ಸಾರಾಂಶ
ಬೆಂಗಳೂರು : ರಾಜ್ಯ ಬಿಜೆಪಿಯ ಭಿನ್ನರ ದೆಹಲಿ ಯಾತ್ರೆ ಬೆನ್ನಲ್ಲೇ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೂ ಭಾನುವಾರ ದಿಢೀರ್ ದೆಹಲಿಗೆ ತೆರಳಿದ್ದು ತೀವ್ರ ಕುತೂಹಲ ಮೂಡಿಸಿದೆ.ಪಕ್ಷದ ವರಿಷ್ಠರ ಬುಲಾವ್ ಮೇರೆಗೆ ದೆಹಲಿಗೆ ಹೋಗಿದ್ದಾರೆ ಎನ್ನಲಾಗುತ್ತಿದ್ದರೂ ಇದನ್ನು ವಿಜಯೇಂದ್ರ ಅವರ ಆಪ್ತರು ನಿರಾಕರಿಸಿದ್ದಾರೆ. ಖಾಸಗಿ ಕೆಲಸದ ನಿಮಿತ್ತ ತೆರಳಿದ್ದಾರೆ ಎಂಬ ಸಮಜಾಯಿಷಿ ನೀಡುತ್ತಿದ್ದಾರೆ.
ವಿಜಯೇಂದ್ರ ಅವರು ಮಧ್ಯಾಹ್ನ ರಾಜನಹಳ್ಳಿಯಲ್ಲಿ ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಸಂಬಂಧ ಚಿತ್ರದುರ್ಗಕ್ಕೆ ತೆರಳಬೇಕಿತ್ತು. ಆದರೆ, ಕೊನೆ ಕ್ಷಣದಲ್ಲಿ ತಮ್ಮ ಪ್ರವಾಸ ರದ್ದುಪಡಿಸಿ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಮುಖಂಡರು ಕಳೆದ ವಾರ ದೆಹಲಿಗೆ ತೆರಳಿ ಪಕ್ಷದ ಸಂಸದರನ್ನು ಭೇಟಿ ಮಾಡಿ ವಾಪಸಾಗಿದ್ದರು. ಇದೀಗ ಭಾನುವಾರ ಎರಡನೇ ಬಾರಿ ದೆಹಲಿಗೆ ತೆರಳಿದ್ದಾರೆ. ಸೋಮವಾರ ಮತ್ತೊಂದು ಸುತ್ತಿನ ಸಭೆಯನ್ನೂ ನಡೆಸಲಿದ್ದಾರೆ. ಹೀಗಾಗಿ, ವಿಜಯೇಂದ್ರ ಅವರ ದಿಢೀರ್ ದೆಹಲಿ ಭೇಟಿ ಸಹಜವಾಗಿಯೇ ಕುತೂಹಲ ಮೂಡಿಸಿದೆ.