ಸಾರಾಂಶ
ಪಕ್ಷದಲ್ಲಿ ಆಂತರಿಕ ಭಿನ್ನಮತದ ವಾಕ್ಸಮರ ತೀವ್ರಗೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಜೆಪಿ ವರಿಷ್ಠರು ಪರಿಸ್ಥಿತಿ ತಿಳಿಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಬೆಂಗಳೂರು : ಪಕ್ಷದಲ್ಲಿ ಆಂತರಿಕ ಭಿನ್ನಮತದ ವಾಕ್ಸಮರ ತೀವ್ರಗೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಜೆಪಿ ವರಿಷ್ಠರು ಪರಿಸ್ಥಿತಿ ತಿಳಿಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಶುಕ್ರವಾರ ಪಕ್ಷದ ರಾಜ್ಯ ಸಹ ಉಸ್ತುವಾರಿ ಪಿ.ಸುಧಾಕರ್ ರೆಡ್ಡಿ ಅವರು ದಿಢೀರ್ ಬೆಂಗಳೂರಿಗೆ ಆಗಮಿಸಿ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸೇರಿ ಪಕ್ಷದ ಹಲವು ರಾಜ್ಯ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದಲ್ಲದೆ, ‘ಪಕ್ಷದ ಬೆಳವಣಿಗೆಗಳ ಬಗ್ಗೆ ಯಾರೇ ಆಗಿರಲಿ ಶಿಸ್ತು ಮೀರಿ ಬಹಿರಂಗವಾಗಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಏನೇ ಸಮಸ್ಯೆ ಇದ್ದರೂ ಪಕ್ಷ ವೇದಿಕೆಯಲ್ಲಿ ಮಾತ್ರ ಮಾತನಾಡಬೇಕು’ ಎಂದು ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಪಕ್ಷವನ್ನು ಸದೃಢಪಡಿಸಲು ನಿರಂತರ ಶ್ರಮಿಸುತ್ತಿರುವ ಲಕ್ಷಾಂತರ ಕಾರ್ಯಕರ್ತರಿಗೆ ಪಕ್ಷದೊಳಗಿನ ಕೆಲ ನಾಯಕರ ಬಹಿರಂಗ ಹೇಳಿಕೆಗಳಿಂದ ನೋವಾಗುತ್ತಿದೆ ಎಂದು ಹೇಳಿದರು.
ಕಳೆದ ಕೆಲ ವಾರಗಳಿಂದ, ಕೆಲ ದಿನಗಳಿಂದ ಕೆಲವರು ಪಕ್ಷದ ಬಗ್ಗೆ ತಮ್ಮ ಹೇಳಿಕೆಗಳನ್ನು ಮಾಧ್ಯಮಗಳ ಮೂಲಕ ನೀಡುತ್ತಿರುವುದನ್ನು ಗಮನಿಸಿದ್ದೇನೆ. ಮೋದಿ ಅವರ ನಾಯಕತ್ವದಲ್ಲಿ ಪಕ್ಷವನ್ನು ದೃಢಪಡಿಸಲು ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು, ಅಸಮರ್ಪಕ ಆಡಳಿತದ ವಿರುದ್ಧ ಹೋರಾಟಗಳನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಜವಾಬ್ದಾರಿಯುತ, ಪ್ರಮುಖ ಪಕ್ಷವಾಗಿ, ಸದೃಢ ವಿಪಕ್ಷವಾಗಿ ನಾವು ಕಾರ್ಯನಿರ್ವಹಿಸಬೇಕಿದೆ. ಸರ್ಕಾರದ ವೈಫಲ್ಯಗಳನ್ನು ಮತ್ತು ತಪ್ಪು ನೀತಿಗಳನ್ನು ನಾವು ಜನರ ಮುಂದಿಡಬೇಕಾಗಿದೆ. ದೇಶದ ಏಳೆಂಟು ರಾಜ್ಯಗಳಲ್ಲಿ ರಾಜ್ಯಾಧ್ಯಕ್ಷರ ಚುನಾವಣೆ ಪಕ್ಷದ ನಿಯಮಾವಳಿಯಂತೆ ನಡೆದಿದೆ. ಕರ್ನಾಟಕ ಮತ್ತು ದಕ್ಷಿಣದ ರಾಜ್ಯಗಳಲ್ಲಿ ನಿಗದಿಯಂತೆ ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎಂದು ರೆಡ್ಡಿ ತಿಳಿಸಿದರು.
ಕರ್ನಾಟಕದಲ್ಲಿ ಹಲವು ಜಿಲ್ಲಾಧ್ಯಕ್ಷರ ಆಯ್ಕೆ ಈಗಾಗಲೇ ನಡೆದಿದೆ. ಚುನಾವಣಾ ಅಧಿಕಾರಿ ಲಕ್ಷ್ಮಣ್ ಅವರ ನೇತೃತ್ವದಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ನಡೆಯಲಿದೆ. ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಲು ನಮ್ಮ ಕೇಂದ್ರ ನಾಯಕತ್ವ ಶಕ್ತಿ ಹೊಂದಿದೆ. ಪಕ್ಷದ ಹಿತದೃಷ್ಟಿಯಿಂದ ಪಕ್ಷದೊಳಗಿನ ವೇದಿಕೆಯಲ್ಲಿ ಮಾತನಾಡಲು ಅವಕಾಶವಿದೆ. ಭ್ರಷ್ಟ ಸರಕಾರದ ವಿರುದ್ಧ ಹೋರಾಟ ಮುಂದುವರೆಸಬೇಕು. ಪಕ್ಷದ ಶಿಸ್ತು ಮೀರಿ ಮಾತನಾಡಬಾರದು. ಶಾಂತಿಯುತ ವರ್ತನೆ ಇರಲಿ. ಇದನ್ನು ‘ಎ’ ಅಥವಾ ‘ಬಿ’ ಗೆ ಒಬ್ಬ ಕಾರ್ಯಕರ್ತನಾಗಿ ಮನವಿ ಮಾಡುವುದಾಗಿ ಹೇಳಿದರು.
ಒಟ್ಟಾಗಿ ಹೋಗಬೇಕು: ಅಶೋಕ್
ಪಕ್ಷದ ಆಂತರಿಕ ವಿಚಾರವನ್ನು ನಾಲ್ಕು ಗೋಡೆಗಳ ಮಧ್ಯೆ ಮಾತಾಡಬೇಕು. ಒಟ್ಟಾಗಿ ಹೋಗಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾವೆಲ್ಲರೂ ಒಟ್ಟಿಗೆ ಹೋರಾಟ ಮಾಡಿದರೆ ಕಾಂಗ್ರೆಸ್ ಸರ್ಕಾರವನ್ನು ಬಗ್ಗು ಬಡಿಯಬಹುದಾಗಿತ್ತು. ಹದಿನೈದು-ಇಪ್ಪತ್ತು ದಿನಗಳಲ್ಲಿ ಇದಕ್ಕೆ ಅಂತಿಮ ತೀರ್ಮಾನವನ್ನು ಕೇಂದ್ರದ ನಾಯಕರು ಕೊಡುತ್ತಾರೆ. ಕೆಲ ಸಲ ಪ್ರಜಾಪ್ರಭುತ್ವದ ಮಾತಿನ ಸ್ವಾತಂತ್ರ್ಯದಲ್ಲಿ ಎಲ್ಲರೂ ಮಾತಾಡಲು ಶುರು ಮಾಡುತ್ತಾರೆ. ಪ್ರಾರಂಭದಲ್ಲೇ ಇದು ಕಡಿಮೆ ಆಗಿರುತ್ತಿದ್ದರೆ ಒಳ್ಳೆಯದಿತ್ತು. ಸರಿ ಪಡಿಸಿಕೊಂಡು ಹೋಗುವುದೇ ದೊಡ್ಡ ಗುಣ ಎಂದರು.