ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕು, ಅಧಿಕಾರ ದುರ್ಬಳಕೆಯ ಕುರಿತು ಸಿಬಿಐ ತನಿಖೆ ನಡೆಸಬೇಕು ಹಾಗೂ ವಿವಾದಕ್ಕೆ ಕಾರಣವಾದ ವಕ್ಫ್ ಖಾತೆ ಸಚಿವ ಜಮೀರ್ ಅಹಮದ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಪಕ್ಷ ಬಿಜೆಪಿಯು ಸೋಮವಾರ ರಾಜಧಾನಿಯ ನಾಲ್ಕು ಭಾಗಗಳಲ್ಲಿ ಪ್ರತಿಭಟನೆ ನಡೆಸಿತು.ನಗರದ ಕೆ.ಆರ್.ಪುರ, ಯಲಹಂಕ, ಕೆಂಗೇರಿ ಮತ್ತು ಆನೇಕಲ್ ತಾಲೂಕು ಕಚೇರಿಗಳ ಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಶಾಸಕರಾದ ಡಾ। ಸಿ.ಎನ್.ಅಶ್ವತ್ಥನಾರಾಯಣ, ಬೈರತಿ ಬಸವರಾಜು, ಎಸ್.ಆರ್.ವಿಶ್ವನಾಥ್, ಕೆ.ಗೋಪಾಲಯ್ಯ ಮೊದಲಾದವರು ಪಾಲ್ಗೊಂಡಿದ್ದರು.
ಕೆ.ಆರ್.ಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಕ್ಫ್ ಮಂಡಳಿ ಭೂಮಿ ಕಬಳಿಸುತ್ತಿರುವುದು ರೈತರ ಪಾಲಿಗೆ ಮರಣ ಶಾಸನವಾಗಿದೆ. ಭೂ ಕಬಳಿಕೆಯ ಈ ಆಟ ನಡೆಯಲು ಹಿಂದೂಗಳು ಬಿಡುವುದಿಲ್ಲ. ಕೂಡಲೇ ಕಾಂಗ್ರೆಸ್ ಸರ್ಕಾರ ವಕ್ಫ್ ಕಾಯ್ದೆಯಲ್ಲಿ ಬದಲಾವಣೆ ತರಲಿ ಎಂದು ಆಗ್ರಹಿಸಿದರು.ಜಮೀನು ಕಬಳಿಸುವ ಮೂಲಕ ಅನ್ನದಾತರ ಕಣ್ಣಲ್ಲಿ ನೀರು ಬರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಇವೆಲ್ಲಕ್ಕೂ ಸಚಿವ ಜಮೀರ್ ಅಹ್ಮದ್ ಕಾರಣ. ಹಿಂದೆ ಕೇಂದ್ರದ ಕಾಂಗ್ರೆಸ್ ಸರ್ಕಾರ ಮುಸ್ಲಿಮರನ್ನು ಓಲೈಸಲು ವಕ್ಫ್ ಬೋರ್ಡ್‌ಗೆ ಹೆಚ್ಚು ಅಧಿಕಾರ ನೀಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಭೂಮಿ ಪಡೆಯಿರಿ ಎಂದು ಹೇಳಿದ್ದು, ಈಗ ಇದು ಬಿಜೆಪಿ ಮಾಡುವ ರಾಜಕೀಯ ಎಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರು ಈಗ ಟೋಪಿ ತೆಗೆದಿದ್ದಾರೆ. ಬಳಿಕ ಅವರೇ ರೈತರ ತಲೆ ಮೇಲೆ ಟೋಪಿ ಹಾಕುತ್ತಾರೆ. ಮುಸ್ಲಿಮರಿಗೆ ₹10 ಸಾವಿರ ಕೋಟಿ ನೀಡುತ್ತೇನೆಂದು ಹೇಳಿ ದಲಿತರ ಹಣ ಲೂಟಿ ಮಾಡಿದ್ದಾರೆ. ಕಾಂಗ್ರೆಸ್‌ಗೆ ಹಿಂದೂಗಳು ಮತ ನೀಡಿಲ್ಲವೇ? ಹಿಂದೂಗಳು ಎರಡನೇ ದರ್ಜೆಯ ಪ್ರಜೆಗಳೇ ಎಂದು ಖಾರವಾಗಿ ಪ್ರಶ್ನಿಸಿದರು.ಬಾಬರ್, ಔರಂಗಜೇಬ ಮೊದಲಾದ ಮತಾಂಧ ರಾಜರು ವಕ್ಫ್ ಬೋರ್ಡ್‌ಗೆ ಮಾದರಿ. ಶ್ರೀರಂಗಪಟ್ಟಣದಲ್ಲಿ ನೂರಾರು ವರ್ಷಗಳಿಂದ ಇರುವ ದೇವಸ್ಥಾನವನ್ನು ಖಬರ್‌ಸ್ಥಾನ ಎಂದು ದಾಖಲೆಯಲ್ಲಿ ಬರೆಸಿದ್ದಾರೆ. ಲವ್ ಜಿಹಾದ್ ಮಾಡಿ ಹಿಂದೂ ಹೆಣ್ಣುಮಕ್ಕಳನ್ನು ಮತಾಂತರ ಮಾಡಲಾಗಿದೆ. ಈಗ ಲ್ಯಾಂಡ್ ಜಿಹಾದ್ ಮೂಲಕ ರೈತರ ಜಮೀನು ಪರಿವರ್ತನೆ ಮಾಡುತ್ತಿದ್ದಾರೆ ಎಂದು ಅಶೋಕ್ ಆಪಾದಿಸಿದರು.
ಮುಜರಾಯಿ ಇಲಾಖೆಗೂ ದಾನದಿಂದ ಭೂಮಿ ಬಂದಿದೆ. ಆದರೆ ಅದು ಮಾತ್ರ ಸರ್ಕಾರಿ ಆಸ್ತಿಯಾಗುತ್ತದೆ. ಆದರೆ ವಕ್ಫ್ ಬೋರ್ಡ್‌ಗೆ ದಾನದಿಂದ ಬರುವ ಭೂಮಿ ಮಾತ್ರ ಸರ್ಕಾರಿ ಆಸ್ತಿಯಾಗುವುದಿಲ್ಲ. ಹೀಗೆಯೇ ಕಾಂಗ್ರೆಸ್ ರಾಜ್ಯವನ್ನು ಹಾಳು ಮಾಡಿದರೆ ಹಿಂದೂಗಳು ಈ ಆಟ ನಡೆಯಲು ಬಿಡುವುದಿಲ್ಲ. ಕೂಡಲೇ ಎಚ್ಚೆತ್ತುಕೊಂಡು ಕಾಯ್ದೆಯಲ್ಲಿ ಬದಲಾವಣೆ ಮಾಡಲಿ ಎಂದು ಆಗ್ರಹಿಸಿದರು.ವಕ್ಫ್ ಬೋರ್ಡ್ ಈಗ ಸಾಬರ ಬೋರ್ಡ್ ಆಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಕಿದ್ದರೆ ಎಲ್ಲ ಭೂಮಿಯನ್ನು ಈ ಬೋರ್ಡ್‌ಗೆ ಬರೆದುಬಿಡಬಹುದು. ಇವೆಲ್ಲ ದಾನ ಕೊಟ್ಟ ಜಮೀನು ಎಂದು ವಕ್ಫ್ ಮಂಡಳಿ ಹೇಳುತ್ತಿದೆ.
-ಆರ್.ಅಶೋಕ್, ಪ್ರತಿಪಕ್ಷ ನಾಯಕ.