ಕಾಂಗ್ರೆಸ್ ಯಾವುದೇ ಒಂದು ಕೋಮಿನ ಜನರ ಪರವಾಗಿಲ್ಲ-ಎಲ್ಲ ಜನರ ಪರವಾಗಿದೆ : ಕೃಷಿ ಸಚಿವ ಚಲುವರಾಯಸ್ವಾಮಿ

| Published : Sep 13 2024, 01:43 AM IST / Updated: Sep 13 2024, 04:20 AM IST

ಸಾರಾಂಶ

ನಾಗಮಂಗಲದಲ್ಲಿ ಈ ರೀತಿಯ ಘಟನೆ ನಡೆಯಬಾರದಿತ್ತು. ದುರದೃಷ್ಟವಶಾತ್ ನಡೆದುಹೋಗಿದೆ. ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಎಲ್ಲಾ ರೀತಿಯ ಕ್ರಮಗಳನ್ನು ಜಿಲ್ಲಾಡಳಿತದಿಂದ ಕೈಗೊಳ್ಳಲಾಗುವುದು. ನಾಗಮಂಗಲದಲ್ಲಿ ಈಗ ಪರಿಸ್ಥಿತಿ ಶಾಂತಿಯುತವಾಗಿದೆ. ಸಹಜಸ್ಥಿತಿಯತ್ತ ಮರಳುತ್ತಿದೆ.

  ನಾಗಮಂಗಲ :  ಕಾಂಗ್ರೆಸ್ ಯಾವುದೇ ಒಂದು ಕೋಮಿನ ಜನರ ಪರವಾಗಿಲ್ಲ. ಈ ನಾಡಿನ, ದೇಶದ ಎಲ್ಲ ಜನರ ಪರವಾಗಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.

ನಾವು ಒಂದು ಸಮುದಾಯದವರನ್ನು ಓಲೈಸಿಕೊಳ್ಳುತ್ತಲೂ ಇಲ್ಲ, ತುಷ್ಣೀಕರಣ ಮಾಡುತ್ತಲೂ ಇಲ್ಲ. ಅದರ ಅಗತ್ಯವೂ ಇಲ್ಲ. ನಮಗೆ ಹಿಂದೂ-ಮುಸ್ಲಿಮರೆಲ್ಲರೂ ಸಮಾನರು. ಕೆಲವರು ಈ ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಕ್ಕೆ ಇಂತಹ ಹೇಳಿಕೆ ನೀಡುತ್ತಿದ್ದಾರೆ. ನಾನು ಯಾವ ಕಾರಣಕ್ಕೂ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ನಾಗಮಂಗಲದಲ್ಲಿ ಈ ರೀತಿಯ ಘಟನೆ ನಡೆಯಬಾರದಿತ್ತು. ದುರದೃಷ್ಟವಶಾತ್ ನಡೆದುಹೋಗಿದೆ. ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಎಲ್ಲಾ ರೀತಿಯ ಕ್ರಮಗಳನ್ನು ಜಿಲ್ಲಾಡಳಿತದಿಂದ ಕೈಗೊಳ್ಳಲಾಗುವುದು. ನಾಗಮಂಗಲದಲ್ಲಿ ಈಗ ಪರಿಸ್ಥಿತಿ ಶಾಂತಿಯುತವಾಗಿದೆ. ಸಹಜಸ್ಥಿತಿಯತ್ತ ಮರಳುತ್ತಿದೆ. ಜನರು ಯಾವ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಸಹಜವಾಗಿ ಓಡಾಡಬಹುದು ಎಂದರು.

ಗಣೇಶೋತ್ಸವದ ವೇಳೆ ಉಂಟಾದ ಘರ್ಷಣೆಯಲ್ಲಿ ಪ್ರಾಣಹಾನಿ ಸಂಭವಿಸದಂತೆ, ಎರಡೂ ಕೋಮಿನವರು ಕೈ ಕೈ ಮಿಲಾಯಿಸದಂತೆ ಪೊಲೀಸರು ತಡೆದಿದ್ದಾರೆ. ಆದರೂ ೨೦ ಅಂಗಡಿಗಳಿಗೆ, ೭-೮ ಬೈಕ್‌ಗಳಿಗೆ ಹಾನಿಯಾಗಿದೆ. ಹಾನಿ ಕುರಿತಂತೆ ಪ್ರತ್ಯೇಕವಾಗಿ ಅಂದಾಜು ವೆಚ್ಚ ಮಾಡುವಂತೆ ಸೂಚಿಸಿದ್ದೇನೆ. ಇದನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸರ್ಕಾರದಿಂದ ಪರಿಹಾರ ದೊರಕಿಸುವ ಜೊತೆಗೆ ವೈಯಕ್ತಿಕವಾಗಿಯೂ ಪರಿಹಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

ಗಲಭೆಗೆ ಕಾರಣವೇನೆಂಬ ಬಗ್ಗೆಯೂ ತನಿಖೆ ನಡೆಸಲಾಗುವುದು. ಘಟನೆಗೆ ಯಾರಾದರೂ ಕಾರಣರಾಗಿರಲಿ ಅವರ ವಿರುದ್ಧ ನಿಷ್ಪಕ್ಷಪಾತವಾಗಿ ಕ್ರಮ ಜರುಗಿಸಲಾಗುವುದು. ಪೊಲೀಸರ ವೈಫಲ್ಯವಿದ್ದರೆ ಅವರ ವಿರುದ್ಧವೂ ಕ್ರಮವಾಗಲಿದೆ ಎಂದರು.

ಈ ಸಮಯದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ್ ಬಾಲದಂಡಿ, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ ಇದ್ದರು.