ಬಂಗಾರಿ ಗಿಫ್ಟ್‌ ಕೊಟ್ಟಿದ್ದ ಕಾರು ಮರಳಿಸಿದ ವಿನಯ್‌ ಕುಲಕರ್ಣಿ - ಕೇಸ್‌ ಸುತ್ತಿಕೊಳ್ಳುವ ಆತಂಕದಿಂದ ಕ್ರಮ

| Published : Jan 12 2025, 08:10 AM IST

Vinay Kulakarni
ಬಂಗಾರಿ ಗಿಫ್ಟ್‌ ಕೊಟ್ಟಿದ್ದ ಕಾರು ಮರಳಿಸಿದ ವಿನಯ್‌ ಕುಲಕರ್ಣಿ - ಕೇಸ್‌ ಸುತ್ತಿಕೊಳ್ಳುವ ಆತಂಕದಿಂದ ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಸಂಸದ ಡಿ.ಕೆ.ಸುರೇಶ್‌ ಸಹೋದರಿ ಎಂದು ಹೇಳಿಕೊಂಡು ಬಹುಕೋಟಿ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಐಶ್ವರ್ಯ ಗೌಡ ದಂಪತಿ ತಮಗೆ ಉಡುಗೊರೆಯಾಗಿ ನೀಡಿದ್ದ ಐಷಾರಾಮಿ ಬೆನ್ಜ್ ಕಾರನ್ನು ಕಾಂಗ್ರೆಸ್‌ ಮುಖಂಡ ವಿನಯ್‌ ಕುಲಕರ್ಣಿ ಇದೀಗ ಪೊಲೀಸರಿಗೆ ಒಪ್ಪಿಸಿದ್ದಾರೆ.

 ಬೆಂಗಳೂರು : ಮಾಜಿ ಸಂಸದ ಡಿ.ಕೆ.ಸುರೇಶ್‌ ಸಹೋದರಿ ಎಂದು ಹೇಳಿಕೊಂಡು ಬಹುಕೋಟಿ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಐಶ್ವರ್ಯ ಗೌಡ ದಂಪತಿ ತಮಗೆ ಉಡುಗೊರೆಯಾಗಿ ನೀಡಿದ್ದ ಐಷಾರಾಮಿ ಬೆನ್ಜ್ ಕಾರನ್ನು ಕಾಂಗ್ರೆಸ್‌ ಮುಖಂಡ ವಿನಯ್‌ ಕುಲಕರ್ಣಿ ಇದೀಗ ಪೊಲೀಸರಿಗೆ ಒಪ್ಪಿಸಿದ್ದಾರೆ.

ಐಶ್ವರ್ಯ ಗೌಡಳ ಪತಿ ಕೆ.ಎನ್‌.ಹರೀಶ್‌ ಹೆಸರಿನಲ್ಲಿ ನೋಂದಣಿಯಾಗಿದ್ದ ಕೆಎ 03 ಎಂಎನ್‌ 8181 ನೋಂದಣಿ ಸಂಖ್ಯೆಯ ಬೆನ್ಜ್‌ ಕಾರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್‌ ಕುಲಕರ್ಣಿ ಬಳಸುತ್ತಿರುವ ವಿಚಾರ ವಂಚನೆ ಪ್ರಕರದ ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಇದು ವಿವಾದದ ಸ್ವರೂಪ ಪಡೆದ ಬೆನ್ನಲ್ಲೇ ವಿನಯ್‌ ಕುಲಕರ್ಣಿ ಅವರು ಈ ಕಾರನ್ನು ತಮ್ಮ ಚಾಲಕನ ಮೂಲಕ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಗಿಫ್ಟ್‌ ನೀಡಿದ್ದ ಕಾರು:

ಕೆಲ ವರ್ಷಗಳಿಂದ ಐಶ್ವರ್ಯ ಗೌಡ ದಂಪತಿ ವಿನಯ್‌ ಕುಲಕರ್ಣಿಗೆ ಚಿರಪರಿಚಿತರಾಗಿದ್ದು, ಉತ್ತಮ ಒಡನಾಟ ಇರಿಸಿಕೊಂಡಿದ್ದರು. ಈ ವೇಳೆ ಐಶ್ವರ್ಯ ಗೌಡ ದಂಪತಿ ಬೆನ್ಜ್‌ ಕಾರನ್ನು ಉಡುಗೊರೆ ರೂಪದಲ್ಲಿ ವಿನಯ್‌ ಕುಲಕರ್ಣಿಗೆ ನೀಡಿದ್ದರು. ಬಳಿಕ ಆ ಕಾರನ್ನು ವಿನಯ್‌ ಕುಲಕರ್ಣಿ ಅವರೇ ಬಳಸುತ್ತಿದ್ದರು ಎನ್ನಲಾಗಿದೆ.

ಯಾಕೆ ವಾಪಸ್‌ ಕೊಟ್ರು?:

ಇದೀಗ ಐಶ್ವರ್ಯ ಗೌಡ ದಂಪತಿ ವಿರುದ್ಧ ಚಿನ್ನಾಭರಣ ಹಾಗೂ ಕೋಟ್ಯಂತರ ರು. ಪಡೆದು ವಂಚಿಸಿದ ಆರೋಪದಡಿ ಐದು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ತಮಗೂ ಮುಂದೆ ಸಂಕಷ್ಟ ಎದುರಾಗುವ ಭೀತಿ ಹಿನ್ನೆಲೆಯಲ್ಲಿ ವಿನಯ್‌ ಕುಲಕರ್ಣಿ ಅವರು ಆರೋಪಿಗಳ ಹೆಸರಿನಲ್ಲಿದ್ದ ಐಷಾರಾಮಿ ಕಾರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

4ನೇ ಕಾರು:

ಈಗಾಗಲೇ ಐಶ್ವರ್ಯ ಗೌಡ ದಂಪತಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಚಂದ್ರಾಲೇಔಟ್‌ ಠಾಣೆ ಪೊಲೀಸರು ಆರೋಪಿಗಳಿಂದ ಮೂರು ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಈಗ ವಂಚಕ ದಂಪತಿ ಗಿಫ್ಟ್ ರೂಪದಲ್ಲಿ ನೀಡಿದ್ದ ಬೆನ್ಜ್‌ ಕಾರನ್ನು ಕಾಂಗ್ರೆಸ್‌ ಮುಖಂಡ ಕುಲಕರ್ಣಿ ಅವರೇ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಮೂಲಕ ಪೊಲೀಸರು ವಂಚಕ ದಂಪತಿಗೆ ಸೇರಿದ ನಾಲ್ಕು ಕಾರು ವಶಕ್ಕೆ ಪಡೆದಂತಾಗಿದೆ. ಈ ಬಂಗಾರಿ ದಂಪತಿ ಇತರರಿಗೆ ವಂಚಿಸಿದ ಹಣದಲ್ಲಿ ಐಷಾರಾಮಿ ಕಾರುಗಳನ್ನು ಖರೀದಿಸಿರುವ ಆರೋಪವಿದ್ದು, ಪೊಲೀಸರ ತನಿಖೆಯಲ್ಲಿ ಸತ್ಯಾಂಶ ಬಹಿರಂಗವಾಗಲಿದೆ.

ಪ್ರಕರಣದ ಹಿನ್ನೆಲೆ:

ಡಿ.ಕೆ.ಸುರೇಶ್‌ ತಂಗಿ ಎಂದು ನಂಬಿಸಿ ಐಶ್ವರ್ಯ ಗೌಡ ತನ್ನ ಚಿನ್ನದಂಗಡಿಯಿಂದ 8.41 ಕೋಟಿ ರು. ಮೌಲ್ಯದ 14.6 ಕೆ.ಜಿ.ಚಿನ್ನಾಭರಣ ಸಾಲ ಪಡೆದು ಬಳಿಕ ವಂಚಿಸಿದ್ದಾರೆ. ವಾಪಸ್‌ ಕೇಳಿದ್ದಕ್ಕೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ನಗರದ ವಾರಾಹಿ ವಲ್ಡ್‌ ಆಫ್‌ ಗೋಲ್ಡ್‌ ಚಿನ್ನದಂಗಡಿ ಮಾಲೀಕರಾದ ವನಿತಾ ಐತಾಳ್‌ ಚಂದ್ರಾಲೇಔಟ್‌ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಐಶ್ವರ್ಯ ಗೌಡ, ಆಕೆಯ ಪತಿ ಕೆ.ಎನ್‌.ಹರೀಶ್‌ ಮತ್ತು ನಟ ಧರ್ಮೇಂದ್ರನ ವಿರುದ್ಧ ಪ್ರಕರಣ ದಾಖಲಿಸಿ, ದಂಪತಿಯನ್ನು ಬಂಧಿಸಿದ್ದರು. ಬಳಿಕ ದಂಪತಿ ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಮತ್ತೊಬ್ಬ ಆರೋಪಿ ಧರ್ಮೇಂದ್ರ ಪ್ರಕರಣದ ದಾಖಲಾದ ಬೆನ್ನಲ್ಲೇ ತಲೆಮರೆಸಿಕೊಂಡಿದ್ದಾರೆ.