ. ಹೀಗೆ ಮಾತುಕತೆ ಮುಂದುವರೆದಾಗ ರಿಯಲ್ ಎಸ್ಟೇಟ್ ವ್ಯವಹಾರವೂ ಪ್ರಸ್ತಾಪವಾಯಿತು. ಆಗ ತಾನು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದು, ತುರ್ತಾಗಿ ನನಗೆ 100 ಕೋಟಿ ರು. ನೆರವು ನೀಡುವಂತೆ ವಿಜಯ್ ತಾತಾ ಕೋರಿದರು. ನಾನು ಹಣವಿಲ್ಲ ಎಂದಾಗ ಅವಾಚ್ಯ ಶಬ್ಧಗಳಿಂದ ಅವರು ನಿಂದಿಸಿದರು ಎಂದು ರಮೇಶ್ ಆರೋಪಿಸಿದ್ದಾರೆ.

ಕೆಲ ದಿನಗಳ ಬಳಿಕ ತಾವೇ ಕರೆ ಮಾಡಿ ಬಲವಂತವಾಗಿ ಹೆಣ್ಣೂರಿನಲ್ಲಿ ನಾನು ನಿರ್ಮಿಸುತ್ತಿರುವ ಶಾಲೆ ಹಾಗೂ ದೇವಾಲಯದ ಕಟ್ಟಡದ ಫೋಟೋಗಳನ್ನು ಅವರು ವಾಟ್ಸಾಪ್ ಮೂಲಕ ಪಡೆದರು. ಆದರೀಗ ಶಾಲೆ ಮತ್ತು ದೇವಾಲಯ ನಿರ್ಮಾಣಕ್ಕೆ 5 ಕೋಟಿ ರು. ಹಣ ನೀಡುವಂತೆ ಒತ್ತಾಯಿಸಿದೆ ಎಂದು ವಿಜಯ್ ತಾತಾ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಮ್ಮ ಹೆಸರಿಗೆ ಕಳಂಕ ತರುವ ದುರುದ್ದೇಶದಿಂದ ನನ್ನ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ 50 ಕೋಟಿ ರು. ಹಣ ವಸೂಲಿಗೆ ಯತ್ನಿಸಿದ್ದರು ಎಂದು ವಿಜಯ್ ಸುಳ್ಳು ಆರೋಪ ಮಾಡುತ್ತಿರುವುದಾಗಿ ರಮೇಶ್ ದೂರಿದ್ದಾರೆ.