ಶೀಘ್ರವೇ ಎಲ್ಲ ಮಂಡ್ಯ ಜಿಲ್ಲೆಯ ತಾಲೂಕುಗಳಲ್ಲೂ ಪ್ರವಾಸ: ಸಂಸದೆ ಸುಮಲತಾ

| Published : Mar 01 2024, 02:16 AM IST

ಶೀಘ್ರವೇ ಎಲ್ಲ ಮಂಡ್ಯ ಜಿಲ್ಲೆಯ ತಾಲೂಕುಗಳಲ್ಲೂ ಪ್ರವಾಸ: ಸಂಸದೆ ಸುಮಲತಾ
Share this Article
  • FB
  • TW
  • Linkdin
  • Email

ಸಾರಾಂಶ

ಐದು ವರ್ಷಗಳ ಕಾಲ ನಾನು ಪಕ್ಷೇತರ ಸಂಸದೆಯಾಗಿ ಕಾರ್ಯನಿರ್ವಹಿಸಿದ್ದೇನೆ. ಈಗ ಹಾಗಿಲ್ಲ. ಪಕ್ಷದಿಂದ ಬರುವ ಸೂಚನೆಯ ಮೇಲೆ ಕೆಲಸ ಮಾಡಬೇಕಿದೆ. ಮಂಡ್ಯ ಎಲೆಕ್ಷನ್ ಸಾಧಾರಣವಾಗಿ ನಡೆಯೋಲ್ಲ. ವಿಶೇಷವಾಗಿ ನಡೆಯುತ್ತೆ. ಕಳೆದ ಚುನಾವಣೆ ವೇಳೆ ಎದುರಾದ ಹಲವಾರು ಸವಾಲುಗಳನ್ನು ಎದುರಿಸಿ ಗೆದ್ದಿದ್ದೇನೆ. ಪಕ್ಷದಲ್ಲಿ ಹಿರಿಯರು ಇದ್ದಾರೆ. ಈಗ ಅವರು ನನಗೆ ರಾಜಕೀಯ ಮಾರ್ಗದರ್ಶನ ಮಾಡುತ್ತಾರೆಂಬ ನಂಬಿಕೆ ಇದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಪ್ರವಾಸ ಹಮ್ಮಿಕೊಳ್ಳುವುದಾಗಿ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ಚುನಾವಣೆ ವಿಚಾರವಾಗಿ ನನ್ನ ನಿರ್ಧಾರವನ್ನು ಸ್ಪಷ್ಟವಾಗಿ ಹೇಳಿದ್ದೇನೆ. ನನ್ನ ಸ್ಪರ್ಧೆ ಕುರಿತು ಪಕ್ಷ ತೀರ್ಮಾನ ಮಾಡಬೇಕು. ನನ್ನ ಬೆಂಬಲಿಗರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿಗೆ ತೆರಳಿ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡುತ್ತೇನೆ. ಚುನಾವಣೆ ಸಂಬಂಧವೇ ಈ ಸಭೆ ಮಾಡುತ್ತಿದ್ದೇನೆ. ಇದರ ಬಗ್ಗೆ ಈಗಾಗಲೇ ರೂಪುರೇಷೆಗಳು ನಡೆಯುತ್ತಿವೆ. ನನ್ನ ಬೆಂಬಲಿಗರಿಗೆ ಯಾವುದೇ ಗೊಂದಲವಾಗಬಾರದು. ಅವರಲ್ಲಿ ವಿಶ್ವಾಸ ತುಂಬುವ ಸಲುವಾಗಿ ಸಭೆ ಮಾಡುತ್ತಿದ್ದೇನೆ ಎಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಪಕ್ಷದ ಸೂಚನೆಯಂತೆ ಕೆಲಸ:

ಹಿಂದೆ ಸ್ವತಂತ್ರ ಅಭ್ಯರ್ಥಿಯಾಗಿದ್ದೆ. ಈಗ ಬೇರೆ ರೀತಿಯಲ್ಲಿ ಭೇಟಿ ಮಾಡುತ್ತೇನೆ. ಎಲ್ಲಾ ತಾಲೂಕಿನ ಬೆಂಬಲಿಗರ ಜೊತೆ ಸಭೆ ನಡೆಸಿ ಚರ್ಚಿಸುತ್ತೇನೆ. ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ತಾಲೂಕು ಪ್ರವಾಸ ಮಾಡುತ್ತೇನೆ. ಆದಿ ಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದು ಪ್ರಚಾರ ಆರಂಭಿಸುತ್ತೇನೆ. ಐದು ವರ್ಷಗಳ ಕಾಲ ನಾನು ಪಕ್ಷೇತರ ಸಂಸದೆಯಾಗಿ ಕಾರ್ಯನಿರ್ವಹಿಸಿದ್ದೇನೆ. ಈಗ ಹಾಗಿಲ್ಲ. ಪಕ್ಷದಿಂದ ಬರುವ ಸೂಚನೆಯ ಮೇಲೆ ಕೆಲಸ ಮಾಡಬೇಕಿದೆ. ಮಂಡ್ಯ ಎಲೆಕ್ಷನ್ ಸಾಧಾರಣವಾಗಿ ನಡೆಯೋಲ್ಲ. ವಿಶೇಷವಾಗಿ ನಡೆಯುತ್ತೆ. ಕಳೆದ ಚುನಾವಣೆ ವೇಳೆ ಎದುರಾದ ಹಲವಾರು ಸವಾಲುಗಳನ್ನು ಎದುರಿಸಿ ಗೆದ್ದಿದ್ದೇನೆ. ಪಕ್ಷದಲ್ಲಿ ಹಿರಿಯರು ಇದ್ದಾರೆ. ಈಗ ಅವರು ನನಗೆ ರಾಜಕೀಯ ಮಾರ್ಗದರ್ಶನ ಮಾಡುತ್ತಾರೆಂಬ ನಂಬಿಕೆ ಇದೆ ಎಂದು ವಿಶ್ವಾಸದಿಂದ ನುಡಿದರು.

ನಾನು ದ್ವೇಷದ ರಾಜಕಾರಣ ಮಾಡೋಲ್ಲ:

ಕುಮಾರಸ್ವಾಮಿ ಬಗ್ಗೆ ಸಂಸದೆ ಸುಮಲತಾ ಮೃದುಧೋರಣೆ ತಳೆದಿರುವ ಬಗ್ಗೆ ಕೇಳಿದಾಗ, ನಾನು ಯಾವತ್ತೂ ಯಾರನ್ನೂ ದ್ವೇಷ ಮಾಡಿಲ್ಲ. ಉದ್ದೇಶ ಪೂರ್ವಕವಾಗಿ ಟಾರ್ಗೇಟ್ ಮಾಡಿಕೊಂಡು ಟೀಕಿಸಿಲ್ಲ. ದ್ವೇಷದ ರಾಜಕಾರಣ ನನಗೆ ಗೊತ್ತಿಲ್ಲ. ನನ್ನ ರೆಕಾರ್ಡ್ ತೆಗೆದು ನೋಡಿ. ನಾನು ಎಲ್ಲು ತಪ್ಪು ಮಾತನಾಡಿಲ್ಲ. ಮೊದಲಿಂದಲೂ ನಾನು ಸಾಫ್ಟ್ ಎಂದು ಸಮಜಾಯಿಷಿ ನೀಡಿದರು.

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆಂಬ ವಿಚಾರವಾಗಿ, ಇದು ಅತ್ಯಂತ ಖಂಡನಿಯ. ದೇಶ ಮೊದಲು. ನಂತರ ರಾಜಕೀಯ. ವಿಧಾನಸೌಧ ಪ್ರಜಾಪ್ರಭುತ್ವದ ದೇವಾಲಯ ಎನ್ನುತ್ತೇವೆ. ಅಂತಹ ಜಾಗದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅನ್ನೋದು ತಪ್ಪು. ಯಾರೇ ಇರಲಿ ಯಾವುದೇ ಪಕ್ಷದವರಿದ್ದರೂ ಅದನ್ನು ಸಮರ್ಥನೆ ಮಾಡುವುದು ಖಂಡನಿಯ ವಿಷಯ. ರಾಜ್ಯ ಸರ್ಕಾರ ತನಿಖೆ ನಡೆಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದರು.