ಪರಿಷತ್ ಚುನಾವಣೆಯಲ್ಲಿ ಎರಡು ಸ್ಥಾನ ಗೆಲ್ಲುವ ನಿರೀಕ್ಷೆಯಿತ್ತು. ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ಅಂತೂ ಈ ರೀತಿ ನಿರೀಕ್ಷಿಸಿರಲಿಲ್ಲ. ಮತದಾರರು ಕೊಟ್ಟಿರುವ ಸಂದೇಶವನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಸರಿಪಡಿಸಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು : ಪರಿಷತ್ ಚುನಾವಣೆಯಲ್ಲಿ ಎರಡು ಸ್ಥಾನ ಗೆಲ್ಲುವ ನಿರೀಕ್ಷೆಯಿತ್ತು. ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ಅಂತೂ ಈ ರೀತಿ ನಿರೀಕ್ಷಿಸಿರಲಿಲ್ಲ. ಮತದಾರರು ಕೊಟ್ಟಿರುವ ಸಂದೇಶವನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಸರಿಪಡಿಸಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಮತದಾರರು ಕೊಟ್ಟಿರುವ ತೀರ್ಮಾನ ಗೌರವದಿಂದ ಸ್ವೀಕಾರ ಮಾಡುತ್ತೇವೆ. ನಮ್ಮ ಪಕ್ಷ ಸೋತಿದ್ದರೂ ಮತಗಳು ಚೆನ್ನಾಗಿಯೇ ಬಂದಿವೆ. ಬಿಜೆಪಿ ಮತ್ತು ಜೆಡಿಎಸ್‌ನವರು ಇದು ಭವಿಷ್ಯದ ಮುನ್ಸೂಚನೆ ಎನ್ನುತ್ತಿದ್ದಾರೆ. ಆದರೆ ಚನ್ನಪಟ್ಟಣ ಮತ್ತು ಶಿಗ್ಗಾವಿ ಬಗ್ಗೆ ಏನು ಉತ್ತರ ಕೊಡುತ್ತಾರೆ? ಅದು ಕೂಡ ಮುನ್ಸೂಚನೆಯೇ ಅಲ್ಲವೇ’ ಎಂದು ಪ್ರಶ್ನಿಸಿದರು.
ನಾವು ಕಲಿಯಬೇಕಾದ ವಿಚಾರಗಳಿವೆ. ಈ ಬಗ್ಗೆ ಪರಿಶೀಲಿಸಿ, ನಮ್ಮ ಕಾರ್ಯಕರ್ತರನ್ನು ಹೇಗೆ ತಯಾರು ಮಾಡಬೇಕೆಂಬುದು ತಿಳಿದಿದೆ‘ ಎಂದು ಶಿವಕುಮಾರ್ ಹೇಳಿದರು.
ನವೆಂಬರ್ ಬಳಿಕ ಹೊಸ ಕ್ರಿಯಾಯೋಜನೆ:
ಮತಪತ್ರ ಮೂಲಕ ನಡೆದ ಚುನಾವಣೆಯಲ್ಲೇ ಸೋಲಾಗಿದೆ. ಹೀಗಿದ್ದರೂ ಮತಪತ್ರ ಕೇಳುತ್ತಾರೆಯೇ? ಎಂಬ ಪ್ರತಿಪಕ್ಷಗಳ ಟೀಕೆಗೆ, ‘ಹೌದು, ಮತಪತ್ರದ ಮೂಲಕ ಚುನಾವಣೆಯ ಅಗತ್ಯವಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಹಲವು ಸಮಸ್ಯೆಗಳಿವೆ. ನವೆಂಬರ್ ನಂತರ ನಮ್ಮ ಪಕ್ಷ ಈ ಕುರಿತು ಹೊಸ ಕ್ರಿಯಾ ಯೋಜನೆ ಹೊರತರಲಿದೆ’ ಎಂದು ಮುಖ್ಯಮಂತ್ರಿ ತಿಳಿಸಿದರು.
ಬರ ಪರಿಹಾರಕ್ಕೆ ಖಾತೆ ಪರಿಶೀಲಿಸುತ್ತಿದ್ದೇವೆ:
ಬರ ಪರಿಹಾರ ಹಣ ಬಿಡುಗಡೆ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಸರ್ಕಾರಿ ಆದೇಶ ಹೊರಡಿಸಿ ಹಣ ಬಿಡುಗಡೆ ಮಾಡಲಾಗಿದೆ. ಎಲ್ಲವನ್ನು ಸರಿಪಡಿಸಿ ಖಾತೆಗಳಿಗೆ ಪರಿಹಾರದ ಮೊತ್ತ ಜಮೆ ಮಾಡಲಾಗುವುದು ಎಂದರು.
ಸಿಎಂ ಹೇಳೋದೇನು?
- ಎಂಎಲ್ಸಿ ಚುನಾವಣೆಯಲ್ಲಿ 2 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು
- ಬೆಂಗಳೂರು ಶಿಕ್ಷಕರ ಕ್ಷೇತ್ರ ಸೋಲು ನಿರೀಕ್ಷೆ ಇರಲಿಲ್ಲ
- ಮತದಾರರ ಸಂದೇಶ ಕೂಲಂಕಷ ಅಧ್ಯಯನ ಮಾಡ್ತೇವೆ
- ಹೌದು, ಮತಪತ್ರದ ಮೂಲಕ ಚುನಾವಣೆಯ ಅಗತ್ಯವಿದೆ.
- ಚುನಾವಣಾ ಪ್ರಕ್ರಿಯೆಯಲ್ಲಿ ಹಲವು ಸಮಸ್ಯೆಗಳಿವೆ
- ನವೆಂಬರ್ ನಂತರ ಕಾಂಗ್ರೆಸ್ಸಿಂದ ಹೊಸ ಕ್ರಿಯಾ ಯೋಜನೆ
