ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಕೋಲಾರ ಚಿಕ್ಕಬಳ್ಳಾಪುರ ಸಹಕಾರ ಹಾಲು ಒಕ್ಕೂಟ (ಕೋಚಿಮುಲ್)ವನ್ನು ಪ್ರತ್ಯೇಕ ಒಕ್ಕೂಟಗಳಾಗಿ ವಿಭಜನೆ ಮಾಡಲು ಬಾಗೇಪಲ್ಲಿಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಒಪ್ಪಿಗೆ ಸೂಚಿಸುವ ಮೂಲಕ ಕಳೆದ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬೇಡಿಕೆಗೆ ಒಪ್ಪಿಗೆ ಸಿಕ್ಕಂತಾಗಿದೆ.ಪಟ್ಟಣದ ಹೊರವಲಯದಲ್ಲಿನ ಸೂರ್ಯ ಕನ್ವೆನ್ಷನ್ ಹಾಲ್‌ನಲ್ಲಿ ಕೋಚಿಮುಲ್ ಅಧ್ಯಕ್ಷ ವೈ.ನಂಜೇಗೌಡರ ಅಧ್ಯಕ್ಷತೆಯಲ್ಲಿ ಬುಧವಾರ ಒಕ್ಕೂಟದ ಸರ್ವಸದಸ್ಯರ ವಿಶೇಷ ಸಭೆ ನಡೆಯಿತು.
ಕೈ ಎತ್ತುವ ಮೂಲಕ ಒಪ್ಪಿಗೆಸಭೆಯಲ್ಲಿ ಕೋಚಿಮುಲ್ ವಿಭಜನೆ ವಿಚಾರದಲ್ಲಿ ಡೇರಿ ಅಧ್ಯಕ್ಷರು ಮತ್ತು ನಿರ್ದೇಶಕರ ನುಡುವೆ ಮಾತಿನ ಚಕಮುಖಿ ನಡೆಯಿತು. ನಂತರ ಪ್ರತ್ಯೇಕ ಒಕ್ಕೂಟದ ವಿಷಯ ಮಾತ್ರ ಸಭೆಯ ಅಜೆಂಡಾ ಆಗಿದ್ದರಿಂದ ಸಭೆಯಲ್ಲಿ ಒಕ್ಕೂಟದ ವಿಭಜನೆಯ ವಿಷಯವನ್ನು ಮಂಡಿಸಲಾಯಿತು. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಹಾಲಿನ ಡೇರಿಗಳಿಂದ ಸಭೆಗೆ ಆಗಮಿಸಿದ್ದ ಅಧ್ಯಕ್ಷರು ಕೈಗಳನ್ನು ಎತ್ತುವುದರ ಮೂಲಕ ನಿರ್ಣಯಕ್ಕೆ ಒಪ್ಪಿಗೆ ನೀಡಿದರು.
ಸಭೆಯಲ್ಲಿ ಗೊಂದಲದ ವಾತಾವರಣದ ನಡುವೆಯೂ ಸಭೆಯಲ್ಲಿ ಮಂಡಿಸಿದ್ದ ಕೋಚಿಮುಲ್ ವಿಭಜನೆಯ ವಿಷಯಕ್ಕೆ ಸದಸ್ಯರು ಸರ್ವಾನುಮತದ ಅನುಮೋದನೆ ದೊರೆಯಿತು. ಎರಡೂ ಜಿಲ್ಲೆಗಳ ಅಧ್ಯಕ್ಷರು ಸಭೆಯಿಂದ ಹೊರನಡೆಯುತ್ತಿದ್ದಂತೆ ಸಭೆ ಮುಕ್ತಾಯವಾಯಿತು.ಕಾನೂನಾತ್ಮಕ ವಿಭಜನೆ
ಕೋಚಿಮುಲ್ ವಿಶೇಷ ಸಾಮಾನ್ಯ ಸಭೆಯ ನಂತರ ಕೋಚಿಮುಲ್ ಅಧ್ಯಕ್ಷರು ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡರವರು ಮಾತನಾಡಿ, ಈ ಹಿಂದಿನ ಬಿಜೆಪಿ ಸರ್ಕಾರ ಕೋಚಿಮುಲ್ ವಿಭಜಿಸಿತ್ತು. ಆದರೆ ಬಿಜೆಪಿ ಸರ್ಕಾರ ಸರಿಯಾದ ರೀತಿಯಲ್ಲಿ ವಿಭಜನೆ ಮಾಡಿರಲಿಲ್ಲ. ಆತುರದ ಎಡವಟ್ಟಿನ ಹಿನ್ನೆಲೆಯಲ್ಲಿ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಹಾಗಾಗಿ ನ್ಯಾಯಾಲಯದ ಸೂಚನೆಯಂತೆ ಇಂದು ಸರ್ವಸದಸ್ಯರ ಸಭೆಯನ್ನು ಕರೆಯಲಾಗಿದ್ದು, ಎಲ್ಲರೂ ಸರ್ವಾನುಮತದಿಂದ ವಿಭಜನೆಗೆ ಒಪ್ಪಿಗೆ ಸೂಚಿಸಿದ್ದಾರೆ. ನಮ್ಮ ಸರ್ಕಾರ ಕಾನೂನಾತ್ಮಕವಾಗಿ ಒಕ್ಕೂಟದ ವಿಭಜನೆ ಮಾಡುತ್ತದೆ ಎಂದರು.ನಮ್ಮ ಆಡಳಿತ ಮಂಡಳಿಯ ಅಧಿಕಾರಾವಧಿಯಲ್ಲಿ ಸುಮಾರು 220 ಕೋಟಿ ಅನುದಾನದಲ್ಲಿ ಎಂ.ವಿ ಕೃಷ್ಣಪ್ಪ ಹೆಸರಲ್ಲಿ ಮೆಗಾ ಡೇರಿ ಸ್ಥಾಪಿಸಲಾಗುತ್ತಿದೆ, ಹಾಗೇಯೇ ಸುಮಾರು 65 ಕೋಟಿ ವೆಚ್ಚದಲ್ಲಿ ಚಿಂತಾಮಣಿಯಲ್ಲಿ ಐಸ್ ಕ್ರೀಮ್ ಘಟಕದ ಕಾಮಗಾರಿ ಆರಂಭವಾಗಿದೆ. ಸೋಲಾರ್ ಪ್ಲಾಂಟ್ ಸ್ಥಾಪಿಸಲಾಗಿದ್ದು, ಕೆಲವೇ ತಿಂಗಳಲ್ಲಿ 12 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಚಿಕ್ಕಬಳ್ಳಾಪುರದಲ್ಲಿ 130 ಕೋಟಿ ವೆಚ್ಚದಲ್ಲಿ ಹಾಲಿನ ಪ್ಯಾಕಿಂಗ್ ಘಟಕ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷರ ಅವಧಿ ಮುಗಿದಿದೆಇದೇ ವೇಳೆ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ ನಾಗರಾಜ್ ರವರು ಮಾತನಾಡಿ, ಕೋಚಿಮುಲ್ ವಿಭಜನೆಗೆ ಕೆಲ ನಿರ್ದೇಶಕರು ಎರಡು ಬಾರಿ ನ್ಯಾಯಾಲದಿಂದ ತಡೆಯಾಜ್ಙೆ ತಂದು ವಿಭಜನೆಯಾಗಿದ್ದ ಚಿಮುಲ್ ಒಕ್ಕೂಟವನ್ನು ರದ್ದುಗೊಳಿಸಿ ವಿಭಜನೆಗೆ ಅಡ್ಡಿಪಡಿಸಿದ್ದರು. ಮೇ 12 ಕ್ಕೆ ಇವರ ಅಧಿಕಾರಾವಧಿ ಮುಗಿದು ಎರಡು ತಿಂಗಳು ಕಳೆದಿವೆ. ಅಧಿಕಾರದ ಲಾಲಸೆಗಾಗಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಸದೆ ರಾಜಕೀಯ ದುರುದ್ದೇಶದಿಂದ ಚುನಾವಣೆಯನ್ನು ಮುಂದೂಡಿರುವ ಅಧ್ಯಕ್ಷರು ಕೋಚಿಮುಲ್ ವಿಭಜನೆ ಹಾಗೂ ಪ್ರತ್ಯೇಕದ ನಾಟಕ ಆಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೋಚಿಮುಲ್ ನಿರ್ದೇಶಕರಾದ ವಿ.ಮಂಜುನಾಥ ರೆಡ್ಡಿ, ಕಾಂತರಾಜು, ಭರಣಿ ವೆಂಕಟೇಶ್, ಜಯಸಿಂಹ ಕೃಷ್ಣಪ್ಪ, ಕೆ.ಎನ್ ನಾಗರಾಜ, ಅಶ್ವತ್ಥನಾರಾಯಣ, ಡಿ.ವಿ ಹರೀಶ್, ಎನ್ ಹನುಮೇಶ್, ಪಿ.ಎಂ ವೆಂಕಟೇಶ್, ಆರ್.ಶ್ರೀನಿವಾಸ್, ಆದಿನಾರಾಯಣರೆಡ್ಡಿ, ಚಿಕ್ಕಬಳ್ಳಾಪುರ ಮಹಿಳಾ ಕ್ಷೇತ್ರದ ನಿರ್ದೇಶಕಿ ಸುನಂದಮ್ಮ,ಕೋಲಾರ ಮಹಿಳಾ ಕ್ಷೇತ್ರದ ನಿರ್ದೇಶಕಿ ಆರ್ ಕಾಂತಮ್ಮ ,ಸಹಕಾರ ಸಂಘಗಳ ಜಂಟಿ ನಿಬಂಧಕರು ಅಶ್ವತ್ಥನಾರಾಯಣ,ನಿರ್ದೇಶಕ ಕರ್ನಾಟಕ ಹಾಲು ಉತ್ಪಾದಕರ ಮಂಡಲಿಯ ಬಿ.ಪಿ ಸುರೇಶ , ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್ ಗೋಪಾಲಮೂರ್ತಿ ಮತ್ತಿತರರು ಇದ್ದರು.