ವಾಲ್ಮೀಕಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣ ಸಂಬಂಧ ಸಚಿವ ಬಿ.ನಾಗೇಂದ್ರ ಅವರ ತಲೆದಂಡವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸದನದ ಒಳಗೆ ಮತ್ತು ಹೊರಗೆ ಬಿಜೆಪಿ-ಜೆಡಿಎಸ್ ರೂಪಿಸಿದ ಸಂಘಟಿತ ಹೋರಾಟಕ್ಕೆ ಕೊನೆಗೂ ಗೆಲುವಾಗಿದೆ.
ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣ ಸಂಬಂಧ ಸಚಿವ ಬಿ.ನಾಗೇಂದ್ರ ಅವರ ತಲೆದಂಡವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸದನದ ಒಳಗೆ ಮತ್ತು ಹೊರಗೆ ಬಿಜೆಪಿ-ಜೆಡಿಎಸ್ ರೂಪಿಸಿದ ಸಂಘಟಿತ ಹೋರಾಟಕ್ಕೆ ಕೊನೆಗೂ ಗೆಲುವಾಗಿದೆ.
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧದ ಮುಡಾ ಹಗರಣ ವಿಚಾರವಾಗಿ ವಿಜಯೇಂದ್ರ ನೇತೃತ್ವದಲ್ಲಿ ಸಂಘಟಿತ ಹೋರಾಟ ನಡೆದಿತ್ತು. ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕುವಲ್ಲಿ ಯಶಸ್ವಿಯಾಗಿದ್ದರು. ದಿನದಿಂದ ದಿನಕ್ಕೆ ಹೋರಾಟ ತೀವ್ರಗೊಂಡು ರಾಜಕೀಯ ತಿರುವು ಪಡೆದುಕೊಂಡ ಹಿನ್ನೆಲೆಯಲ್ಲಿ ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾದಿಂದ ಪಡೆದಿದ್ದ ಕೋಟ್ಯಂತರ ರು. ಮೌಲ್ಯದ 14 ಬದಲಿ ನಿವೇಶನಗಳನ್ನು ಮುಡಾಕ್ಕೆ ವಾಪಸ್ ನೀಡಿದ್ದರು.
ಸಂಘಟಿತ ಹೋರಾಟ:
ಈ ಪ್ರಮುಖ ಹೋರಾಟದ ಬಳಿಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ವಿಚಾರ ಕೈಗೆತ್ತಿಕೊಂಡ ವಿಜಯೇಂದ್ರ ಅವರು ಮೈತ್ರಿ ಪಕ್ಷ ಜೆಡಿಎಸ್ ಅನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದನದ ಒಳಗೆ ಮತ್ತು ಹೊರಗೆ ಸಂಘಟಿತ ಹೋರಾಟ ರೂಪಿಸಿದ್ದರು. ಸಿದ್ದರಾಮಯ್ಯ ಅವಧಿಯಲ್ಲಿ ನಡೆದ ಈ ಹಗರಣದಲ್ಲಿ ಅಂದು ಸಚಿವರಾಗಿದ್ದ ನಾಗೇಂದ್ರ ಆರೋಪಿಯಾಗಿದ್ದರು. ವಿರೋಧ ಪಕ್ಷಗಳ ಹೋರಾಟದ ಫಲವಾಗಿ ಅಂದು ಅವರು ರಾಜೀನಾಮೆ ನೀಡಿದ್ದರು. ಇದೀಗ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದ ಬಳಿಕ ಮತ್ತೆ ಸಂಪುಟದಲ್ಲಿ ನಾಗೇಂದ್ರಗೆ ಸಚಿವ ಸ್ಥಾನ ನೀಡಲಾಗಿತ್ತು. ಕಳಂಕಿತ ಸಚಿವನ ರಾಜೀನಾಮೆಗೆ ಆಗ್ರಹಿಸಿ ವಿಜಯೇಂದ್ರ ಹೋರಾಟ ರೂಪಿಸಿದ್ದರು. ಮಿತ್ರ ಪಕ್ಷ ಜೆಡಿಎಸ್ ಸಾಥ್ ಪಡೆದು ಸದನ ಒಳಗೆ ಮತ್ತು ಹೊರಗೆ ಪ್ರತಿ ದಿನ ಹೋರಾಟ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸರ್ಕಾರ ಸದನವನ್ನು ಮೊಟಕುಗೊಳಿಸಿತ್ತು
ಈ ಹೋರಾಟಕ್ಕೆ ಮಣಿಯದ ಸರ್ಕಾರ ಸದನವನ್ನು ಮೊಟಕುಗೊಳಿಸಿತ್ತು. ಆದರೂ ಈ ರಾಜೀನಾಮೆ ವಿಚಾರ ಕೈಬಿಡದ ವಿಜಯೇಂದ್ರ ಸದನ ಹೊರಗೆ ಹೋರಾಟ ಮುಂದುವರೆಸಲು ನಿರ್ಧರಿಸಿದರು. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ರಾಯಚೂರಿನಿಂದ ಬಳ್ಳಾರಿ ವರೆಗೆ ಪಾದಯಾತ್ರೆ ಘೋಷಿಸಿದ್ದರು. ಅದಕ್ಕೆ ಪೂರಕವಾಗಿ ಸಿದ್ಧತೆಯನ್ನೂ ಆರಂಭಿಸಿದ್ದರು. ಇದರ ಬೆನ್ನಲ್ಲೇ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಮುಡಾ ಹಗರಣದ ಯಶಸ್ಸಿನ ಬಳಿಕ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ರಾಜ್ಯ ಬಿಜೆಪಿ ಮತ್ತೊಮ್ಮೆ ಯಶಸ್ಸು ಸಿಕ್ಕಿದಂತಾಗಿದೆ.

