ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ದೇಶದ ರಕ್ಷಣೆ ಮತ್ತು ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಎಂದಿಗೂ ಜತೆಗಿರುತ್ತೇವೆ ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಹೇಳಿದರು.ದೆಹಲಿಯಲ್ಲಿ ಸೋಮವಾರ ಸಂಜೆ ಸಂಭವಿಸಿರುವ ಬಾಂಬ್ ಸ್ಫೋಟ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ೧೦ ವರ್ಷದಲ್ಲಿ ೨೫ ಬಾಂಬ್ ಸ್ಫೋಟಗಳಾಗಿವೆ. ಪುಲ್ವಾಮ, ಪೆಹಲ್ಗಾಮ್ ಸೇರಿದಂತೆ ಹಲವು ದೊಡ್ಡ ಸ್ಫೋಟಗಳಾಗಿದ್ದು, ಆ ಸಂದರ್ಭದಲ್ಲೂ ಕೇಂದ್ರ ಸರ್ಕಾರದ ಜತೆಗಿದ್ದೆವು. ಈ ವಿಚಾರದಲ್ಲಿ ರಾಜಕೀಯ ಮಾಡಲ್ಲ ಎಂದರು.
ಭ್ರಷ್ಟರ ವಿರುದ್ಧ ಕ್ರಮ ಆಗಬೇಕು:ಜೈಲಲ್ಲಿ ಕೈದಿಗಳಿಗೆ ರಾಜಾಥಿತ್ಯ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವ್ಯವಸ್ಥೆಯೇ ಹಾಗಿದೆ. ದಕ್ಷ ಅಧಿಕಾರಿಗಳನ್ನ ನೇಮಕ ಮಾಡಿ ಭ್ರಷ್ಟರ ವಿರುದ್ಧ ಕ್ರಮ ಆಗಬೇಕು. ಎಲ್ಲೋ ಒಂದು ಕಡೆ ಆದರೆ ಸರ್ಕಾರವನ್ನು ದೂಷಿಸಲಾಗುವುದಿಲ್ಲ. ಹಾಗಾದರೆ ದೆಹಲಿಯಲ್ಲಿ ನಡೆದ ಸ್ಫೋಟದ ಹೊಣೆಯನ್ನು ಕೇಂದ್ರ ಸರ್ಕಾರ ಹೊರುತ್ತಾ?, ಸಿದ್ದರಾಮಯ್ಯ ರಾಜೀನಾಮೆ ಕೇಳುವವರು, ಮೋದಿ ಅವರ ರಾಜೀನಾಮೆ ಕೇಳುತ್ತಾರೆಯೇ ಎಂದು ಮರು ಪ್ರಶ್ನಿಸಿದರು.
ಜೈಲಿನಲ್ಲಿ ರಾಜಾತಿಥ್ಯ ಸಂಬಂಧ ವಿಪಕ್ಷ ನಾಯಕ ಅಶೋಕ್ ಪ್ರತಿಭಟನೆ ಮಾಡುವುದು ಸರಿ ಇದೆ. ದೆಹಲಿಯಲ್ಲಿ ಸ್ಫೋಟ ಆಗಿದೆಯಲ್ಲ ಅದಕ್ಕೇನು ಮಾಡುತ್ತಾರೆ?, ಸಿದ್ದರಾಮಯ್ಯ, ಪರಮೇಶ್ವರ್ ಯಾಕೆ ಉಗ್ರರಿಗೆ ಪ್ರೋತ್ಸಾಹ ಕೊಡುತ್ತಾರೆ?. ಪ್ರೋತ್ಸಾಹ ಕೊಟ್ಟರೆ ಅವರಿಗೆ ಏನು ಅನುಕೂಲ ಆಗುತ್ತದೆ?. ನಾವು ಪ್ರೋತ್ಸಾಹ ಕೊಟ್ಟ ಬಗ್ಗೆ ಮಾಹಿತಿ, ಸಾಕ್ಷಿ ಇದೆಯೇ?. ದೆಹಲಿಯಲ್ಲಿ ಆಗಿರುವ ಬಾಂಬ್ ಸ್ಫೋಟಕ್ಕೆ ಪ್ರೋತ್ಸಾಹ ಕೊಟ್ಟವರು ಯಾರು?, ಅಶೋಕಣ್ಣ ಕೊಟ್ಟಿದ್ದಾರಾ?, ಈ ರೀತಿ ಮಾತನಾಡುವುದನ್ನ ನಿಲ್ಲಿಸಲಿ ಎಂದರು.ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೇಳೋರು ಈವಾಗ ಪ್ರಧಾನಮಂತ್ರಿ ರಾಜೀನಾಮೆ ಕೇಳುತ್ತಾರಾ?, ಪೆಹಲ್ಗಾಮ್ ದುರಂತಕ್ಕೂ ಪ್ರಧಾನಿ ಉಸಿರುಬಿಡಲಿಲ್ಲ. ಇವಾಗ ಅವರ ರಾಜೀನಾಮೆ ಬೇಡವೇ?, ಸಿಎಂ ಮಾತ್ರ ಏಕೆ ರಾಜೀನಾಮೆ ಕೊಡಬೇಕು ಎಂದು ಪ್ರಶ್ನಿಸಿದರು.
ವಿಮಾನ ನಿಲ್ದಾಣ ನಿರ್ವಹಣೆ ಮಾಡುವುದು ಕೇಂದ್ರ:ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸಾಮೂಹಿಕ ನಮಾಜ್ ವಿಚಾರಕ್ಕೆ ಉತ್ತರ ನೀಡಿದ ಸಚಿವರು, ವಿಮಾನ ನಿಲ್ದಾಣಗಳನ್ನು ನಿರ್ವಹಣೆ ಮಾಡುವುದು ಕೇಂದ್ರ ಸರ್ಕಾರ. ಇದನ್ನೆಲ್ಲಾ ಕೇಂದ್ರ ಸರ್ಕಾರ ಕಂಟ್ರೋಲ್ ಮಾಡಬೇಕು. ಅವರು ಏರ್‌ಪೋರ್ಟ್‌ನಲ್ಲಿ ನಮಾಜ್ ಮಾಡಲು ಅನುಮತಿ ಕೊಟ್ಟವರು ಯಾರು ಎಂದರು.
ಅಕ್ರಮ ಮದರಸಗಳಿದ್ದರೆ ದೂರು ನೀಡಲಿ. ದೂರು ಕೊಟ್ಟಿದ್ದರೆ ತನಿಖೆ ನಡೆಯಲು ಸಮಯ ತೆಗೆದುಕೊಳ್ಳುತ್ತದೆ. ತಾಲಿಬಾನ್ ಸಚಿವ ಭಾರತದಲ್ಲಿ ಸುದ್ದಿಗೋಷ್ಠಿ ನಡೆಸುವಾಗ ಹೆಣ್ಣು ಮಕ್ಕಳು ಇರಬಾರದು ಎನ್ನುತ್ತಾರೆ. ಅದನ್ನು ಕೇಂದ್ರ ಸರ್ಕಾರ ಒಪ್ಪುತ್ತದೆ. ಸಿಂಧೂರ್ ಹೆಣ್ಣುಮಕ್ಕಳ ಗೌರವ ಎಂದವರು ಎಲ್ಲಿ ಹೋದರು? ನಿಮ್ಮ ಅಕ್ಕ-ತಂಗಿಯರು ಸುದ್ದಿಗೋಷ್ಠಿಗೆ ಬರಬಾರದು ಎಂದರಲ್ಲ, ಆಗ ದೇಶಕ್ಕೆ ಅವಮಾನ ಆಗಲಿಲ್ಲವೇ ಎಂದು ಖಾರವಾಗಿ ಹೇಳಿದರು.ಹತ್ತು ವರ್ಷದಲ್ಲಿ ಯಾವ ಹಿಂದೂಗಳನ್ನು ಉದ್ಧಾರ ಮಾಡಿದ್ದಾರೆ? ಸಗಣಿ, ಉಚ್ಚೆ ಎನ್ನುವುದನ್ನು ಬಿಟ್ಟು ಇನ್ನೇನು ಮಾತನಾಡಿದ್ದೀರಾ? ಕಾಫಿ, ಟೀ ಯಾಕೆ ಕುಡಿಸುತ್ತೀರಾ ಉಚ್ಚೆ ಕುಡಿಸಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ರಾಮ ಮೂರು ಅಡಿ ಮೋದಿ ಆರು ಅಡಿ:ಮುಂದೆ ನಿತಿನ್ ಗಡ್ಕರಿ ಅವರು ಪ್ರಧಾನಿ ಆಗ್ತಾರೆ ಎಂದು ಬಿಜೆಪಿಯವರಿಗೆ ಭಯ ಇದೆ. ಇಷ್ಟು ವರ್ಷ ಬರೀ ಮೋದಿ ಫೋಟೊನೇ ಹಾಕಿಕೊಂಡಿದ್ದಾರೆ. ಮೋದಿ ಪಿಚ್ಚರ್ ಮುಗಿಯುತ್ತಾ ಬಂದಿದೆ. ಅದಕ್ಕೆ ಭಯ ಶುರುವಾಗಿದೆ. ಪಕ್ಷ ಕಟ್ಟಿದವರು ಎಲ್ಲ ಹೋದರು. ಬಿಜೆಪಿಯವರು ಮೋದಿಯನ್ನೇ ದೇವರು ಎಂದುಕೊಂಡಿದ್ದಾರೆ. ರಾಮ ಮೂರು ಅಡಿ, ಮೋದಿ ಆರು ಅಡಿ. ರಾಮನಿಗಿಂತ ಮೋದಿ ದೊಡ್ಡವರು ಎಂದು ಬಿಜೆಪಿಯವರು ತೋರಿಸಿ ಬಿಟ್ಟಿದ್ದಾರೆ. ರಾಮನ ಕೈ ಹಿಡಿದು ಮೋದಿ ಕರೆದುಕೊಂಡು ಹೋಗುತ್ತಾರೆ. ಪಾಪ.. ರಾಮನಿಗೆ ದಾರಿ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
)
)
;Resize=(128,128))
;Resize=(128,128))
;Resize=(128,128))