ಸಾರಾಂಶ
ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಹಾಲಿನ ದರ, ವಿದ್ಯುತ್ ದರ, ಅಬಕಾರಿ, ಮದ್ರಾಂಕ ಶುಲ್ಕವನ್ನ ಜಾಸ್ತಿ ಮಾಡಿದ್ದಾರೆ.
ಇಷ್ಟೆಲ್ಲಾ ತೆರಿಗೆ ಜಾಸ್ತಿ ಮಾಡಿ ಸರ್ಕಾರದ ಆದಾಯ ಜಾಸ್ತಿ ಮಾಡಿಕೊಂಡಿರುವ ಹಣ ಎಲ್ಲಿ ಹೋಯಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಂದು ಸಂಸದ ಡಾ.ಕೆ.ಸುಧಾಕರ್ ಪ್ರಶ್ನಿಸಿದರು.ಬೆಲೆ ಏರಿಕೆ, ಭ್ರಷ್ಟಾಚಾರ, ಹದಗೆಟ್ಟ ಕಾನೂನು ವ್ಯವಸ್ಥೆಯನ್ನು ಖಂಡಿಸಿ ಜಿಲ್ಲಾ ಬಿಜೆಪಿ ಮತ್ತು ಜೆಡಿಎಸ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಗರದ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡಿಲ್ಲ. ಇದರ ಪರಿಣಾಮ ಖಜಾನೆ ಖಾಲಿಯಾಗಿ ತೈಲ ದರ ಏರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲ ವಸ್ತುಗಳಿಗೂ ತೆರಿಗೆ
ಮದ್ಯ, ಸ್ಟಾಂಪ್ ಡ್ಯೂಟಿ, ವಿದ್ಯುತ್, ಹಾಲಿನ ದರ ಸೇರಿದಂತೆ ಹಲವಾರು ದರಗಳನ್ನು ಕಾಂಗ್ರೆಸ್ ಸರ್ಕಾರ ಏರಿಕೆ ಮಾಡಿದೆ. ಈಗ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ಬಡವರ ಜೀವನದ ಮೇಲೆ ಕೊಡಲಿ ಪೆಟ್ಟು ಕೊಟ್ಟಿದ್ದಾರೆ. ಉಚಿತ ಕೊಡುತ್ತೇವೆಂದು ಹೇಳಿ ದುಪ್ಪಟ್ಟು ತೆರಿಗೆ ವಸೂಲಿ ಮಾಡಲಾಗುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ ಮುಖ್ಯಮಂತ್ರಿಯವರು ಕೇಂದ್ರ ಸರ್ಕಾರವನ್ನ ದೂರುವ ಕೆಲಸ ಮಾಡುತ್ತಿದ್ದಾರೆ. ಅವರ ಹುಳುಕನ್ನ ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದರು.
ಈಗ ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡ್ತಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿ ಹಣ ಆಂಧ್ರಪ್ರದೇಶದ ಚುನಾವಣೆಗೆ ಹೋಗಿದೆ. ಅದೂ ಸಹ ಬೇನಾಮಿ ಖಾತೆ ಮುಖಾಂತರ ಹೋಗಿದೆ ಮತ್ತು ಕೋಟಿ ಕೋಟಿ ಬೆಲೆಯ ದುಬಾರಿ ಲ್ಯಾಂಬರ್ಗಿನಿ ಕಾರಾಗಿ ಮಾರ್ಪಟ್ಟಿದೆ. ಮುಖ್ಯಮಂತ್ರಿಗಳೇ ತಾವೇ ರಾಜ್ಯದ ಹಣಕಾಸು ಮಂತ್ರಿಯಾಗಿದ್ದೀರಿ, ಭ್ರಷ್ಟಾಚಾರದಬಗ್ಗೆ ಮಾತನಾಡೋಕೆ ನಿಮಗೆ ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು.ದರ ಹೆಚ್ಚಳದಿಂದ ರೈತರಿಗೆ ಅನ್ಯಾಯ
ಕೇಂದ್ರ ಸರ್ಕಾರವನ್ನ ದೂಷಿಸುತ್ತೀರಿ. ನಾವು ಪ್ರತಿಭಟನೆ ಮಾಡುತ್ತಿದ್ದರೆ ನಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತೀರಿ. ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದ ರೈತರಿಗೆ ಅನ್ಯಾಯವಾಗುತ್ತಿದೆ. ರಾಜ್ಯದಲ್ಲಿ ಈಗ ಉತ್ತಮ ಮಳೆಯಾಗುತ್ತಿದೆ. ರೈತರು ಟ್ರ್ಯಾಕ್ಟರ್, ಟಿಲ್ಲರ್, ಪಂಪ್ ಸೆಟ್ ಗಳನ್ನ ಉಪಯೋಗಿಸುತ್ತಿದ್ದಾರೆ. ಒಂದು ಲೀಟರ್ ಡೀಸೆಲ್ ಮೇಲೆ ಮೂರು ಮೂರುವರೆ ರುಪಾಯಿ ಜಾಸ್ತಿ ಮಾಡಿದರೆ, ಅದರ ಹೊರೆ ರೈತರ ಮೇಲೆ ಬೀಳೋದಿಲ್ವೆ. ಜನ ಸಾಮಾನ್ಯರ ಮೇಲೆ ಹೊರೆ ಆಗಲ್ವಾ, ಕಳೆದ ಒಂದು ವರ್ಷದಲ್ಲಿ ಯಾವುದೇ ಕ್ಷೇತ್ರದ ಅಭಿವೃದ್ಧಿಗೂ ಹಣ ಕೊಟ್ಟಿಲ್ಲ ಎಂದರು.
ರಾಜ್ಯದಲ್ಲಿ ಆರ್ಥಿಕ ಸಂಕಷ್ಟ
ಅಭಿವೃದ್ಧಿ ಮಾಡೋಕೆ ಕೇಂದ್ರ ಸರ್ಕಾರದಿಂದ ಹಣ ಬಂದಿಲ್ಲ ಅಂತಾ ಹೇಳುತ್ತಾರೆ. ಹಾಗಾದರೆ ರಾಜ್ಯ ಸರ್ಕಾರದ ಆದಾಯವನ್ನ ಏನ್ ಮಾಡುತ್ತಿದ್ದೀರಾ. ಬಿಜೆಪಿ ಸರ್ಕಾರದಿಂದ ಅಧಿಕಾರದಿಂದ ಕೆಳಗಿಳಿಯುವ ಸಂದರ್ಭದಲ್ಲಿ ರಾಜ್ಯದ ಆದಾಯ ಅಧಿಕವಿತ್ತು ಆ ಹಣವನ್ನು ಏನು ಮಾಡಿದಿರಿ, ಆದಾಯ ಹೆಚ್ಚಳವಿದ್ದ ಕರ್ನಾಟಕದಲ್ಲಿ ಕಳೆದ ಒಂದು ವರ್ಷದಲ್ಲಿ ಯಾವ ರೀತಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
ಅತೀ ಹೆಚ್ಚು ಬಜೆಟ್ ಮಂಡಿಸಿರುವ ಅನುಭವಿ ಮುಖ್ಯಮಂತ್ರಿ ಇದ್ದೀರಿ ಎಂದು ಮುಖ್ಯ ಮಂತ್ರಿಗಳನ್ನು ಪ್ರಶ್ನಿಸಿದರು.ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು,ಮಾಜಿ ಶಾಸಕರಾದ ಎಂ.ಶಿವಾನಂದ್,ಎಂ.ರಾಜಣ್ಣ,ಜಿಲ್ಲಾ ಬಿಜೆಪಿ ಅಧ್ಯಕ್ಷ ಡಿ.ವಿ.ರಾಮಲಿಂಗಪ್ಪ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುಕ್ತ ಮುನಿಯಪ್ಪ,ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ, ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಬಿ.ಎಂ.ರಾಮಸ್ವಾಮಿ, ನಗರಸಭಾ ಮಾಜಿ ಅಧ್ಯಕ್ಷರಾದ ಆನಂದಬಾಬುರೆಡ್ಡಿ, ಮಂಜುನಾಥ್, ಮುನಿಕೃಷ್ಣ, ಲೀಲಾವತಿ ಶ್ರೀನಿವಾಸ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ನಾರಾಯಣಗೌಡ, ಜೆಡಿಎಸ್ ಮಹಿಳಾ ಜಿಲ್ಲಾಧ್ಯಕ್ಷೆ ಪ್ರಭ ನಾರಾಯಣಗೌಡ, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ.ಅಧ್ಯಕ್ಷ ಕೃಷ್ಣಮೂರ್ತಿ,ಮುಖಂಡರಾದ ಮರಳಕುಂಟೆ ಕೃಷ್ಣಮೂರ್ತಿ, ವೇಣುಗೋಪಾಲ್, ಮತ್ತಿತರರು ಇದ್ದರು.