ಬೆಂಗಳೂರು : ಕೇಂದ್ರ ಚುನಾವಣಾ ಆಯೋಗವು ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಿಸಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ಬಿಜೆಪಿಯ ನಾರಾಯಣ ಕೊರಗಪ್ಪ, ಈರಣ್ಣ ಕಡಾಡಿ ಅವರ ರಾಜ್ಯಸಭಾ ಸದಸ್ಯತ್ವ ಅವಧಿ ಇದೇ ಜೂ.25ಕ್ಕೆ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಈ ನಾಲ್ಕು ಸ್ಥಾನಗಳಿಗೆ ಜೂ.18ರಂದು ಚುನಾವಣೆ ನಡೆಸುವುದಾಗಿ ತಿಳಿಸಿದೆ.

ಜೂ.1ರಂದು ಅಧಿಸೂಚನೆ ಹೊರಬೀಳಲಿದ್ದು, ಜೂ.8 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜೂ.9ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂ.11 ನಾಮಪತ್ರ ಹಿಂಪಡೆಯಲು ಕಡೆ ದಿನವಾಗಿದೆ. ಜೂ.18ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದ್ದು, ಅಂದೇ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.


ವಿಧಾನಸಭೆಯಿಂದ ರಾಜ್ಯಸಭೆಗೆ ನಾಲ್ವರು ಸದಸ್ಯರ ಆಯ್ಕೆಗಾಗಿ ಈ ಚುನಾವಣೆ ನಡೆಯಲಿದೆ. ರಾಜಕೀಯ ಪಕ್ಷಗಳ ವಿಧಾನಸಭೆ ಸದಸ್ಯರ ಸಂಖ್ಯಾಬಲ ನೋಡಿದಾಗ, ಕಾಂಗ್ರೆಸ್‌ಗೆ ಮೂರು ಸ್ಥಾನ ಮತ್ತು ಬಿಜೆಪಿಗೆ ಒಂದು ಸ್ಥಾನ ಲಭಿಸಲಿದೆ. ಜೆಡಿಎಸ್‌ ಬಳಿ ಅಗತ್ಯ ಸಂಖ್ಯಾಬಲ ಇಲ್ಲ.

ಎಚ್‌ಡಿಡಿ ಮರು ಆಯ್ಕೆ ತೀರ್ಮಾನ ಆಗಿಲ್ಲ:

ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ಮರು ಆಯ್ಕೆ ಆಗಬೇಕಾದರೆ, ಬಿಜೆಪಿಯ ಬೆಂಬಲ ಅತ್ಯಗತ್ಯ. ಆದರೆ, ಈ ಬಗ್ಗೆ ಜೆಡಿಎಸ್‌ ಅಥವಾ ಬಿಜೆಪಿ ರಾಜ್ಯ ನಾಯಕರು ಯಾವುದೇ ತೀರ್ಮಾನ ಮಾಡಿಲ್ಲ. ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷಗಳಲ್ಲಿ ಚರ್ಚೆಗಳು ಶುರುವಾಗಿವೆ. ಶೀಘ್ರದಲ್ಲೇ ಅಭ್ಯರ್ಥಿಗಳ ಹೆಸರು ಬೀಳಲಿದೆ.

ಯಾರ ಅವಧಿ ಅಂತ್ಯ?

- ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್‌ನ ಎಚ್‌.ಡಿ.ದೇವೇಗೌಡ, ಬಿಜೆಪಿಯ ಕೆ.ನಾರಾಯಣ, ಈರಣ್ಣ ಕಡಾಡಿ.

ರೇಸಲ್ಲಿ ಯಾರು?

ಕಾಂಗ್ರೆಸ್‌: ಮಲ್ಲಿಕಾರ್ಜುನ ಖರ್ಗೆ, ಬಿ.ವಿ.ಶ್ರೀನಿವಾಸ್‌, ಬಿ.ಕೆ. ಹರಿಪ್ರಸಾದ್‌

ಬಿಜೆಪಿ: ಡಿ.ವಿ. ಸದಾನಂದಗೌಡ, ನಿರ್ಮಲಕುಮಾರ್‌ ಸುರಾನಾ, ವರಿಷ್ಠರು ಒಪ್ಪಿದರೆ ಜೆಡಿಎಸ್‌ ವರಿಷ್ಠ ದೇವೇಗೌಡ