ಸಾರಾಂಶ
ದೇಶದಲ್ಲಿ ನಿರುದ್ಯೋಗ ಅತೀ ದೊಡ್ಡ ಸಮಸ್ಯೆಯಾಗಿದ್ದು, ಕೇಂದ್ರ ಸರ್ಕಾರ ಸರಿಯಾಗಿ ಸ್ಪಂದಿಸದೆ ಇರುವುದರಿಂದ ಅದು ಹೆಚ್ಚಾಗುತ್ತಿದೆ. ಆದರೆ, ರಾಜ್ಯದಲ್ಲಿ ‘ಯುವ ನಿಧಿ’ ಜಾರಿ ಜೊತೆಗೆ ಯುವಕರಿಗೆ ಕೌಶಲ್ಯ ನೀಡುವ ಮೂಲಕ ನಿರುದ್ಯೋಗ ನಿವಾರಣೆಗೆ ಕಾಂಗ್ರೆಸ್ ಪಣ ತೊಟ್ಟಿದೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ
ಕಲಬುರಗಿ : ದೇಶದಲ್ಲಿ ನಿರುದ್ಯೋಗ ಅತೀ ದೊಡ್ಡ ಸಮಸ್ಯೆಯಾಗಿದ್ದು, ಕೇಂದ್ರ ಸರ್ಕಾರ ಸರಿಯಾಗಿ ಸ್ಪಂದಿಸದೆ ಇರುವುದರಿಂದ ಅದು ಹೆಚ್ಚಾಗುತ್ತಿದೆ. ಆದರೆ, ರಾಜ್ಯದಲ್ಲಿ ‘ಯುವ ನಿಧಿ’ ಜಾರಿ ಜೊತೆಗೆ ಯುವಕರಿಗೆ ಕೌಶಲ್ಯ ನೀಡುವ ಮೂಲಕ ನಿರುದ್ಯೋಗ ನಿವಾರಣೆಗೆ ಕಾಂಗ್ರೆಸ್ ಪಣ ತೊಟ್ಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕದಲ್ಲಿ ನಿರುದ್ಯೋಗ ನಿವಾರಣೆಗೆ ನಮ್ಮ ಸರ್ಕಾರ ನಿರಂತರವಾಗಿ ಉದ್ಯೋಗ ಮೇಳ ಆಯೋಜಿಸುತ್ತಿದೆ. ಇದರ ಫಲವಾಗಿ ದೇಶದ ನಿರುದ್ಯೋಗ ಪ್ರಮಾಣ ಶೇ.18.9 ಇದ್ದರೆ, ಕರ್ನಾಟಕದ ಪ್ರಮಾಣ ಶೇ.2.5 ಇದೆ ಎಂದು ತಿಳಿಸಿದ್ದಾರೆ.ನಗರದ ಕೆ.ಸಿ.ಟಿ. ಕಾಲೇಜ್ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉದ್ಯೋಗ ಮೇಳ ಉದ್ಘಾಟಿಸಿ, ಸಾಂಕೇತಿಕವಾಗಿ ಯುವಕರಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀನಿ ಅಂದಿದ್ದರು. ಇದುವರೆಗೆ 20 ಲಕ್ಷ ಜನರಿಗೆ ಉದ್ಯೋಗ ನೀಡಿಲ್ಲ. ಕೇಂದ್ರ ಸರ್ಕಾರ ದೇಶದ ಯುವಕರನ್ನು ಸಂಪೂರ್ಣ ನಿರ್ಲಕ್ಷಿಸುತ್ತಿದೆ. ಆದರೆ, ನಮ್ಮ ಸರ್ಕಾರ ಯುವಕರಿಗೆ ಉದ್ಯೋಗ ನೀಡಿ ಅವರ ಬದುಕು ಕಟ್ಟುವ ಕೆಲಸ ಮಾಡುತ್ತಿದೆ ಎಂದರು.ನಾವು ನುಡಿದಂತೆ ನಡೆಯುತ್ತಿದ್ದು, 5 ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಇದರಲ್ಲಿ ಯುವ ನಿಧಿ ಅಡಿ ನಿರುದ್ಯೋಗ ಭತ್ಯೆ ನೀಡುವ ಜೊತೆಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗವನ್ನೂ ಒದಗಿಸುತ್ತಿದ್ದೇವೆ ಎಂದರು.
ಕೌಶಲ್ಯಕ್ಕೆ ಬೇಡಿಕೆ- ಡಿಸಿಎಂ:
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ವಿಶ್ವದಾದ್ಯಂತ ಕೌಶಲ್ಯಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಯುವ ಸಮೂಹ ಕೌಶಲ್ಯ ಪಡೆಯುವ ನಿಟ್ಟಿನಲ್ಲಿ ಹೆಚ್ಚು ಆಸಕ್ತಿ ತೋರಬೇಕು. ಯುವಕರಿಗೆ ಕೌಶಲ್ಯ ನೀಡುವಲ್ಲಿ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು.
ಕಲ್ಯಾಣ ಕರ್ನಾಟಕದಲ್ಲಿ ಕೈಗಾರಿಕೆ ಸ್ಥಾಪನೆಗೆ ಒತ್ತು
ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ 2025-26ನೇ ಸಾಲಿಗೆ ₹5,000 ಕೋಟಿ ಅನುದಾನ ನೀಡಲಾಗಿದೆ. ಅಷ್ಟು ಹಣ ಖರ್ಚು ಮಾಡುವಂತೆ ಡಾ.ಅಜಯ್ ಸಿಂಗ್‌ಗೆ ಸೂಚಿಸಿದ್ದು, ಅವರು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡುವ ಜತೆಗೆ ಕೌಶಲ್ಯ ನೀಡುವ ತರಬೇತಿ ಕೇಂದ್ರಗಳನ್ನು ಸಹ ತೆರೆಯಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.ಸಚಿವರಾದ ಡಾ. ಶರಣಪ್ರಕಾಶ ಪಾಟೀಲ, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ, ಶರಣಬಸಪ್ಪ ದರ್ಶನಾಪೂರ, ಡಾ.ಎಂ.ಸಿ.ಸುಧಾಕರ್, ಶಾಸಕ ಎಂ.ವೈ. ಪಾಟೀಲ, ರಾಜ್ಯದ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ ಸಿಂಗ್ ಶಾಸಕರು, ಪಕ್ಷದ ಮುಖಂಡರು ಇದ್ದರು.
ಪ್ರಣಾಳಿಕೆಯಲ್ಲಿ ಘೋಷಿಸಿದವೆಲ್ಲ ಜಾರಿಯಾಗಿದೆ: ಮುಖ್ಯಮಂತ್ರಿ
ಪ್ರಣಾಳಿಕೆ ಹಾಗೂ ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮಗಳೆಲ್ಲಾ ಜಾರಿ ಆಗುತ್ತಿರುವುದು ಜನರ ಕಣ್ಣಿಗೆ ಕಾಣುತ್ತಿದೆ. ಆದರೆ, ಬಿಜೆಪಿ ಕಣ್ಣಿಗೆ ಮಾತ್ರ ಕಾಣುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ₹216.53 ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ₹6.20 ಕೋಟಿ ವೆಚ್ಚದ ಬ್ರಾಕಿಥೆರಪಿ ವಿಕೀರಣ ಚಿಕಿತ್ಸೆ ಘಟಕವನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ಪ್ರತೀ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು, ಟ್ರಾಮಾ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ ಇರಲೇಬೇಕು ಎನ್ನುವುದು ನಮ್ಮ ಸರ್ಕಾರದ ಗುರಿಯಾಗಿದ್ದು, ಒಂದೊಂದೇ ಜಿಲ್ಲೆಯಲ್ಲಿ ಇವೆಲ್ಲವೂ ನೆರವೇರುತ್ತಿವೆ ಎಂದರು.
ಅಭಿವೃದ್ಧಿಗೆ ಸರ್ಕಾರದ ಬಳಿ ಹಣ ಇಲ್ಲ ಎನ್ನುವ ಬಿಜೆಪಿಯವರು ಕಲಬುರಗಿ ಬಂದು ಕಣ್ಣು ತೆರೆದು ನೋಡಿದರೆ ಅಭಿವೃದ್ಧಿಯ ಮಹಾಪೂರ ಕಾಣಿಸುತ್ತದೆ. ನಮ್ಮ ಸರ್ಕಾರದಲ್ಲಿ ಹಣಕ್ಕೆ ಕೊರತೆ ಇಲ್ಲ. ಎಲ್ಲಾ ವರ್ಗದ ಜನರಿಗೆ, ಸರ್ಕಾರದ ಯೋಜನೆ ತಲುಪಿಸಲು ನಿರಂತರವಾಗಿ ಕಾಂಗ್ರೆಸ್ ಶ್ರಮಿಸುತ್ತಿದೆ ಎಂದರು.