‘ವಂದೇ ಮಾತರಂ’ ಗೀತೆಗೆ 150 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯಸಭೆಯಲ್ಲಿ ನಿಗದಿಯಾಗಿದ್ದ ಚರ್ಚೆಯು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನಡುವೆ ಭಾರೀ ಜಟಾಪಟಿಗೆ ಸಾಕ್ಷಿಯಾಯಿತು

ನವದೆಹಲಿ: ‘ವಂದೇ ಮಾತರಂ’ ಗೀತೆಗೆ 150 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯಸಭೆಯಲ್ಲಿ ನಿಗದಿಯಾಗಿದ್ದ ಚರ್ಚೆಯು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನಡುವೆ ಭಾರೀ ಜಟಾಪಟಿಗೆ ಸಾಕ್ಷಿಯಾಯಿತು.

‘ಸ್ವಾತಂತ್ರ್ಯಾನಂತರದ 75 ವರ್ಷದ ಬಳಿಕ ಇಂಥದ್ದೊಂದು ಚರ್ಚೆ ಅಗತ್ಯವೇನಿತ್ತು? ಇದು ಬಂಗಾಳ ಚುನಾವಣೆಯನ್ನು ಉದ್ದೇಶಿಸಿ ಆರಂಭಿಸಲಾದ ಬೆಳವಣಿಗೆ’ ಎಂದು ಸಂಸದೆ ಪ್ರಿಯಾಂಕಾ ಗಾಂಧಿ ಸೋಮವಾರ ಲೋಕಸಭೆಯಲ್ಲಿ ಆಡಿದ ಮಾತು ಪ್ರಸ್ತಾಪಿಸಿದ ಅಮಿತ್‌ ಶಾ, ಕಾಂಗ್ರೆಸ್‌ ನಾಯಕರಿಗೆ ಅರಿವಿನ ಕೊರತೆ ಎಂದು ವ್ಯಂಗ್ಯವಾಡಿದರೆ, ಪ್ರಿಯಾಂಕಾ ಹೇಳಿಕೆಯನ್ನೇ ಪುನುರುಚ್ಚರಿಸುವ ಮೂಲಕ ಬಿಜೆಪಿ ನಾಯಕರಿಗೆ ಖರ್ಗೆ ತಿರುಗೇಟು ನೀಡುವ ಯತ್ನ ಮಾಡಿದರು. ಜೊತೆಗೆ ನೆಹರೂ ಅವರನ್ನು ಟೀಕಿಸುವ ಯಾವುದೇ ಅವಕಾಶವನ್ನೂ ಬಿಜೆಪಿಗರು ಬಿಡಲ್ಲ. ಮೋದಿ ಏನು ಮಾಡುತ್ತಾರೋ ಅದೇ ಹಾದಿಯನ್ನು ಅಮಿತ್‌ ಶಾ ಹಿಡಿಯುತ್ತಾರೆ ಎಂದು ವ್ಯಂಗ್ಯವಾಡಿದರು.

ರಾಜ್ಯಸಭೆಯಲ್ಲಿ ಚರ್ಚೆಗೆ ಚಾಲನೆ ನೀಡಿದ ಅಮಿತ್‌ ಶಾ, ‘ವಂದೇ ಮಾತರಂ ಭಾರತದ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಎಚ್ಚರಗೊಳಿಸಿದ ಮಂತ್ರ. ಸ್ವಾತಂತ್ರ್ಯ ಹೋರಾಟದ ವೇಳೆ ಇದು ಎಷ್ಟು ಪ್ರಸ್ತುತವಾಗಿತ್ತೋ ಈಗಲೂ ಅಷ್ಟೇ ಇದೆ. ಜೊತೆಗೆ, ವಿಕಸಿತ ಭಾರತದ ಕಡೆಗೆ ಭಾರತ ಹೆಜ್ಜೆ ಹಾಕುವಲ್ಲಿ ಮುಂದಿನ ದಿನಗಳಲ್ಲೂ ಈ ಮಂತ್ರ ಪ್ರಸ್ತುತವಾಗಿರಲಿದೆ’ ಎಂದರು.

ಪ್ರಿಯಾಂಕಾ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡ ಶಾ

ಜೊತೆಗೆ ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಇದೀಗ ವಂದೇ ಮಾತರಂ ಚರ್ಚೆಗೆ ಮುಂದಾಗಿದೆ ಎಂಬ ಲೋಕಸಭೆಯಲ್ಲಿ ಪ್ರಿಯಾಂಕಾ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡ ಶಾ, ‘ವಂದೇ ಮಾತರಂಗೆ 50 ವರ್ಷ ತುಂಬಿದ್ದ ವೇಳೆ, ದೇಶದ ಮೊದಲ ಪ್ರಧಾನಿ ಅದನ್ನು ತುಂಡು ತುಂಡು ಮಾಡಿದ್ದರೆ, ಇದೀಗ ಅವರದ್ದೇ ಪಕ್ಷದ ನಾಯಕರು (ಪ್ರಿಯಾಂಕಾ) ಈ ರೀತಿ ಗೌರವ ತೋರಿಸುತ್ತಿದ್ದಾರೆ. ಬಂಗಾಳದ ಚುನಾವಣೆಗೆ ಜೊತೆಗೆ ವಂದೇ ಮಾತರಂ ಚರ್ಚೆಗೆ ಹೋಲಿಸುವವರು, ಈ ಕುರಿತ ತಮ್ಮ ತಿಳುವಳಿಕೆಯನ್ನು ಮರುಪರಿಶೀಲಿಸಬೇಕು. ಮಹತ್ವದ ವಿಷಯದ ಕುರಿತ ಚರ್ಚೆಯನ್ನು ಚುನಾವಣೆಗೆ ಹೋಲಿಸುವುದು ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಹಿಸಿದ ಭಾವನಾತ್ಮಕ ಪಾತ್ರವನ್ನು ಅವಮಾನಿಸಿದಂತೆ. ಇಂಥ ಚರ್ಚೆ ದೇಶದ ಭವಿಷ್ಯದ ತಲೆಮಾರಿಗೆ, ಈ ಗೀತೆಯ ಮಹತ್ವವನ್ನು ಅರಿವು ಮೂಡಿಸಲು ನೆರವಾಗುತ್ತದೆ ಎಂದು ಹೇಳಿದರು.

ಜೊತೆಗೆ ವಂದೇ ಮಾತರಂ ಕುರಿತ ಚರ್ಚೆ ಇತರೆ ವಿಷಯಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಯತ್ನ ಎಂಬ ವಿಪಕ್ಷಗಳ ಆರೋಪವನ್ನೂ ತಳ್ಳಿಹಾಕಿದ ಶಾ, ನಾವು ಯಾವುದೇ ಚರ್ಚೆಗೆ ಹೆದರಲ್ಲ ಆಥವಾ ಯಾವುದೇ ವಿಷಯವನ್ನು ಮುಚ್ಚಿಡುತ್ತಿಲ್ಲ. ಯಾವುದೇ ವಿಷಯ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದರು. ಅಲ್ಲದೆ ವಂದೇ ಮಾತರಂ ಚರ್ಚೆ ಆರಂಭದ ವೇಳೆ ರಾಹುಲ್‌, ಪ್ರಿಯಾಂಕಾ ಗೈರಾಗಿದ್ದನ್ನು ಪ್ರಶ್ನಿಸಿ ಕಿಡಿಕಾರಿದರು.

ಖರ್ಗೆ ತಿರುಗೇಟು:

ಈ ನಡುವೆ ವಿಪಕ್ಷಗಳ ಚರ್ಚೆಗೆ ಚಾಲನೆ ನೀಡಿದ ಮಲ್ಲಿಕಾರ್ಜುನ ಖರ್ಗೆ, ‘ಬೆಲೆ ಏರಿಕೆ, ನಿರುದ್ಯೋಗ, ಕುಸಿಯುತ್ತಿರುವ ಆರ್ಥಿಕತೆ, ರುಪಾಯಿ ಮೌಲ್ಯ ಕುಸಿತ ಮತ್ತಿತರೆ ಸಾಮಾಜಿಕ ವಿಷಯಗಳಿಂದ ಜನರ ಗಮನ ಬೇರೆ ಸೆಳೆಯಲು ಮತ್ತು ಪಶ್ಚಿಮ ಬಂಗಾಳ ಚುನಾವಣೆ ಗಮನದಲ್ಲಿಟ್ಟುಕೊಂಡು ಸರ್ಕಾರ ಚುನಾವಣೆಗೆ ಮುಂದಾಗಿದೆ. ಇದರ ಬದಲು ಜನ ಸಾಮಾನ್ಯರ ನೈಜ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅದಕ್ಕೆ ಪರಿಹಾರ ಕಂಡುಕೊಂಡರೆ ಅದುವೇ ವಂದೇಮಾತರಂಗೆ ಸಲ್ಲಿಸುವ ನೈಜ ಗೌರವ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಅಲ್ಲದೆ, ‘ವಂದೇ ಮಾತರಂ ಗೀತೆಯನ್ನು ಕೇವಲ 2 ಪ್ಯಾರಾದಲ್ಲಿ ಹಾಡಬೇಕೆಂಬುದು, ಗಾಂಧೀಜಿ, ರವೀಂದ್ರನಾಥ ಟ್ಯಾಗೋರ್‌, ಸುಭಾಷ್‌ ಚಂದ್ರಬೋಸ್‌ ಅವರೊಂದಿಗೆ ಚರ್ಚಿಸಿ ತೆಗೆದುಕೊಂಡ ನಿರ್ಧಾರವಾಗಿತ್ತು. 1921ರ ಅಸಹಕಾರ ಚಳವಳಿ ವೇಳೆ ಕಾಂಗ್ರೆಸ್ಸಿಗರು ವಂದೇ ಮಾತರಂ ಹಾಡಿ ಜೈಲಿಗೆ ಸೇರುತ್ತಿದ್ದಾಗ, ನೀವುಗಳು (ಬಿಜೆಪಿ ನಾಯಕರು) ದೇಶಪ್ರೇಮಕ್ಕೆ ಹೆದರಿ ಬ್ರಿಟೀಷರ ಸೇವೆ ಮಾಡುತ್ತಿದ್ದಿರಿ. ನಾವು ಹಿಂದಿನಿಂದಲೂ ವಂದೇ ಮಾತರಂ ಹಾಡುತ್ತಿದ್ದೇವೆ. ಆದರೆ ನೀವು ಈಗ ಅಧಿಕಾರಕ್ಕೆ ಬಂದ ಬಳಿಕ ಹಾಡುತ್ತಿದ್ದೀರಿ’ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.